ರೈತರ ಮೇಲೆ ಪೊಲೀಸ್ ದೌರ್ಜನ್ಯ ಖಂಡಿಸಿ ಬೃಹತ್ ಪ್ರತಿಭಟನೆ

KannadaprabhaNewsNetwork |  
Published : Jun 30, 2026, 02:15 AM IST
ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ (ನಾರಾಯಣರಡ್ಡಿ ಬಣ) ವತಿಯಿಂದ ಸೋಮವಾರ ಯಲಬುರ್ಗಾದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಯಿತು. | Kannada Prabha

ಸಾರಾಂಶ

ವಿವಿಧ ರೈತಪರ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಹಾಗೂ ರೈತರ ಮೇಲಿನ ಪೊಲೀಸ್ ದೌರ್ಜನ್ಯ ಖಂಡಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ (ನಾರಾಯಣರಡ್ಡಿ ಬಣ) ವತಿಯಿಂದ ಸೋಮವಾರ ಪಟ್ಟಣದಲ್ಲಿ ಬೃಹತ್ ಪ್ರತಿಭಟನೆ ಹಾಗೂ ಮುಷ್ಕರ ನಡೆಸಲಾಯಿತು.

ಯಲಬುರ್ಗಾ: ವಿವಿಧ ರೈತಪರ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಹಾಗೂ ರೈತರ ಮೇಲಿನ ಪೊಲೀಸ್ ದೌರ್ಜನ್ಯ ಖಂಡಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ (ನಾರಾಯಣರಡ್ಡಿ ಬಣ) ವತಿಯಿಂದ ಸೋಮವಾರ ಪಟ್ಟಣದಲ್ಲಿ ಬೃಹತ್ ಪ್ರತಿಭಟನೆ ಹಾಗೂ ಮುಷ್ಕರ ನಡೆಸಲಾಯಿತು.

ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದ ರೈತರು, ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಬಳಿಕ ತಹಸೀಲ್ದಾರ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.

ರೈತ ಸಂಘದ ರಾಜ್ಯ ಉಪಾಧ್ಯಕ್ಷ ಅಂದಪ್ಪ ಹುರಳಿ ಮಾತನಾಡಿ, ವಿದ್ಯುತ್ ಕ್ಷೇತ್ರದ ಖಾಸಗೀಕರಣವನ್ನು ಕೂಡಲೇ ರದ್ದುಪಡಿಸಬೇಕು. ವಿದ್ಯುತ್ ಟವರ್ ಹಾಗೂ ಕಾರಿಡಾರ್ ಯೋಜನೆಗಳಿಂದ ರೈತರಿಗೆ ಆಗುತ್ತಿರುವ ಅನ್ಯಾಯ ತಡೆದು, ಜಮೀನು ಕಳೆದುಕೊಳ್ಳುವ ರೈತರಿಗೆ ಸಮರ್ಪಕ ಪರಿಹಾರ ನೀಡಬೇಕು. ರೈತರ ಸಂಪೂರ್ಣ ಸಾಲಮನ್ನಾ ಮಾಡಬೇಕು. ಬರ ಪರಿಹಾರವಾಗಿ ಪ್ರತಿ ಎಕರೆಗೆ ₹೫೦ ಸಾವಿರ ನೀಡಬೇಕು. ರೈತರ ಮೇಲಿನ ಪೊಲೀಸ್ ದೌರ್ಜನ್ಯವನ್ನು ಕೂಡಲೇ ನಿಲ್ಲಿಸಿ, ರೈತರ ವಿರುದ್ಧ ದಾಖಲಿಸಿರುವ ಪ್ರಕರಣಗಳನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿದರು.

ರೈತರ ಮೇಲೆ ನಡೆಯುತ್ತಿರುವ ಪೊಲೀಸ್ ದೌರ್ಜನ್ಯವನ್ನು ಪ್ರತಿಭಟನಾಕಾರರು ತೀವ್ರವಾಗಿ ಖಂಡಿಸಿದರು. ರೈತರ ಸಮಸ್ಯೆಗಳನ್ನು ಬಗೆಹರಿಸುವ ಬದಲು ಅವರ ಧ್ವನಿಯನ್ನು ಹತ್ತಿಕ್ಕುವ ಪ್ರಯತ್ನ ನಡೆಯುತ್ತಿದೆ ಎಂದು ಆರೋಪಿಸಿದ ಅವರು, ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಮಧ್ಯಪ್ರವೇಶಿಸಿ ರೈತರಿಗೆ ನ್ಯಾಯ ಒದಗಿಸಬೇಕು. ಪೊಲೀಸ್ ದೌರ್ಜನ್ಯಕ್ಕೆ ಕಾರಣರಾದ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಟೊರೆಂಟೋ ಕಂಪನಿಯು ತಳಕಲ್‌ನಿಂದ ಕವಲೂರು ವರೆಗೆ ನಿರ್ಮಿಸಿರುವ ವಿದ್ಯುತ್ ಟವರ್‌ಗಳಿಗೆ ಪ್ರತಿ ಟವರ್‌ಗೆ ₹1 ಕೋಟಿ ಹಾಗೂ ಕಾರಿಡಾರ್‌ಗೆ ಪ್ರತಿ ಮೀಟರ್‌ಗೆ ₹500 ಪರಿಹಾರ ನೀಡಿದೆ. ಟಾಟಾ ಕಂಪನಿಯು ಪ್ರತಿ ಟವರ್‌ಗೆ ₹18 ಲಕ್ಷ ಹಾಗೂ ಕಾರಿಡಾರ್‌ಗೆ ಪ್ರತಿ ಮೀಟರ್‌ಗೆ ₹500 ನೀಡಿದೆ. ಆದರೆ ಇನ್ನೂ ಹಲವು ಕಂಪನಿಗಳು ರೈತರಿಗೆ ಸಮರ್ಪಕ ಪರಿಹಾರ ನೀಡದೇ ವಂಚಿಸುತ್ತಿವೆ ಎಂದು ಆರೋಪಿಸಿದರು.

ಸೋಲಾರ್, ವಿಂಡ್ ಪವರ್ ಹಾಗೂ ವಿದ್ಯುತ್ ಟವರ್‌ಗಳಿಗಾಗಿ ರೈತರ ಜಮೀನು ಪಡೆಯುವ ಸಂದರ್ಭದಲ್ಲಿ ಸೂಕ್ತ ಪರಿಹಾರ ಮತ್ತು ನ್ಯಾಯಸಮ್ಮತ ನಿಯಮಗಳನ್ನು ಸರ್ಕಾರ ಜಾರಿಗೆ ತರಬೇಕು. ಇಲ್ಲದಿದ್ದರೆ ಕೃಷಿಭೂಮಿ ಕಡಿಮೆಯಾಗಿ ಆಹಾರದ ಅಭಾವ ಎದುರಾಗುವ ಪರಿಸ್ಥಿತಿ ನಿರ್ಮಾಣವಾಗಬಹುದು ಎಂದು ಎಚ್ಚರಿಸಿದರು.

ಮುಖಂಡರಾದ ವಜೀರಸಾಬ ತಳಕಲ್, ಈಶಪ್ಪ ಸಬರದ, ಭೀಮಣ್ಣ ಬಂಡಿ, ಶರಣಪ್ಪ ಚೆಂಡೂರು, ಬಸವರಾಜ ಸಬರದ, ಬಸಪ್ಪ ಮಂಡಲಗಿರಿ ಹಾಗೂ ರೈತ ಮಹಿಳೆಯರು, ನೂರಾರು ರೈತರು ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಾಮಾಪುರ ಗ್ರಾಮ ಪಂಚಾಯಿತಿ ಮೇಲೆ ಲೋಕಾಯುಕ್ತ ದಾಳಿ
ಮತದಾರರ ಸಂವಿಧಾನಬದ್ಧ ಹಕ್ಕು ರಕ್ಷಣೆಗೆ ಶ್ರಮಿಸಿ: ಮಿಥುನ್ ಪಾಟೀಲ