ಟನ್‌ ಕಬ್ಬಿಗೆ ಕನಿಷ್ಠ 3500 ರು. ನಿಗದಿ ಮಾಡುವಂತೆ ಒತ್ತಾಯಿಸಿ ಬೃಹತ್ ಪ್ರತಿಭಟನೆ

KannadaprabhaNewsNetwork |  
Published : Nov 09, 2025, 02:00 AM IST
8ಕೆಎಂಎನ್ ಡಿ17 | Kannada Prabha

ಸಾರಾಂಶ

ಕೃಷಿ ಬೆಲೆ ಆಯೋಗ ಒಂದು ಟನ್ ಕಬ್ಬು ಬೆಳೆಯಲು 4.500 ವೆಚ್ಚವಾಗುತ್ತಿದೆ ಎಂದು ರಾಜ್ಯ ಮತ್ತು ಕೇಂದ್ರ ಸರ್ಕಾರಗಳಿಗೆ ವರದಿ ನೀಡಿದೆ. ಆದರೆ, ಕೇಂದ್ರ ಸರ್ಕಾರ ಟನ್ ಕಬ್ಬಿಗೆ 3,550 ರು. ನಿಗದಿ ಮಾಡಿ ಆದೇಶ ಹೊರಡಿಸಿದೆ. ಈ ದರ ಅವೈಜ್ಞಾನಿಕವಾಗಿದೆ. ಕೂಡಲೇ 5000 ನಿಗದಿ ಮಾಡುವಂತೆ ಆಗ್ರಹ

ಕನ್ನಡಪ್ರಭ ವಾರ್ತೆ ಮದ್ದೂರು

ಪ್ರತಿ ಟನ್ ಕಬ್ಬಿಗೆ ಕಟಾವು ಮತ್ತು ಸಾಗಾಣಿಕೆ ಕೂಲಿ ಬಿಟ್ಟು ಕನಿಷ್ಠ 3500 ರು. ನಿಗದಿಗಾಗಿ ಉತ್ತರ ಕರ್ನಾಟಕದ ರೈತರು ಒಂದು ವಾರದಿಂದ ಅಹೋರಾತ್ರಿ ಧರಣಿ ನಡೆಸುತ್ತಿದ್ದರೂ ಸಹ ರಾಜ್ಯ ಸರ್ಕಾರದ ನಿರ್ಲಕ್ಷ್ಯ ಧೋರಣೆ ವಿರೋಧಿಸಿ ತಾಲೂಕಿನ ರೈತ ಸಂಘದ ಕಾರ್ಯಕರ್ತರು ಶನಿವಾರ ಪಟ್ಟಣದಲ್ಲಿ ರಸ್ತೆ ತಡೆ ಮಾಡಿ ಬೃಹತ್ ಪ್ರತಿಭಟನೆ ನಡೆಸಿದರು.

ರೈತರ ದಿಢೀರ್ ಪ್ರತಿಭಟನೆಯಿಂದಾಗಿ ಬೆಂಗಳೂರು- ಮೈಸೂರು ರಾಷ್ಟ್ರೀಯ ಹೆದ್ದಾರಿಯ ಸರ್ವಿಸ್ ರಸ್ತೆಯಲ್ಲಿ ಸುಮಾರು ಅರ್ಧ ಗಂಟೆಗೂ ಹೆಚ್ಚು ಕಾಲ ವಾಹನ ಸಂಚಾರಕ್ಕೆ ಅಡ್ಡಿ ಉಂಟಾಗಿತ್ತು. ರೈತ ಸಂಘದ ತಾಲೂಕು ಅಧ್ಯಕ್ಷ ಎಚ್.ಜಿ. ಪ್ರಭುಲಿಂಗ ನೇತೃತ್ವದಲ್ಲಿ ಕೊಪ್ಪ, ಕೆ.ಎಂ.ದೊಡ್ಡಿ, ಬೆಸಗರಹಳ್ಳಿ, ಕೆಸ್ತೂರು ಸೇರಿದಂತೆ ವಿವಿಧ ಭಾಗಗಳಿಂದ ಆಗಮಿಸಿದ್ದ ರೈತರು ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.

ಕೃಷಿ ಬೆಲೆ ಆಯೋಗ ಒಂದು ಟನ್ ಕಬ್ಬು ಬೆಳೆಯಲು 4.500 ವೆಚ್ಚವಾಗುತ್ತಿದೆ ಎಂದು ರಾಜ್ಯ ಮತ್ತು ಕೇಂದ್ರ ಸರ್ಕಾರಗಳಿಗೆ ವರದಿ ನೀಡಿದೆ. ಆದರೆ, ಕೇಂದ್ರ ಸರ್ಕಾರ ಟನ್ ಕಬ್ಬಿಗೆ 3,550 ರು. ನಿಗದಿ ಮಾಡಿ ಆದೇಶ ಹೊರಡಿಸಿದೆ. ಈ ದರ ಅವೈಜ್ಞಾನಿಕವಾಗಿದೆ. ಕೂಡಲೇ 5000 ನಿಗದಿ ಮಾಡುವಂತೆ ಆಗ್ರಹಿಸಿದರು.

ಕಬ್ಬು ಆಧಾರಿತ ಉಪ ಉತ್ಪನ್ನಗಳಾದ ವಿದ್ಯುತ್, ಎಥನಾಲ್, ಮಾಲಾ ಸಿಸ್, ಪೇಸ್ ಸ್ಮಡ್ ಇತ್ಯಾದಿಗಳಿಂದ ಪ್ರತಿ ಟನ್ ಕಬ್ಬಿಗೆ ಸರಾಸರಿ 8 ರಿಂದ 10 ಸಾವಿರ ಆದಾಯ ಗಳಿಸುವ ಸಕ್ಕರೆ ಕಾರ್ಖಾನೆಗಳು ಇವುಗಳ ಲಾಭಾಂಶದಲ್ಲಿ ಶೇ.50ರಷ್ಟು ವಂತಿಗೆ ಸಿಗುವಂತೆ ಕ್ರಮ ವಹಿಸಬೇಕು ಎಂದು ಸಲಹೆ ನೀಡಿದರು.

ಕಬ್ಬು ಕಟಾವಾದ 14 ದಿನದೊಳಗೆ ಕಾರ್ಖಾನೆಗಳು ರೈತರ ಬ್ಯಾಂಕ್ ಖಾತೆಗೆ ಕಬ್ಬಿನ ಹಣ ಪಾವತಿ ಮಾಡಬೇಕು ಎಂದು ನಿಯಮವಿದ್ದರೂ ಆಡಳಿತ ಮಂಡಳಿ ಹಣ ಪಾವತಿ ಮಾಡದೆ ವಿಳಂಬ ನೀತಿ ಅನುಸರಿಸುತ್ತಿದ್ದಾರೆ ಎಂದರು.

ಕಾರ್ಖಾನೆಗಳಲ್ಲಿ ಕಬ್ಬಿನ ತೂಕ ಯಂತ್ರದಲ್ಲಿ ಮೋಸ ಮತ್ತು ಲೋಪಗಳು ಕಂಡು ಬರುತ್ತಿವೆ ಎಂಬ ದೂರುಗಳು ಸಾಮಾನ್ಯವಾಗಿದೆ. ಈ ಬಗ್ಗೆ ಸರ್ಕಾರವೇ ಎಪಿಎಂಸಿ ಅಧೀನದಲ್ಲಿ ತೂಕದ ಯಂತ್ರಗಳು ಅಳವಡಿಸಿ ನಿರ್ವಹಣೆ ಮಾಡಬೇಕು ಎಂದು ಆಗ್ರಹಿಸಿದರು.

ರೈತ ಮುಖಂಡ ಅಣ್ಣೂರು ಮಹೇಂದ್ರ ಮಾತನಾಡಿ, ಕಬ್ಬುದರ ನಿಗದಿಗೆ ಸಂಬಂಧಪಟ್ಟಂತೆ ರೈತರು ಕಳೆದ ಕೆಲವು ದಿನಗಳಿಂದ ನಿರಂತರವಾಗಿ ಚಳವಳಿ ನಡೆಸುತ್ತಿದ್ದರು ಮಠಾಧೀಶರು ರೈತರ ನೆರವಿಗೆ ಧಾವಿಸಿಲ್ಲ. ಕೂಡಲೇ ಹೋರಾಟಕ್ಕೆ ಬೆಂಬಲ ನೀಡಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಕೆ.ಟಿ.ಪುಟ್ಟಸ್ವಾಮಿ, ಮಲ್ಲೇಶ, ವೆಂಕಟೇಶ್, ಸಿದ್ದೇಗೌಡ, ಅಂದಾನಿಗೌಡ, ಮರಿಲಿಂಗಯ್ಯ, ಜಯರಾಮ ಗುಡಿದೊಡ್ಡಿ, ಶಿವಲಿಂಗಯ್ಯ, ಸೋ.ಶಿ. ಪ್ರಕಾಶ್, ಶಿವಳ್ಳಿ, ಚಂದ್ರು, ಅಣೂರು ಮಹೇಂದ್ರ, ಕೀಳಘಟ್ಟ ನಂಜುಂಡಯ್ಯ, ಕುದುರೆಗುಂಡಿ ನಾಗರಾಜು, ಕಸ್ತೂರಿ ಕರ್ನಾಟಕ ಜನಪರ ವೇದಿಕೆ ವಿ.ಸಿ.ಉಮಾಶಂಕರ್, ತಿಪ್ಪುರು ರಾಜೇಶ್ ಮತ್ತಿತರರು ಭಾಗವಹಿಸಿದ್ದರು.ಕಬ್ಬು ಬೆಲೆ ನಿರ್ಧಾರ ರಾಜ್ಯ ಸರ್ಕಾರದ್ದಲ್ಲ: ಕೆ.ಎಂ.ಉದಯ್

ಮದ್ದೂರು:

ಕಬ್ಬು ಬೆಲೆ ನಿರ್ಧಾರ ಕೇಂದ್ರದ ಜವಾಬ್ದಾರಿಯೆ ಹೊರತು ರಾಜ್ಯ ಸರ್ಕಾರದ್ದಲ್ಲ ಎಂದು ಶಾಸಕ ಕೆ.ಎಂ.ಉದಯ್ ಶನಿವಾರ ಹೇಳಿದರು.

ಪಟ್ಟಣದ ಶಿವಪುರದ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಕಬ್ಬುದ ರನಿಗದಿ ಬಗ್ಗೆ ಆಡಳಿತಾರೂಢ ಸರ್ಕಾರದ ಶಾಸಕರು ಧ್ವನಿ ಎತ್ತುತ್ತಿಲ್ಲ ಎಂದು ರೈತ ಮುಖಂಡರ ಆರೋಪಕ್ಕೆ ಪ್ರತಿಕ್ರಿಯಿಸಿ, ಕಬ್ಬು ದರ ನಿಗದಿ ವಿಚಾರದಲ್ಲಿ ರೈತರು ಸುಖಾ ಸುಮ್ಮನೆ ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡಿದರೆ ಪ್ರಯೋಜನವಿಲ್ಲ ಎಂದರು.

ಪ್ರತಿ ಟನ್ ಕಬ್ಬಿಗೆ ಕೇಂದ್ರ ಎಫ್‌ಆರ್‌ಪಿ ದರ ನಿಗದಿ ಮಾಡುತ್ತದೆ. ರೈತರಿಗೆ ಮೋಸವಾಗದಂತೆ ಏಕರೂಪ ದರ ನಿಗದಿ ಮಾಡಬೇಕು. ದರ ನಿಗದಿ ಮಾಡದಿರುವುದೇ ಎಲ್ಲಾ ಗೊಂದಲಗಳಿಗೆ ಕಾರಣವಾಗಿದೆ. ಕಬ್ಬಿಗೆ ಒಂದೊಂದು ರಾಜ್ಯದಲ್ಲಿ ಒಂದೊಂದು ರೀತಿ ದರವಿದೆ. ಎಲ್ಲಾ ರಾಜ್ಯಗಳು ಏಕರೂಪ ದರ ನಿಗದಿ ಮಾಡಿದರೆ ಇಂತಹ ಸಮಸ್ಯೆಗಳು ಎದುರಾಗುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ದರ ನಿರ್ಧಾರ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಕಾರ್ಖಾನೆ ಮಾಲೀಕರು, ರೈತರ ಜೊತೆ ನಡೆಸಿ ಅಂತಿಮವಾಗಿ ತೀರ್ಮಾನ ಕೈಗೊಳ್ಳುತ್ತಾರೆ. ಶೀಘ್ರ ಸಮಸ್ಯೆ ಬಗೆಹರಿಸುವಂತೆ ಮನವಿ ಮಾಡುತ್ತೇವೆ ಎಂದರು.

ಸುದ್ದಿಗೋಷ್ಠಿಯಲ್ಲಿ ವಿಧಾನ ಪರಿಷತ್ ಸದಸ್ಯ ದಿನೇಶ್ ಗೂಳಿಗೌಡ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಜಿಲ್ಲಾ ಉಪಾಧ್ಯಕ್ಷ ಸ್ಟಾರ್ ಚಂದ್ರು ಇದ್ದರು.

PREV

Recommended Stories

ವಂದೇ ಮಾತರಂ ಭಾರತ ಮಾತೆಯ ಪ್ರೇರಣಾ ಶಕ್ತಿ: ಸಂಸದ ಗದ್ದಿಗೌಡರ
10, 11, ರಂದು ರಾಜ್ಯ ಟ್ರ್ಯಾಕ್‌ ಸೈಕ್ಲಿಂಗ್‌ ತಂಡಗಳ ಆಯ್ಕೆ