ಕನ್ನಡಪ್ರಭ ವಾರ್ತೆ ಸಿಂಧನೂರು
ಕಳೆದ ಮೂರು ದಿನಗಳಿಂದ ಮಿನಿವಿಧಾನ ಸೌಧ ಆವರಣದಲ್ಲಿ ನಡೆಯುತ್ತಿದ್ದ ಅನಿರ್ದಿಷ್ಠಾವಧಿ ಧರಣಿ ಸತ್ಯಾಗ್ರಹವು ಸೋಮವಾರ ‘ಸಿಂಧನೂರು ಬಂದ್’ ಚಳವಳಿಯಾಗಿ ಮಾರ್ಪಟ್ಟಿತು. ಬೆಳಿಗ್ಗೆ 9 ಗಂಟೆಗೆ ರೈತ ಹಾಗೂ ಕ್ರಾಂತಿ ಗೀತೆಗಳೊಂದಿಗೆ ಆರಂಭಗೊಂಡ ಪ್ರತಿಭಟನಾ ಸ್ಥಳಕ್ಕೆ ಪ್ರಗತಿಪರ, ದಲಿತಪರ, ಕನ್ನಡಪರ, ಮಹಿಳಾಪರ ಸಂಘಟನೆಗಳ ಒಕ್ಕೂಟ, ಎಪಿಎಂಸಿ ವರ್ತಕರು, ಕಮ್ಯುನಿಸ್ಟ್ ಪಕ್ಷಗಳ ಮುಖಂಡರು ಬೆಂಬಲಿಸಿ ಭಾಗವಹಿಸಿದ್ದರು. ತದನಂತರ ವಕೀಲರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಎನ್.ರಾಮನಗೌಡ ಸೇರಿದಂತೆ ಪದಾಧಿಕಾರಿಗಳು ಮತ್ತು ಸದಸ್ಯರು ನ್ಯಾಯಾಲಯದ ಕಾರ್ಯಕಲಾಪಗಳನ್ನು ಸ್ಥಗಿತಗೊಳಿಸಿ ಕೋರ್ಟ್‌ನಿಂದಲೇ ಮೆರವಣಿಗೆ ಮೂಲಕ ಬಂದು ಧರಣಿಗೆ ಬೆಂಬಲ ಘೋಷಿಸಿದರು.
ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ ಮಾತನಾಡಿ, ಹಿಂಗಾರು ಹಂಗಾಮಿನಲ್ಲಿ 13,175 ರೈತರಿಂದ ಸುಮಾರು 1.02 ಲಕ್ಷ ಟನ್ ಜೋಳ ಖರೀದಿಸಲು ಈಗಾಗಲೇ ನೊಂದಾಯಿಸಲಾಗಿದೆ. ಆದರೆ ಖರೀದಿ ಪ್ರಕ್ರಿಯೆ ಏಕಾಏಕಿ ನಿಲ್ಲಿಸಿರುವುದು ಖಂಡನೀಯ. ಜೋಳವನ್ನು ಬೆಳೆದು ನಾಲ್ಕು ತಿಂಗಳಾದರೂ ಸರ್ಕಾರ ಇನ್ನೂ ಖರೀದಿ ಮಾಡಿಲ್ಲ. ಈ ನಡುವೆ ಮುಂಗಾರು ಬಿತ್ತನೆ ಪ್ರಕ್ರಿಯೆ ಶುರುವಾಗಿದೆ. ಮತ್ತೊಂದೆಡೆ ಕೃಷಿ ಚಟುವಟಿಕೆಗೆ ಮಾಡಿದ ಸಾಲದ ಮರುಪಾವತಿಗೆ ಬ್ಯಾಂಕ್‍ಗಳು ರೈತರಿಗೆ ನೋಟಿಸ್ ಕೊಡುತ್ತಿದ್ದು, ಇದರಿಂದ ರೈತರಿಗೆ ಕಷ್ಟವಾಗಿದೆ. ಆದ್ದರಿಂದ ಜೂ.4ರ ಸಂಜೆಯೊಳಗೆ ಸರ್ಕಾರ ಜೋಳವನ್ನು ಖರೀದಿಸುವ ಆದೇಶ ಹೊರಡಿಸಬೇಕು ಎಂದು ಆಗ್ರಹಿಸಿದರು.ಸಿಂಧನೂರು, ಮಾನ್ವಿ ತಾಲ್ಲೂಕು ಸೇರಿದಂತೆ ಜಿಲ್ಲೆಯ ಸಾವಿರಾರು ರೈತರು ಬೆಳೆದ ಜೋಳವನ್ನು ಬೆಂಬಲ ಬೆಲೆಯಲ್ಲಿ ಮಾರಾಟ ಮಾಡಲಾಗದೆ ಕಳೆದ ನಾಲ್ಕು ತಿಂಗಳಿನಿಂದ ಸಂಕಷ್ಟ ಎದುರಿಸುತ್ತಿದ್ದಾರೆ. ಮುಂಗಾರು ಹಂಗಾಮಿನಲ್ಲಿ ಬೆಂಬಲ ಬೆಲೆ ಖರೀದಿಯ ಮೂಲಕ 1.30 ಲಕ್ಷ ಟನ್ ಜೋಳ ಖರೀದಿಸಲು 18446 ರೈತರು ಖರೀದಿ ಕೇಂದ್ರಗಳಲ್ಲಿ ನೊಂದಾಯಿಸಿಕೊಂಡಿದ್ದಾರೆ. ಇದರಲ್ಲಿ 1 ಲಕ್ಷ ಟನ್ ಖರೀದಿಸಿ, ಉಳಿದಂತೆ ಎಕರೆಗೆ 10 ಕ್ವಿಂಟಲ್ ನಿಗದಿಗೊಳಿಸಿದ್ದರಿಂದ 4100 ಸಣ್ಣ, ಅತಿಸಣ್ಣ ರೈತರಿಗೆ ಅನ್ಯಾಯವಾಗಿದೆ. ಹಾಗಾಗಿ ಎಕರೆಗೆ 20 ಕ್ವಿಂಟಲ್‍ನಂತೆ ಉಳಿದ ಎಲ್ಲ ಜೋಳವನ್ನು ತಕ್ಷಣ ಖರೀದಿಸಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯ ಪ್ರಧಾನ ಕಾರ್ಯದರ್ಶಿ ಅಮೀನ್ ಪಾಷಾ ದಿದ್ದಿಗಿ ಆಗ್ರಹಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ಮುಖಂಡ ಕೆ.ಕರಿಯಪ್ಪ, ಆರ್‌ಡಿಸಿಸಿ ಬ್ಯಾಂಕ್ ನಿರ್ದೇಶಕ ಸೋಮನಗೌಡ ಬಾದರ್ಲಿ, ಜೆಡಿಎಸ್ ಮುಖಂಡ ಚಂದ್ರು ಭೂಪಾಲ ನಾಡಗೌಡ, ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ಎಂ.ದೊಡ್ಡಬಸವರಾಜ, ಮುಖಂಡರಾದ ಎಂ.ಗಂಗಾಧರ್ ನಾಗರಾಜ ಪೂಜಾರ್, ಬಸವರಾಜ ಬಾದರ್ಲಿ, ಕರೇಗೌಡ ಕುರುಕುಂದಿ, ವೀರಭದ್ರಗೌಡ ಅಮರಾಪುರ, ಅಪ್ಪಣ್ಣ ಕಾಂಬಳೆ, ಬಸವರಾಜ ಏಕ್ಕಿ, ಎಂ.ಲಿಂಗಪ್ಪ ದಢೇಸುಗೂರು, ಟಿ.ಹುಸೇನ ಸಾಬ, ಕೆ.ಜಿಲಾನಿ ಪಾಷಾ, ಹೊನ್ನನಗೌಡ ಬೆಳಗುರ್ಕಿ, ರಮೇಶ ಪಾಟೀಲ್ ಬೇರಿಗಿ ಸೇರಿದಂತೆ ಸಾವಿರಾರು ರೈತರು ಭಾಗವಹಿಸಿದ್ದರು.
ಸಿಂಧನೂರು ಬಂದ್ ಯಶಸ್ವಿ
ಬೆಳಿಗ್ಗೆ 6 ಗಂಟೆಯಿಂದಲೇ ರೈತ ಸಂಘಟನೆಗಳ ಮುಖಂಡರು ಬಸ್ ನಿಲ್ದಾಣ ಸೇರಿದಂತೆ ನಗರದ ರಾಯಚೂರು, ಗಂಗಾವತಿ, ಕುಷ್ಟಗಿ ರಸ್ತೆಗಳಲ್ಲಿ ಬೈಕ್ ರ್ಯಾಲಿ ಮೂಲಕ ಸಂಚರಿಸಿ ಮನವಿ ಮಾಡಿಕೊಂಡ ಹಿನ್ನೆಲೆಯಲ್ಲಿ ಎಲ್ಲ ವ್ಯಾಪಾರಸ್ಥರು ಸ್ವಯಂಪ್ರೇರಿತರಾಗಿ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿಕೊಂಡು ಸಿಂಧನೂರು ಬಂದ್‍ಗೆ ಬೆಂಬಲ ವ್ಯಕ್ತಪಡಿಸಿದರು.
ಆಸ್ಪತ್ರೆಗಳು ಹಾಗೂ ಮೆಡಿಕಲ್ ಶಾಪ್‍ಗಳು ಹೊರತುಪಡಿಸಿ, ಶಾಲಾ-ಕಾಲೇಜುಗಳು, ಎಪಿಎಂಸಿ ಮಾರುಕಟ್ಟೆ, ಹಣ್ಣು ಮತ್ತು ತರಕಾರಿ ಮಾರುಕಟ್ಟೆ, ಬಾರ್ ಆ್ಯಂಡ್ ರೆಸ್ಟೋರೆಂಟ್, ಹೋಟೆಲ್‍ಗಳು ಸೇರಿದಂತೆ ವಿವಿಧ ಬಗೆಯ ವ್ಯವಹಾರ-ವಹಿವಾಟು ಸ್ಥಗಿತಗೊಂಡಿದ್ದವು. ಸರ್ಕಾರಿ ಕಚೇರಿಗಳು ಕಾರ್ಯ ನಿರ್ವಹಿಸಿದವಾದರೂ ಸಾರ್ವಜನಿಕರಿಲ್ಲದೆ ಬಿಕೋ ಎನ್ನುತ್ತಿದ್ದವು. ಬಂದ್ ನೆಪದಲ್ಲಿ ಕೆಲ ಅಧಿಕಾರಿಗಳು ಕಚೇರಿಗೆ ಬಾರದಿರುವುದು ಕಂಡಿತು.
ಮಧ್ಯಾಹ್ನ 4 ಗಂಟೆವರೆಗೆ ಸಿಂಧನೂರು ಬಂದ್ ಚಳವಳಿ ಸಂಪೂರ್ಣವಾಗಿ ಯಶಸ್ವಿಗೊಂಡಿತು. ನಂತರ ಪ್ರತಿಭಟನಾಕಾರರು ಧರಣಿ ಟೆಂಟ್‍ನಿಂದ ಎದ್ದ ಕಾರಣ ವಾಹನಗಳ ಸಂಚಾರ ಆರಂಭವಾಯಿತಾದರೂ ಸುಮಾರು ಒಂದುವರೆ ತಾಸುಗಳ ಕಾಲ ಟ್ರಾಫಿಕ್ ಸುಗಮಗೊಳಿಸಲು ಪೊಲೀಸರು ಹರಸಾಹಸಪಟ್ಟರು. ತದನಂತರ ಪ್ರಮುಖ ರಸ್ತೆಗಳಲ್ಲಿ ಕೆಲ ಅಂಗಡಿ ಮುಂಗಟ್ಟುಗಳು ತೆರೆದುಕೊಂಡವು.