ಅಲೆಮಾರಿ ಸಮುದಾಯಕ್ಕೆ ಶೇ.1 ರಷ್ಟು ಒಳ ಮೀಸಲಾತಿಗಾಗಿ ಇಂದು ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನೆ

KannadaprabhaNewsNetwork |  
Published : Sep 03, 2025, 01:00 AM IST
2ಕೆಎಂಎನ್ ಡಿ15 | Kannada Prabha

ಸಾರಾಂಶ

ಹಂದಿ ಜೋಗಿ ಸಮುದಾಯ ಸೇರಿದಂತೆ 49 ಅತ್ಯಂತ ಹಿಂದುಳಿದ ಸಮುದಾಯಗಳನ್ನು ರಾಜ್ಯ ಸರ್ಕಾರ ಪರಿಶಿಷ್ಟ ಜಾತಿಗೆ ಸೇರಿಸಿದೆ. 49 ಪಂಗಡಗಳ ಜೊತೆಗೆ ಬೋವಿ, ಕೊರಮ, ಕೊರಚ, ಲಂಬಾಣಿ ಮುಂತಾದ ಪರಿಶಿಷ್ಟ ಪಂಗಡದ 10 ಜಾತಿಗಳನ್ನು ಪರಿಶಿಷ್ಟ ಜಾತಿಯ ಗುಂಪಿಗೆ ಸೇರಿಸಿ ಒಟ್ಟು 59 ಜಾತಿಗಳನ್ನು ಪರಿಶಿಷ್ಟ ಜಾತಿಯ ಗುಂಪಿಗೆ ಸೇರಿಸಿದೆ.

ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

ನ್ಯಾಯಮೂರ್ತಿ ನಾಗಮೋಹನ್ ದಾಸ್ ಆಯೋಗದ ಶಿಫಾರಸ್ಸಿನಂತೆ ಅಲೆಮಾರಿ ಸಮುದಾಯಕ್ಕೆ ಶೇ.01ರಷ್ಟು ಒಳ ಮೀಸಲಾತಿ ನೀಡುವಂತೆ ಸೆ.3ರಂದು ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ತಾಲೂಕು ಹಂದಿ ಜೋಗಿ ಸಂಘ ತಿಳಿಸಿತು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಶೇ.1ರಷ್ಟು ಮೀಸಲಾತಿಗಾಗಿ ರಾಜ್ಯ ಸಂಘದಿಂದ ನಾಳೆ ಬೆಂಗಳೂರು ಮಹಾ ನಗರದಲ್ಲಿ ನಡೆಯುವ ಬೃಹತ್ ಪ್ರತಿಭಟನೆ ಸಾವಿರಾರು ಕಾರ್ಯಕರ್ತರು ಭಾಗವಹಿಸಲಿದ್ದಾರೆ ಹೇಳಿದರು.

ಹಂದಿ ಜೋಗಿ ಸಮುದಾಯ ಸೇರಿದಂತೆ 49 ಅತ್ಯಂತ ಹಿಂದುಳಿದ ಸಮುದಾಯಗಳನ್ನು ರಾಜ್ಯ ಸರ್ಕಾರ ಪರಿಶಿಷ್ಟ ಜಾತಿಗೆ ಸೇರಿಸಿದೆ. 49 ಪಂಗಡಗಳ ಜೊತೆಗೆ ಬೋವಿ, ಕೊರಮ, ಕೊರಚ, ಲಂಬಾಣಿ ಮುಂತಾದ ಪರಿಶಿಷ್ಟ ಪಂಗಡದ 10 ಜಾತಿಗಳನ್ನು ಪರಿಶಿಷ್ಟ ಜಾತಿಯ ಗುಂಪಿಗೆ ಸೇರಿಸಿ ಒಟ್ಟು 59 ಜಾತಿಗಳನ್ನು ಪರಿಶಿಷ್ಟ ಜಾತಿಯ ಗುಂಪಿಗೆ ಸೇರಿಸಿದೆ. ಇದರಿಂದ ಅತ್ಯಂತ ಹಿಂದುಳಿದ ಹಂದಿ ಜೋಗಿ ಸಮುದಾಯ ಸೇರಿದಂತೆ ಅಲೆಮಾರಿ ಸಮುದಾಯಗಳಿಗೆ ಅನ್ಯಾಯವಾಗಿದೆ ಎಂದರು.

ಹಂದಿ ಸಾಕಾಣಿಕೆಯನ್ನೆ ಮೂಲ ವೃತ್ತಿಯನ್ನಾಗಿಸಿಕೊಂಡಿರುವ ಹಂದಿ ಜೋಗಿ ಸಮುದಾಯ ಅಲೆಮಾರಿ ವರ್ಗಕ್ಕೆ ಸೇರಿದ್ದು, ಆರ್ಥಿಕವಾಗಿ ಹಿಂದುಳಿದಿದೆ. ನಮ್ಮದು ಅಸಂಘಟಿತ ಸಮುದಾಯ. ಈ ಸಮುದಾಯದ ಯಾವುದೇ ವ್ಯಕ್ತಿ ಸಂಸದ, ರಾಜ್ಯ ಸಭೆ ಸದಸ್ಯ, ಎಂಎಲ್ ಎ ಅಥವಾ ಎಂಎಲ್ಸಿ ಗಳಾಗಿಲ್ಲ. ನಮ್ಮ ಸಮುದಾಯಕ್ಕೆ ಯಾವುದೇ ರಾಜಕೀಯ ಶಕ್ತಿಯಿಲ್ಲ ಎಂದರು.

ಆರ್ಥಿಕ, ಸಾಮಾಜಿಕ ಮತ್ತು ಶೈಕ್ಷಣಿಕವಾಗಿ ನಮ್ಮ ಸಮುದಾಯ ಅತ್ಯಂತ ಕೆಳ ಸ್ಥರದಲ್ಲಿದೆ. ಪರಿಶಿಷ್ಠ ಪಂಗಡಕ್ಕೆ ಸೇರಿದ 10 ಜಾತಿಗಳನ್ನು ಪರಿಶಿಷ್ಠ ಜಾತಿ ಗುಂಪಿಗೆ ಸೇರಿಸಿ ಮೀಸಲಾತಿ ನೀಡುವುದರಿಂದ ಅಲೆಮಾರಿ ಸಮುದಾಯಗಳಿಗೆ ಅನ್ಯಾಯವಾಗಿ ನಮ್ಮ ಮಕ್ಕಳೂ ಶಿಕ್ಷಣ ಮತ್ತು ಉದ್ಯೋಗ ಪಡೆದು ಸಮಾಜದ ಮುಖ್ಯ ವಾಹಿನಿಗೆ ಸೇರಲು ತೊಂದರೆಯಾಗಲಿದೆ ಎಂದರು.

ರಾಜ್ಯ ಸರ್ಕಾರ ನಾಗಮೋಹನ್ ದಾಸ್ ವರದಿಯ ಶಿಫಾರಸ್ಸಿನಂತೆ ಅಲೆಮಾರಿ ಸಮುದಾಯಗಳಿಗೆ ಶೇ.1 ರಷ್ಟು ಒಳ ಮೀಸಲಾತಿ ನೀಡಬೇಕು. ಮೀಸಲಾತಿಗಾಗಿ ನಮ್ಮ ಸಮುದಾಯ ಈಗಾಗಲೇ ರಾಜ್ಯಾದ್ಯಂತ ಹೋರಾಟ ನಡೆಸಿದ್ದು, ಶೇ.1 ಒಳ ಮೀಸಲಾತಿ ದೊರಕುವವರೆಗೂ ನಾವು ನಮ್ಮ ಹೋರಾಟವನ್ನು ನಿಲ್ಲಿಸುವುದಿಲ್ಲ ಎಂದರು.

ಸುದ್ದಿಗೋಷ್ಠಿಯಲ್ಲಿ ತಾಲೂಕು ಹಂದಿ ಜೋಗಿಗಳ ಸಂಘದ ಅಧ್ಯಕ್ಷ ಲಕ್ಷ್ಮೀಪುರ ಸ್ವಾಮಿ, ಉಪಾಧ್ಯಕ್ಷ ಮಾಣಿಕ್ಯನಹಳ್ಳಿ ಶಿವಣ್ಣ, ಗೌರವಾಧ್ಯಕ್ಷ ಸ್ವಾಮಿ, ಕಾರ್ಯದರ್ಶಿ ಸ್ವಾಮಿ ಜೋಗಿ, ಸಹ ಕಾರ್ಯದರ್ಶಿ ವೈ.ಕೃಷ್ಣಯ್ಯ, ಸಹಕಾರ್ಯದರ್ಶಿ ವಿ.ಕಿರಣ್, ಖಜಾಂಚಿ ಎಸ್.ವಿ.ಹೇಮಂತಕುಮಾರ್, ಸಂಚಾಲಕ ಜಗದೀಶ್, ಮಹಿಳಾ ಮುಖಂಡರಾದ ಕಾಳಮ್ಮ, ಗೌರಮ್ಮ, ಲತಾ ಮತ್ತಿತರರು ಇದ್ದರು.

PREV

Recommended Stories

ಉತ್ಪನ್ನ ಗುಣಮಟ್ಟ ಹೆಚ್ಚಿಸಿ ರಫ್ತು ಏರಿಸಿ: ರೆಡ್ಡಿ
ಪ್ಯಾರಾ ಥ್ರೋ ಬಾಲ್: ರಾಜ್ಯ ಮಹಿಳಾ ತಂಡಕ್ಕೆ ಟ್ರೋಫಿ