ಬಂಟ್ವಾಳ: ಬ್ರಹ್ಮರಕೂಟ್ಲು ಟೋಲ್ ಗೇಟ್ ಮುಚ್ಚಲು ಆಗ್ರಹಿಸಿ 3 ರಂದು ಬೆಳಗ್ಗೆ 9ರಿಂದ ಮಧ್ಯಾಹ್ನ 12.30 ರವರೆಗೆ ಸಮಾನ ಮನಸ್ಕ ಸಂಘಟನೆಗಳ ಸಹಭಾಗಿತ್ವದಲ್ಲಿ ‘ಬ್ರಹ್ಮರಕೂಟ್ಲು ಟೋಲ್ ಗೇಟ್ ತೆರವು ಹೋರಾಟ ಸಮಿತಿ’ ನೇತೃತ್ವದಲ್ಲಿ ಸಾಮೂಹಿಕ ಧರಣಿ ನಡೆಯಲಿದೆ ಎಂದು ಮಾಜಿ ಸಚಿವ ಹಾಗೂ ಬ್ರಹ್ಮರಕೂಟ್ಲು ಟೋಲ್ ಗೇಟ್ ತೆರವು ಹೋರಾಟ ಸಮಿತಿ ಗೌರವಾಧ್ಯಕ್ಷ ಬಿ.ರಮಾನಾಥ ರೈ ತಿಳಿಸಿದ್ದಾರೆ.
ಯಾವುದೆ ಬೈಪಾಸ್ ಗಳು, ಮೇಲ್ಸೇತುವೆ, ಕೆಳ ಸೇತುವೆಗಳು, ಸರ್ವೀಸ್ ರಸ್ತೆಗಳು, ಗುಣಮಟ್ಟದ ನಿರ್ವಹಣೆ ಸಹಿತ ಇರಲೇಬೇಕಾದ ಮೂಲಭೂತ ಸೌಲಭ್ಯಗಳು ಇಲ್ಲದ ಸಾಧಾರಣ ಹೂಡಿಕೆಯ ರಸ್ತೆಗೆ 23 ವರ್ಷಗಳ ದೀರ್ಘ ಅವಧಿಗೆ ಟೋಲ್ ಸಂಗ್ರಹ ಮುಂದುವರಿಸುವುದು ಯಾವುದೇ ಕಾರಣಕ್ಕೂ ನ್ಯಾಯಯುತ ಅಲ್ಲ. ಹೂಡಿಕೆ ಮಾಡಿರುವ ಬಂಡವಾಳ, ಸಂಗ್ರಹ ಆಗಿರುವ ಮೊತ್ತದ ವಿವರಗಳೂ ಸಾರ್ವಜನಿಕರಿಗೆ ಲಭ್ಯ ಇಲ್ಲ. ಆರಂಭದ ವರ್ಷಗಳಲ್ಲಿ ಸ್ಥಳೀಯ ವಾಹನಗಳಿಗೆ ನೀಡುತ್ತಿದ್ದ ಉಚಿತ ಓಡಾಟದ ಅವಕಾಶವನ್ನು ಫಾಸ್ಟ್ ಟ್ಯಾಗ್ ಬಂದ ತರುವಾಯ ರದ್ದುಗೊಳಿಸಲಾಗಿದೆ ಎಂದು ತಿಳಿಸಿದರು.ಸಮಾನ ಮನಸ್ಕ ಸಂಘಟನೆಗಳು: ಎಲ್ಲಾ ಸಕಾರಣಗಳನ್ನು ಮುಂದಿಟ್ಟು ಬ್ರಹ್ಮರಕೂಟ್ಲು ಟೋಲ್ ಗೇಟ್ ಅನ್ನು ತಕ್ಷಣ ತೆರವುಗೊಳಿಸಬೇಕು ಎಂಬ ಬೇಡಿಕೆಯೊಂದಿಗೆ ಸಮಾನ ಮನಸ್ಕ ಸಂಘಟನೆಗಳು ಒಂದಾಗಿ ಬ್ರಹ್ಮರಕೂಟ್ಲು ಟೋಲ್ ಗೇಟ್ ತೆರವು ಹೋರಾಟ ಸಮಿತಿ ನೇತೃತ್ವದಲ್ಲಿ ಹೋರಾಟವನ್ನು ನಡೆಸಲು ತೀರ್ಮಾನಿಸಲಾಗಿದೆ. ಈಗಾಗಲೆ ಬಂಟ್ವಾಳ ಸೇರಿದಂತೆ ಜಿಲ್ಲೆಯ ಹಲವಾರು ಸಂಘ ಸಂಸ್ಥೆಗಳು ಟೋಲ್ ತೆರವು ಹೋರಾಟಕ್ಕೆ ಬೆಂಬಲ ಸೂಚಿಸಿವೆ ಎಂದರು.3ರಂದು ಸಾಮೂಹಿಕ ಧರಣಿಯ ಮೂಲಕ ಹೋರಾಟಕ್ಕೆ ಚಾಲನೆ ನೀಡುತ್ತಿದ್ದೇವೆ. ಬ್ರಹ್ಮರಕೂಟ್ಲು ಟೋಲ್ ಗೇಟ್ ತೆರವುಗೊಳ್ಳುವವರೆಗೂ ಹಲವು ಹಂತಗಳಲ್ಲಿ ಹೋರಾಟ ಮುನ್ನಡೆಯಲಿದೆ. ಪಕ್ಷಾತೀತವಾಗಿ ನಡೆಯುವ ಈ ಹೋರಾಟವನ್ನು ನಾಗರಿಕರು, ಸಂಘ ಸಂಸ್ಥೆಗಳು ಬೆಂಬಲಿಸಬೇಕು, ಸಾಮೂಹಿಕ ಧರಣಿಯಲ್ಲಿ ಭಾಗಿಗಳಾಗಬೇಕು ಎಂದು ವಿನಂತಿಸುತ್ತಿದ್ದೇವೆ ಎಂದು ಅವರು ತಿಳಿಸಿದರು.ಟೋಲ್ ಗೇಟ್ ವಿರೋಧಿ ಹೋರಾಟಗಾರ ಮುನೀರ್ ಕಾಟಿಪಳ್ಳ ಮಾತನಾಡಿ, ಸುರತ್ಕಲ್ ಹೋರಾಟದ ಹಾದಿಯಲ್ಲಿ ಬೇರೆ ಬೇರೆ ಸಂಘಟನೆಗಳ ಬೆಂಬಲ ವ್ಯಕ್ತವಾಗುತ್ತಿದ್ದು ಗಂಭೀರ ಸ್ವರೂಪದ ಹೋರಾಟಕ್ಕೆ ನಾವು ಸಿದ್ಧತೆ ನಡೆಸುತ್ತಿದ್ದೇವೆ ಎಂದು ತಿಳಿಸಿದರು.
ಗಂಭೀರವಾದ ನಿಯಮ ಉಲ್ಲಂಘನೆಗಳೊಂದಿಗೆ ಟೋಲ್ ಸಂಗ್ರಹವನ್ನು ಮುಂದುವರಿಸುವುದನ್ನು ಒಪ್ಪಲು ಸಾಧ್ಯವಿಲ್ಲ ಎಂದ ಅವರು ನಿಯಮಗಳನ್ನು ಉಲ್ಲಂಘಿಸಿ ಟೋಲ್ ಕಾರ್ಯಾಚರಿಸುತ್ತಿದ್ದು, ಇದರ ವಿರುದ್ಧ ಕಾನೂನು ಕೈಗೆತ್ತಿಕೊಳ್ಳದೆ ಶಾಂತಿಯುತವಾಗಿ ಹೋರಾಟ ನಡೆಯಲಿದೆ ಎಂದು ತಿಳಿಸಿದರು.ಸಮಿತಿ ಸಂಚಾಲಕ ಬಿ.ಶೇಖರ್, ಮೋಹನ್ ಶೆಟ್ಟಿ, ಪಿಯೂಸ್ ಎಲ್ ರೊಡ್ರಿಗಸ್, ಕೋಶಾಧಿಕಾರಿ ಬೇಬಿಕುಂದರ್ ಉಪಸ್ಥಿತರಿದ್ದರು.