ಕುಷ್ಟಗಿ: 371 (ಜೆ) ಕಲಂನಡಿ ಕಲ್ಯಾಣ ಕರ್ನಾಟಕಕ್ಕೆ ದೊರೆತಿರುವ ಸಂವಿಧಾನಬದ್ಧ ಹಕ್ಕುಗಳನ್ನು ಸಂಪೂರ್ಣವಾಗಿ ಜಾರಿಗೊಳಿಸಬೇಕು. ಶಿಕ್ಷಣ, ಆರೋಗ್ಯ ಹಾಗೂ ಮಾನವ ಅಭಿವೃದ್ಧಿಗೆ ಸರ್ಕಾರ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಒತ್ತಾಯಿಸಿ ಸೆ. 17ರಂದು ಕಲಬುರಗಿಯಲ್ಲಿ ಬೃಹತ್ ಹೋರಾಟ ನಡೆಸಲಾಗುವುದು ಎಂದು ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಹೋರಾಟ ಸಮಿತಿ ಅಧ್ಯಕ್ಷ ಚಾಮರಸ ಮಾಲಿಪಾಟೀಲ ಹೇಳಿದರು.
ಕಲ್ಯಾಣ ಕರ್ನಾಟಕ ಭಾಗಕ್ಕೆ ಸಂವಿಧಾನಾತ್ಮಕವಾಗಿ ದೊರೆತಿರುವ 371(ಜೆ) ವಿಶೇಷ ಸ್ಥಾನಮಾನದ ಆಶಯ ಸಮರ್ಪಕವಾಗಿ ಈಡೇರಬೇಕು. ಈ ಭಾಗದ ಜನರಿಗೆ ಶಿಕ್ಷಣ, ಉದ್ಯೋಗ, ಆರೋಗ್ಯ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಮಾನ ಅವಕಾಶ ದೊರೆಯಬೇಕು. ಆದರೆ, 371(ಜೆ) ಜಾರಿಯಾಗಿ ಹಲವು ವರ್ಷ ಕಳೆದರೂ ಅದರ ಸಂಪೂರ್ಣ ಪ್ರಯೋಜನ ಜನರಿಗೆ ತಲುಪಿಲ್ಲ. ಈ ಹಿನ್ನೆಲೆ ಹೋರಾಟ ಮತ್ತಷ್ಟು ಸಂಘಟಿತವಾಗಿ ಮುಂದುವರಿಸುವ ಅಗತ್ಯವಿದೆ ಎಂದರು.
ಏಳು ಜಿಲ್ಲೆಗಳ ಹೋರಾಟಗಾರರು, ಚಿಂತಕರು ಹಾಗೂ ವಿವಿಧ ಕ್ಷೇತ್ರಗಳ ಪ್ರಮುಖರನ್ನು ಒಗ್ಗೂಡಿಸಿ ನಡೆಸಿದ ಅಧ್ಯಯನ ಶಿಬಿರವು 371(ಜೆ) ಕುರಿತು ಸಮಗ್ರ ಚರ್ಚೆಗೆ ವೇದಿಕೆಯಾಗಿದೆ. ಶಿಬಿರದಲ್ಲಿ ಶಿಕ್ಷಣ, ನೀರಾವರಿ, ಪ್ರಾದೇಶಿಕ ಅಸಮತೋಲನ ಸೇರಿದಂತೆ ಕಲ್ಯಾಣ ಕರ್ನಾಟಕ ಎದುರಿಸುತ್ತಿರುವ ಪ್ರಮುಖ ಸಮಸ್ಯೆಗಳ ಕುರಿತು ಆಳವಾದ ಚರ್ಚೆ ನಡೆದಿದ್ದು, ಮುಂದಿನ ಹೋರಾಟಕ್ಕೆ ಇದು ಮತ್ತಷ್ಟು ಬಲ ನೀಡಿದೆ ಎಂದು ಹೇಳಿದರು.ಮೂರನೇ ಗೋಷ್ಠಿಯಲ್ಲಿ ಕಲ್ಯಾಣ ಕರ್ನಾಟಕದ ಶೈಕ್ಷಣಿಕ ಪರಿಸ್ಥಿತಿ ಮತ್ತು ಪರಿಹಾರೋಪಾಯಗಳು ಕುರಿತು ಧನರಾಜ್ ಗಂಗಾವತಿ ವಿಷಯ ಮಂಡಿಸಿದರು. ಕಲ್ಯಾಣ ಕರ್ನಾಟಕದ ಶೈಕ್ಷಣಿಕ ಹಿಂದುಳಿದಿರುವಿಕೆಗೆ ಕಾರಣ, ಶಿಕ್ಷಣ ಕ್ಷೇತ್ರದಲ್ಲಿ ಎದುರಾಗುತ್ತಿರುವ ಸಮಸ್ಯೆ ಹಾಗೂ ಅವುಗಳ ಪರಿಹಾರೋಪಾಯಗಳ ಕುರಿತು ಚರ್ಚಿಸಲಾಯಿತು. ರಮೇಶ ತುಪ್ಪದ್ ಹಾಗೂ ಪಂಡಿತ್ರಾವ್ ಚಿದ್ರಿ ವಿಷಯಕ್ಕೆ ಸ್ಪಂದಿಸಿದರು. ಜಾನ್ ವೇಸ್ಲಿ ಕಾತರಕಿ ಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದರು.
ಐದನೇ ಗೋಷ್ಠಿಯಲ್ಲಿ ಪ್ರಾದೇಶಿಕ ಅಸಮತೋಲನ ನಿವಾರಣೆ:
ನಾಲ್ಕು ಪ್ರಮುಖ ನಿರ್ಣಯ: 371(ಜೆ) ಕಲಂನ ಸಂಪೂರ್ಣ ಅನುಷ್ಠಾನಕ್ಕಾಗಿ ಹೋರಾಟ ತೀವ್ರಗೊಳಿಸುವ ಉದ್ದೇಶದಿಂದ ಅಧ್ಯಯನ ಶಿಬಿರದಲ್ಲಿ ನಾಲ್ಕು ಪ್ರಮುಖ ನಿರ್ಣಯಗಳನ್ನು ಕೈಗೊಳ್ಳಲಾಯಿತು.
ಸೆ.7ರಂದು ಏಳು ಜಿಲ್ಲೆಗಳ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಏಕಕಾಲದಲ್ಲಿ ಒಂದು ದಿನದ ಧರಣಿ ಸತ್ಯಾಗ್ರಹ ನಡೆಸಲು ತೀರ್ಮಾನಿಸಲಾಯಿತು. ಈ ಮೂಲಕ ಸರ್ಕಾರದ ಗಮನವನ್ನು 371(ಜೆ) ಹಕ್ಕುಗಳ ಸಂಪೂರ್ಣ ಅನುಷ್ಠಾನದತ್ತ ಸೆಳೆಯಲು ಹೋರಾಟಗಾರರು ನಿರ್ಧರಿಸಿದ್ದಾರೆ.
ಏಳು ಜಿಲ್ಲೆಗಳ ಗ್ರಾಮೀಣ ಭಾಗಗಳಲ್ಲಿ ಜಾಗೃತಿ ಜಾಥಾ ಹಾಗೂ ವಿದ್ಯಾರ್ಥಿಗಳಿಂದ ಪ್ರಭಾತ ಫೇರಿ ನಡೆಸಿ 371(ಜೆ) ಅಡಿಯಲ್ಲಿ ಕಲ್ಯಾಣ ಕರ್ನಾಟಕಕ್ಕೆ ದೊರೆತಿರುವ ಹಕ್ಕುಗಳ ಕುರಿತು ಜನರಲ್ಲಿ ಜಾಗೃತಿ ಮೂಡಿಸಲು ನಿರ್ಣಯ ಕೈಗೊಳ್ಳಲಾಯಿತು.