ಕನ್ನಡಪ್ರಭ ವಾರ್ತೆ ಕಾರವಾರ
ಈ ಕುರಿತು ಪ್ರಕಟಣೆ ನೀಡಿರುವ ಅವರು, ಶಾಸನವನ್ನು ಸ್ಥಳದಲ್ಲಿಯೇ ಪರಿಶೀಲಿಸಿ ಹಾಗೂ ಅದರ ಛಾಯಾಚಿತ್ರಗಳನ್ನು ಹಲವು ಬಾರಿ ಅವಲೋಕಿಸಿ ಪ್ರೊ. ಜಿ.ಕೆ. ದೇವರಾಜ ಸ್ವಾಮಿ ಅವರ ಜೊತೆಸೇರಿ ಸಿದ್ಧಪಡಿಸಿದ ಪಾಠದ ಆಧಾರದ ಮೇಲೆ ಲಿಪಿ, ಭಾಷೆ, ಶಿಲ್ಪ ಮತ್ತು ವಿಷಯ ವಸ್ತುಗಳನ್ನು ಪ್ರತ್ಯೇಕವಾಗಿ ಅಧ್ಯಯನ ಮಾಡಲಾಗಿದೆ. ಈ ಎಲ್ಲ ಸಾಕ್ಷ್ಯಗಳನ್ನು ಪರಸ್ಪರ ಹೋಲಿಸಿದಾಗ ಶಾಸನದ ಕಾಲ, ಅದರ ಧಾರ್ಮಿಕ ಉದ್ದೇಶ ಹಾಗೂ ದಾನವ್ಯವಸ್ಥೆಯ ಸ್ವರೂಪ ಸ್ಪಷ್ಟವಾಗುತ್ತದೆ ಎಂದಿದ್ದಾರೆ.
ಶಾಸನದ ಫಲಶ್ರುತಿಯಲ್ಲಿ ದಾನವನ್ನು ಕಾಯುವವರಿಗೆ ಸಾವಿರ ಕಪಿಲೆ ಗೋವುಗಳನ್ನು ದಾನ ಮಾಡಿದ ಪುಣ್ಯ ದೊರೆಯುತ್ತದೆ; ದಾನವನ್ನು ಹಾಳುಮಾಡುವವರಿಗೆ ಗೋವುಗಳನ್ನು ಕದ್ದ ಪಾಪ ತಗಲುತ್ತದೆ ಎಂದು ಹೇಳಲಾಗಿದೆ. ಇದು ಸಾಮಾನ್ಯ ನೀತಿವಾಕ್ಯವಲ್ಲ. ದಾನದ ಆದಾಯವನ್ನು ಬೇರೆಡೆಗೆ ತಿರುಗಿಸುವುದು, ನಿಗದಿತ ಸೇವೆಯನ್ನು ನಿಲ್ಲಿಸುವುದು ಅಥವಾ ಲಿಖಿತ ನಿಯಮ ಬದಲಿಸುವುದರ ವಿರುದ್ಧ ನೀಡಿದ ಕಠಿಣ ಎಚ್ಚರಿಕೆಯಾಗಿದೆ ಎಂದು ತಿಳಿಸಿದ್ದಾರೆ.ಕಡಗೇರಿ ಶಾಸನವು ಕೇವಲ ಒಂದು ದೇವಾಲಯದ ದಾನಶಾಸನವಲ್ಲ. ಆರಂಭಿಕ ಕನ್ನಡ ಲಿಪಿಯ ವಿಕಾಸ, ಹಳೆಗನ್ನಡದ ವ್ಯಾಕರಣ, ಕರಾವಳಿಯ ಕೃಷಿ ಅಳತೆಗಳು, ಬೆಳೆಪಾಲು, ಭೂಮಿ ಮತ್ತು ಹಣದ ದಾನ, ದೇವಾಲಯದ ನಿತ್ಯಸೇವೆ, ಸ್ವಾಧ್ಯಾಯ, ಸ್ಥಳೀಯ ಅಧಿಕಾರಿಗಳು ಹಾಗೂ ಪಟ್ಟೆಗಾರರ ಆಡಳಿತವನ್ನು ಒಂದೇ ದಾಖಲೆಯ ಮೂಲಕ ತಿಳಿಸುತ್ತದೆ. ಮೊದಲ ಸಹಸ್ರಮಾನದ ಉತ್ತರ ಕನ್ನಡ ಜಿಲ್ಲೆಯ ಇತಿಹಾಸವನ್ನು ಕಟ್ಟುವಲ್ಲಿ ಈ ಶಾಸನ ಪ್ರಮುಖ ಆಧಾರವಾಗಿದೆ ಎಂದು ಶ್ಯಾಮಸುಂದರ ಗೌಡ ವಿವರಿಸಿದ್ದಾರೆ.