ಕಾರಟಗಿ: ಗಂಗಾವತಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಹಾಗೂ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ತಾಲೂಕು ಘಟಕ ಸಹಯೋಗದಲ್ಲಿ ಇಲ್ಲಿನ ಕೆಪಿಎಸ್ ಶಾಲೆಯಲ್ಲಿ ಗುರು ಸ್ಪಂದನ ಕಾರ್ಯಕ್ರಮ ನಡೆಯಿತು.
ಪ್ರಾಸ್ತಾವಿಕವಾಗಿ ಮಾತನಾಡಿದ ಇಲಾಖೆಯ ವ್ಯವಸ್ಥಾಪಕ ಶಿವಪ್ರಸಾದ್ , ನೌಕರರ ಸೇವಾ ಪುಸ್ತಕದಲ್ಲಿನ ಸಣ್ಣ ನಿಷ್ಕಾಳಜಿ ಮುಂದೆ ನೌಕರರಿಗೆ ಹಾಗೂ ಅವರ ಕುಟುಂಬದ ಅವಲಂಭಿತರಿಗೆ ತೀವ್ರ ತೊಂದರೆ ಉಂಟು ಮಾಡುವ ಸಾಧ್ಯತೆಯಿದೆ. ಆದ್ದರಿಂದ ಶಿಕ್ಷಕರ ಸಂಘ ಹಾಗೂ ಶಿಕ್ಷಣ ಇಲಾಖೆ ಹಮ್ಮಿಕೊಳ್ಳುವ ಇಂತಹ ಕಾರ್ಯಕ್ರಮಗಳಲ್ಲಿ ಪ್ರತಿಯೊಬ್ಬ ಶಿಕ್ಷಕರೂ ಭಾಗವಹಿಸಿ ತಮ್ಮ ಸೇವೆಗೆ ಸಂಬಂಧಿಸಿದ ಮಾಹಿತಿ ಸಮಗ್ರವಾಗಿ ತಿಳಿದುಕೊಳ್ಳಬೇಕು ಎಂದರು.
ನಾಮಿನಿ ವಿವರ, ವೇತನ ಬಡ್ತಿ, ಇಂಕ್ರಿಮೆಂಟ್, ವರ್ಗಾವಣೆ, ಸೇವಾ ವಿವರ ಸೇರಿದಂತೆ ಸೇವೆಗೆ ಸಂಬಂಧಿಸಿದ ಹಲವು ಮಾಹಿತಿಗಳ ಕುರಿತು ಶಿಕ್ಷಕರಿಗೆ ಇರುವ ಗೊಂದಲ ಇಲಾಖೆಯ ಅಧಿಕಾರಿಗಳಿಂದ ಖಚಿತಪಡಿಸಿಕೊಂಡು ಅಗತ್ಯ ಸಮಸ್ಯೆ ಪರಿಹರಿಸಿಕೊಳ್ಳಲು ಗುರು ಸ್ಪಂದನ ಕಾರ್ಯಕ್ರಮವು ಸೂಕ್ತ ವೇದಿಕೆಯಾಗಿದೆ ಎಂದು ಹೇಳಿದರು.ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಅಧ್ಯಕ್ಷ ಅಮರೇಶ್ ಮೈಲಾಪುರ ಮಾತನಾಡಿ, ತಾಲೂಕಿನ ಶಿಕ್ಷಕರ ಬೇಡಿಕೆಯಂತೆ ಶಿಕ್ಷಣ ಇಲಾಖೆಯ ಮಾರ್ಗದರ್ಶನ ಹಾಗೂ ಸಹಕಾರದೊಂದಿಗೆ ಗುರು ಸ್ಪಂದನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಶಿಕ್ಷಕರ ಬಳಿಗೆ ಇಲಾಖೆಯೇ ಆಗಮಿಸಿ ಸೇವಾ ಸಂಬಂಧಿತ ಸಮಸ್ಯೆಗಳಿಗೆ ಸ್ಥಳದಲ್ಲಿಯೇ ಪರಿಹಾರ ಹಾಗೂ ಸೂಕ್ತ ಮಾರ್ಗದರ್ಶನ ನೀಡುತ್ತಿರುವುದು ಈ ಕಾರ್ಯಕ್ರಮದ ವಿಶೇಷತೆ ಎಂದರು.
ಕಾರ್ಯಕ್ರಮದಲ್ಲಿ ಕೆಪಿಎಸ್ ಉಪಪ್ರಾಂಶುಪಾಲ ಶರಣಪ್ಪ ಸೋಮಲಾಪುರ, ಇಲಾಖೆಯ ಸೂಪರಿಂಟೆಂಡೆಂಟ್ ಮಂಜುನಾಥ, ಸಂಯೋಜಕ ರಾಘವೇಂದ್ರ ಹಾಗೂ ಶಶಿಧರ ಸ್ವಾಮಿ, ವಿಷಯ ನಿರ್ವಾಹಕ ಪಂಕಜ, ಖಾದರ್ ಬಿ., ಪದ್ಮ ಹಾಗೂ ಯಂಕಪ್ಪ, ಇಲಾಖೆಯ ಸಿಬ್ಬಂದಿ ಉಪಸ್ಥಿತರಿದ್ದರು.
ತಾಲೂಕಿನ ವಿವಿಧ ಶಾಲೆಗಳಿಂದ ಆಗಮಿಸಿದ ಶಿಕ್ಷಕರು ಕಾರ್ಯಕ್ರಮದಲ್ಲಿ ಭಾಗವಹಿಸಿ ತಮ್ಮ ಸೇವಾ ಪುಸ್ತಕ ಹಾಗೂ ಸೇವೆಗೆ ಸಂಬಂಧಿಸಿದ ವಿವಿಧ ಮಾಹಿತಿ ಪರಿಶೀಲಿಸಿಕೊಂಡರು.