ಬಾಂಗ್ಲಾದಲ್ಲಿ ಹಿಂದೂಗಳ ಮೇಲಿನ ದೌರ್ಜನ್ಯ ಖಂಡಿಸಿ ಇಂದು ಬೃಹತ್‌ ಪ್ರತಿಭಟನೆ

KannadaprabhaNewsNetwork |  
Published : Dec 05, 2024, 12:31 AM IST
4ಎಚ್‌ಪಿಟಿ1- ಹೊಸಪೇಟೆಯ ಪತ್ರಿಕಾಭವನದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ವಿಜಯನಗರ ದಲಿತ ಹಾಗೂ ಶೋಷಿತರ ಧ್ವನಿ ಸಂಘಟನೆಯ ಅಧ್ಯಕ್ಷ ಕಟಿಗಿ ರಾಮಕೃಷ್ಣಮಾತನಾಡಿದರು. ಸಂಘಟನೆಯ ಮುಖಂಡರು ಇದ್ದರು. | Kannada Prabha

ಸಾರಾಂಶ

ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತ ಹಿಂದೂಗಳ ಮೇಲಿನ ದೌರ್ಜನ್ಯ ಖಂಡಿಸಿ ನಗರದ ವಾಲ್ಮೀಕಿ ವೃತ್ತದಲ್ಲಿ ಡಿ. 5ರಂದು ಪ್ರತಿಭಟನೆ ನಡೆಸಲಾಗುವುದು ಎಂದು ವಿಜಯನಗರ ದಲಿತ ಹಾಗೂ ಶೋಷಿತರ ಧ್ವನಿ ಸಂಘಟನೆ ಅಧ್ಯಕ್ಷ ಕಟಿಗಿ ರಾಮಕೃಷ್ಣ ತಿಳಿಸಿದರು.

ಹೊಸಪೇಟೆ: ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತ ಹಿಂದೂಗಳ ಮೇಲಿನ ದೌರ್ಜನ್ಯ ಖಂಡಿಸಿ ನಗರದ ವಾಲ್ಮೀಕಿ ವೃತ್ತದಲ್ಲಿ ಡಿ. 5ರಂದು ಪ್ರತಿಭಟನೆ ನಡೆಸಲಾಗುವುದು ಎಂದು ವಿಜಯನಗರ ದಲಿತ ಹಾಗೂ ಶೋಷಿತರ ಧ್ವನಿ ಸಂಘಟನೆ ಅಧ್ಯಕ್ಷ ಕಟಿಗಿ ರಾಮಕೃಷ್ಣ ತಿಳಿಸಿದರು.

ನಗರದ ಪತ್ರಿಕಾಭವನದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತ ಹಿಂದೂಗಳ ಮೇಲೆ ದೌರ್ಜನ್ಯ ನಡೆಯುತ್ತಿದೆ. ದಲಿತ ಮಹಿಳೆಯರು, ಮಕ್ಕಳು, ಅಲ್ಪಸಂಖ್ಯಾತರ ಮೇಲೆ ನಿರಂತರ ಹಿಂಸಾಚಾರ, ಆಸ್ತಿಪಾಸ್ತಿ ಲೂಟಿ, ಅತ್ಯಾಚಾರ, ಪ್ರಾಣಹಾನಿ, ನಿರಪರಾಧಿ ಸಾಧು, ಸಂತರನ್ನು ಗುರಿ ಮಾಡಿ ದೇಶ ದ್ರೋಹಿ ಆರೋಪ ಹೊರಿಸಿ ಜೈಲಿಗಟ್ಟಿ ನರಳುವಂತೆ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ದಲಿತರ ಪರಿಸ್ಥಿತಿ ಗಂಭೀರವಾಗುತ್ತಿದೆ. ಪ್ರಾಣ ಭೀತಿಯಿಂದ ಭಯಪಡುತ್ತಿದ್ದಾರೆ, ಇಸ್ಲಾಂ ಮತಕ್ಕೆ ಮತಾಂತರವಾಗಲು ಒತ್ತಾಯಿಸುತ್ತಿದ್ದಾರೆ. ಮಹಮ್ಮದ್ ಯೂನಸ್ ಆಳ್ವಿಕೆಯ ಮಧ್ಯಂತರ ಸರ್ಕಾರ ಅಲ್ಲಿನ ಮೂಲಭೂತ ಮತೀಯ ಶಕ್ತಿಗಳೊಂದಿಗೆ ಕೈ ಜೋಡಿಸಿ, ಯಾವುದೇ ರಕ್ಷಣಾ ಕಾರ್ಯಕ್ಕೆ ತೊಡಗದೇ ಕೈ ಚೆಲ್ಲಿ ಕುಳಿತಿದೆ ಎಂದು ದೂರಿದರು.

ಭಾರತ ಸರ್ಕಾರ ಕೂಡಲೇ ಮಧ್ಯ ಪ್ರವೇಶಿಸಿ ಸಂತ್ರಸ್ತ ದಲಿತರ ಮಾನ, ಜೀವ, ಆಸ್ತಿಗಳಿಗೆ ರಕ್ಷಣೆ ನೀಡಬೇಕು. ಹಿಂದೂ ದೇವಸ್ಥಾನಗಳನ್ನು ಧ್ವಂಸ ಮಾಡುತ್ತಿರುವ ಮತೀಯ ಶಕ್ತಿಗಳಿಗೆ ಕಡಿವಾಣ ಹಾಕಬೇಕು. ಇಸ್ಕಾನ್ ಸನ್ಯಾಸಿ ಚಿನ್ಮಯಿ ಕೃಷ್ಣದಾಸ್ ಅವರನ್ನು ಸೆರೆವಾಸದಿಂದ ಮುಕ್ತಗೊಳಿಸಬೇಕು. ಹಿಂದೂ ಧಾರ್ಮಿಕ ಮುಖಂಡರನ್ನು ಬಂಧ ಮುಕ್ತಗೊಳಿಸಬೇಕು. ಜಾಗತಿಕ ವಿಶ್ವ ಸಹೋದರತ್ವಕ್ಕೆ ಕರೆ ನೀಡಬೇಕು. ಬಾಂಗ್ಲಾದೇಶದೊಂದಿಗೆ ರಾಜತಾಂತ್ರಿಕ, ವ್ಯಾಪಾರಿ ಸಂಬಂಧಕ್ಕೆ ನಿರ್ಬಂಧ ಹೇರಬೇಕು ಎಂದು ಒತ್ತಾಯಿಸಿದರು.

ಈ ಎಲ್ಲ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಡಿ. 5ರಂದು ಬೆಳಗ್ಗೆ 10 ಗಂಟೆಗೆ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗುವುದು. ಹೊಸಪೇಟೆಯ ಧಾರ್ಮಿಕ ಮುಖಂಡರು, ಸಂತರು, ಮಠಾಧೀಶರು ಸೇರಿದಂತೆ ಮುಖಂಡರು ಹೋರಾಟದಲ್ಲಿ ಪಾಲ್ಗೊಳ್ಳಬೇಕು ಎಂದರು.

ಸಂಘಟನೆಯ ಸುದರ್ಶನ್ ನಾಯಕ, ಸೋಮಶೇಖರ್, ಬಿ. ಶೇಕ್ಷಾವಲಿ, ರಾಘವೇಂದ್ರ, ಕಿರಣ್ ನಾಯಕ್, ರಮೇಶ್ ಗುಜ್ಜಲ್ ಮತ್ತಿತರರಿದ್ದರು.

PREV

Recommended Stories

ಕೆಪಿಎಸ್ಸಿ: 384 ಹುದ್ದೆ ನೇಮಕಕ್ಕೆ ಕೋರ್ಟ್‌ ಅನುಮತಿ
ಧರ್ಮಸ್ಥಳ ಗ್ರಾಮ ಕೇಸಿಂದ ಹಿಂದೆ ಸರಿದ ನ್ಯಾಯಾಧೀಶ