ಕನ್ನಡಪ್ರಭ ವಾರ್ತೆ ಮಂಗಳೂರು
ಮಾತಾ ಅಮೃತಾನಂದಮಯಿ ದೇವಿ ಅವರ 71ನೇ ಜನ್ಮದಿನವನ್ನು ನಗರದ ಸಂಘನಿಕೇತನದಲ್ಲಿ ವಿವಿಧ ಸಾಮಾಜಿಕ ಸೇವಾ ಯೋಜನೆಗಳ ವಿತರಣೆಯೊಂದಿಗೆ ಭಾನುವಾರ ಆಚರಿಸಲಾಯಿತು.ಮಾತಾ ಅಮೃತಾನಂದಮಯಿ ಮಠದ ಕರಾವಳಿ ಕರ್ನಾಟಕದ ವಿವಿಧ ಸೇವಾ ಸಮಿತಿಗಳ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾದ ಈ ಕಾರ್ಯಕ್ರಮಕ್ಕೆ ಮಠದ ಮುಖ್ಯಸ್ಥೆ ಸ್ವಾಮಿನಿ ಮಂಗಳಾಮೃತ ಪ್ರಾಣ ಅವರು ಶ್ರೀಗುರು ಪಾದುಕಾ ಪೂಜೆ ಮಾಡುವ ಮೂಲಕ ಚಾಲನೆ ನೀಡಿದರು.ಗರ್ಭದಲ್ಲಿರುವಾಗ ಮಗುವಿಗೆ ಬೇಕಾದ ಪೋಷಕಾಂಶಗಳು ತಾಯಿಯಿಂದಲೇ ಲಭಿಸುತ್ತವೆ. ಶರೀರ ಮತ್ತು ಮನಸ್ಸುಗಳ ಸೃಷ್ಟಿ ಅಲ್ಲಿಂದಲೇ ಆಗುತ್ತದೆ. ಅದೇ ರೀತಿ ನಾವು ವಿಶ್ವ ಮಾತೆಯ ಆಶ್ರಯದಲ್ಲಿ ಇದ್ದೇವೆ ಎಂದರು.
ಅದಾನಿ ಸಮೂಹ ಸಂಸ್ಥೆಗಳ ಅಧ್ಯಕ್ಷ ಕಿಶೋರ್ ಆಳ್ವ ಮಾತನಾಡಿ, ವಿಶ್ವ ಹೃದಯ ದಿನದ ಸಂದರ್ಭದಲ್ಲಿ ಅಮ್ಮನ ಜನ್ಮದಿನಾಚರಣೆ ಮಾಡುತ್ತಿರುವುದು ಅರ್ಥಪೂರ್ಣ. ಪ್ರೇಮ ಮತ್ತು ಕರುಣೆ ತುಂಬಿದ ಹೃದಯ ಅಮ್ಮನ ವಿಶೇಷತೆಯಾಗಿದ್ದು, ವಿಶ್ವದ ಅಸಂಖ್ಯಾತ ಜನರ ಹೃದಯ ಜ್ಯೋತಿಯನ್ನು ಬೆಳಗಿ ಅವರ ಬಾಳಿಗೆ ಬೆಳಕು ನೀಡಿದ್ದಾರೆ ಎಂದು ಹೇಳಿದರು.ಆಳ್ವಾಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ.ಎಂ. ಮೋಹನ್ ಆಳ್ವ ಮಾತನಾಡಿ,144 ಕೋಟಿ ಜನಸಂಖ್ಯೆಯ ಭಾರತವು ಅಧಿಕ ಮಾನವ ಸಂಪನ್ಮೂಲವನ್ನು ಹೊಂದಿರುವ ರಾಷ್ಟ್ರ. ಆದರೆ ಇಂದು ಸಮಾಜದಲ್ಲಿ ವಿದ್ಯಾವಂತರ ಸಂಖ್ಯೆ ಹೆಚ್ಚಾಗಿದ್ದರೂ ಭ್ರಷ್ಟತೆ ಸರ್ವವ್ಯಾಪಿಯಾಗಿದೆ. ಸಾಧು ಸಂತರ ಮಾರ್ಗದರ್ಶನ ಅತ್ಯಂತ ಅವಶ್ಯವಾಗಿದೆ ಎಂದರು.
ಈ ಸಂದರ್ಭ ಅಮ್ಮನವರ ಜೀವನ ಆಧರಿಸಿದ ಕಥಾಮೃತ ಕಾರ್ಯಕ್ರಮವನ್ನು ಗಣೇಶ್ ಎರ್ಮಾಳ್ ಪ್ರಸ್ತುತಪಡಿಸಿದರು. ಭಾರತೀಯ ನೌಕಾಪಡೆಯ ಲೆಫ್ಟಿನೆಂಟ್ ಕಮಾಂಡರ್ ಆಗಿ ವೃತ್ತಿಪರತೆ ಮೆರೆದ ಮಂಗಳೂರಿನ ದಿಶಾ ಅಮೃತ್ ಅವರನ್ನು ಈ ಸಂದರ್ಭ ಸನ್ಮಾನಿಸಲಾಯಿತು. ಬಳಿಕ ಅಮೃತ ಆರೋಗ್ಯ ಸೇವಾ ಯೋಜನೆ ಹಾಗೂ ವಸ್ತ್ರದಾನದ ವಿತರಣೆ ನಡೆಯಿತು.ಡಾ.ಜೀವರಾಜ್ ಸೊರಕೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಂಗಳೂರಿನ ಸೇವಾ ಸಮಿತಿ ಅಧ್ಯಕ್ಷ ಡಾ. ವಸಂತ ಕುಮಾರ ಪೆರ್ಲ ಸ್ವಾಗತಿಸಿದರು. ಉಡುಪಿ ಸೇವಾ ಸಮಿತಿ ಅಧ್ಯಕ್ಷ ಯೋಗೀಶ್ ಕೊಡವೂರು ವಂದಿಸಿದರು. ಡಾ.ದೇವದಾಸ್ ಪುತ್ರನ್ ನಿರೂಪಿಸಿದರು. ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಹಾಗೂ ಮುಂಬೈನಿಂದಲೂ ಹೆಚ್ಚಿನ ಸಂಖ್ಯೆಯಲ್ಲಿ ಜನರು ಭಾಗವಹಿಸಿದ್ದರು.