ಶ್ರಾವಣ ಸಾಹಿತ್ಯ ಸಂಭ್ರಮ ಸಮಾರೋಪ ಸಮಾರಂಭ
ಮನುಷ್ಯರ ನಡುವಿನ ಪರಸ್ಪರ ಮಾತೇ ಸೇತುವೆಯಾಗಿದೆ. ಅದರಲ್ಲೂ ಶ್ರಾವಣ ಹಬ್ಬಗಳ ವಿಶೇಷ ಮಾಸ, ಸಿಹಿ ಮನಸುಗಳ ಸಮ್ಮಿಲನದಿಂದ ಸಾಹಿತ್ಯದ ರಸದೌತಣ ನೀಡುತ್ತಿದೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾಧ್ಯಕ್ಷ ಸೂರಿ ಶ್ರೀನಿವಾಸ್ ಹೇಳಿದ್ದಾರೆ.
ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ತರೀಕೆರೆ, ಕನ್ನಡ ಸಾಹಿತ್ಯ ಪರಿಷತ್ತು ಮಹಿಳಾ ಘಟಕ, ಹೋಬಳಿ ಘಟಕ, ಗ್ರಾಮ ಪಂಚಾಯಿತಿ ಘಟಕಗಳು ಮತ್ತು ಕನ್ನಡ ಸಾಹಿತ್ಯ ಪರಿಷತ್ತು ಯುವ ಘಟಕ ತರೀಕೆರೆಯಿಂದ ಪಟ್ಟಣದ ಸಂಗೊಳ್ಳಿ ರಾಯಣ್ಣ ಬಡಾವಣೆ ಉಮಾ ಪ್ರಕಾಶ್ ಪ್ರಕೃತಿಶ್ರೀ ನಿಲಯದಲ್ಲಿ ಏರ್ಪಡಿಸಿದ್ದ ಶ್ರಾವಣ ಸಾಹಿತ್ಯ ಸಂಭ್ರಮದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.ಇಡೀ ಜಿಲ್ಲೆಯಲ್ಲಿ ವಿಶೇಷ ಕಾರ್ಯಕ್ರಮ ಆಯೋಜಿಸಲಾಗಿದ್ದು ಆದರಲ್ಲೂ ತರೀಕೆರೆ ತುಂಬಾ ವಿಶೇಷ. ಸಾಹಿತ್ಯ ಸಂಭ್ರಮ ಮುಖೇನ ಎಲ್ಲರೂ ಮುಖಾ ಮುಖಿ ಆಗುವುದು ಸಂತೋಷದ ಸಂಗತಿ. ನಮ್ಮ ನಡುವೆ ಬೆಸೆಯುವ ಬಾಂಧವ್ಯಕ್ಕೆ ಬೆಲೆ ಕಟ್ಟಲಾಗದು, ತಿಂಗಳ ತಿರುಳು ಬಿಡುಗಡೆ ಮಾಡಿದ್ದು ಇಡಿ ಜಿಲ್ಲೆಗೆ ಮಾದರಿ. ಪ್ರತಿಯೊಂದು ಉಪನ್ಯಾಸ ಸಹ ಅದ್ಬುತವಾಗಿದೆ ಎಂದ ಅವರು ನಿರಂತರವಾಗಿ ಸಾಹಿತ್ಯದ ತೇರು ಎಳೆಯುತ್ತಿರುವ ಎಲ್ಲಾ ಮಹನೀಯರಿಗೂ ಧನ್ಯವಾದ ಅರ್ಪಿಸಿದರು.
ಪರಿಸರ ಪ್ರಜ್ಞೆ ಬಗ್ಗೆ ಕರ್ವಾಲೋದಲ್ಲಿ ಹೇಳಿದ್ದು. ಮಿಂಚುಳ್ಳಿಯಲ್ಲಿ ಪಕ್ಷಿ ಕಥೆಯನ್ನು ವಿವರಿಸಿದ್ದಾರೆ, ಪಕ್ಷಿಗಳು ಬದುಕಲಾರದ ವಾತಾವರಣದಲ್ಲಿ ಮನುಷ್ಯ ಬದುಕಲಿಕ್ಕೆ ಸಾಧ್ಯವಿಲ್ಲ, ಪಕ್ಷಿ ಮುಖಾಂತರ ಮನುಷ್ಯನಿಗೆ ಜೀವನದ ಪಾಠ ಹೇಳಿದ್ದಾರೆ. ವಾತಾವರಣದ ಕಲ್ಪನೆಯೇ ನಮ್ಮ ಜೀವನಾಡಿ, ನಾವಿರುವ ತಾಣವೇ ವಿಶೇಷ, ಆದರೆ ನಾವು ನೋಡುವ ನೋಟ ವಿಭಿನ್ನವಾಗಿರಬೇಕು ಎಂದು ಹೇಳಿದರು.
ಲೇಖಕಿ ಶಿಲ್ಪ ವಸಂತಕುಮಾರ್ ಮಾತನಾಡಿ, ಕುವೆಂಪು ಅವರ ಸಾಹಿತ್ಯದ ತೇರಿನ ಬಂಡಿ ಎಳೆದವರು ತೇಜಸ್ವಿ. ತಮ್ಮ ಸುತ್ತಮುತ್ತಲಿನ ಪರಿಸರವನ್ನು ಬಹಳ ಹತ್ತಿರದಿಂದ ಕಂಡವರು, ಬಹಳ ಕುತೂಹಲ ಮತ್ತು ಆಸಕ್ತಿ ವಹಿಸುವ ವಿಸ್ಮಯಕಾರಿ ವ್ಯಕ್ತಿತ್ವವುಳ್ಳವರು, ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ಕೆಲಸ ಮಾಡಿ ಸಾಹಿತ್ಯ ರಚಿಸಿದವರು, ಪ್ರಕೃತಿಯನ್ನೇ ತನ್ನ ಆರಾಧ್ಯ ದೈವ ಎಂದು ಪ್ರೀತಿಸಿದವರು ಎಂದು ಅವರು ಹೇಳಿದರು.
ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ರವಿದಳವಾಯಿ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ ಶ್ರಾವಣ ಕಾರ್ಯಕ್ರಮ ಯಶಸ್ವಿಯಾಗಿದೆ, ಮಕ್ಕಳಿಗೆ ತಲುಪಿ ಸಾಹಿತ್ಯ ವೃದ್ಧಿಯಾಗಬೇಕು ಎಂದು ತಿಳಿಸಿದರು.
-2ಕೆಟಿಆರ್.ಕೆ.1ಃ ತರೀಕೆರೆಯಲ್ಲಿ ಏರ್ಪಡಿಸಿದ್ದ ಶ್ರಾವಣ ಸಾಹಿತ್ಯ ಕಾರ್ಯಕ್ರಮದ ಸಮರೋಪ ಸಮಾರಂಭವನ್ನು ಪ್ರಕೃತಿಶ್ರೀ ಕಲಾ ಕುಟೀರ ಅಧ್ಯಕ್ಷೆ ಉಮಾಪ್ರಕಾಶ್ ಉದ್ಘಾಟಿಸಿದರು. ಕಸಾಪ ಜಿಲ್ಲಾಧ್ಯಕ್ಷ ಸೂರಿ ಶ್ರೀನಿವಾಸ್, ತಾ.ಕಸಾಪ ಅಧ್ಯಕ್ಷ ರವಿ ದಳವಾಯಿ, ಕನ್ನಡಶ್ರೀ ಬಿ.ಎಸ್.ಭಗವಾನ್, ಲೇಖಕ ತ.ಮ.ದೇವಾನಂದ್ ಮತ್ತಿತರರು ಇದ್ದರು.