ಕನ್ನಡಪ್ರಭ ವಾರ್ತೆ ಇಂಡಿ
ಮನುಷ್ಯನ ಬದುಕಿಗೆ ಸಂಸ್ಕಾರ ನೀಡುವಲ್ಲಿ ನಾಡಿನ ಮಠ, ಮಾನ್ಯಗಳ ಕೊಡುಗೆ ಅನನ್ಯ. ಸರ್ಕಾರಕ್ಕೆ ಮಾಡಲಾಗದ ಸಮಾಜಮುಖಿ ಕಾರ್ಯಗಳನ್ನು ನಾಡಿನ ಮಠ, ಮಾನ್ಯಗಳು ಮಾಡುತ್ತಿವೆ ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದರು.ತಾಲೂಕಿನ ಗೋಳಸಾರ ಗ್ರಾಮದ ಶ್ರೀ ಪುಂಡಲಿಂಗ ಮಹಾಶಿವಯೋಗಿಗಳ ಮಠದಲ್ಲಿ ತ್ರೀಧರೇಶ್ವರ ಮಹಾಶಿವಯೋಗಿಗಳ 30ನೇ ಪುಣ್ಯಾರಾಣೆ ಮಹೋತ್ಸವ ನಿಮಿತ್ತ ಶನಿವಾರ ಹಮ್ಮಿಕೊಂಡ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ತ್ರೀಧರೇಶ್ವರ ಮಹಾಶಿವಯೋಗಿಗಳು ಲಿಂಗೈಕ್ಯರಾಗಿ 30 ವರ್ಷ ಕಳೆದರೂ ಅವರು ಇಂದು ಎಲ್ಲ ಭಕ್ತರ ಮನೆ, ಮನದಲ್ಲಿ ಬೆಳಕಾಗಿದ್ದಾರೆ. ಮೌನಕ್ರಾಂತಿಯ ಮೂಲಕ ಸಮಾಜಮುಖಿ ಕಾರ್ಯದಲ್ಲಿ ತೊಡಗಿರುವ ಏಕೈಕ ಮಠ ಗೊಳಸಾರದ ಪುಂಡಲಿಂಗ ಮಹಾಶಿವಯೋಗಿಗಳ ಮಠ. ಸಮಾಜ ಪರಿವರ್ತನೆಯಲ್ಲಿ ಗೊಳಸಾರ ಪುಂಡಲಿಂಗ ಮಹಾಶಿವಯೋಗಿಗಳ ಮಠದ ಕೊಡುಗೆ ಅನನ್ಯ ಎಂದು ತಿಳಿಸಿದರು.12ನೇ ಶತಮಾನದಲ್ಲಿ ಮಾತನಾಡಿದನ್ನು ಬದುಕಿನಲ್ಲಿ ಆಚರಣೆಯಲ್ಲಿ ತಂದವರು ಮೊಟ್ಟಮೊದಲು ಬಸವಣ್ಣವನರು, ಅವರ ನಂತರದಲ್ಲಿ ಆಡಿದ ಮಾತು ಬದುಕಿನಲ್ಲಿ ಆಚರಣೆಯಲ್ಲಿ ತಂದವರು ಪುಂಡಲಿಂಗ ಮಹಾಶಿವಯೋಗಿ ಹಾಗೂ ತ್ರೀಧರೇಶ್ವರ ಮಹಾಶಿವಯೋಗಿಗಳು. 21ನೇ ಶತಮಾನದಲ್ಲಿ ನಾಡಿನ ಜನರಲ್ಲಿ ಜ್ಞಾನದ ಬೀಜವನ್ನು ಬಿತ್ತಿದ ಸಿದ್ದೇಶ್ವರ ಮಹಾಶಿವಯೋಗಿಗಳ ಆದರ್ಶ ಬದುಕನ್ನು ನಾವೆಲ್ಲ ಪಾಲನೆ ಮಾಡಬೇಕು. ಪ್ರತಿಯೊಬ್ಬರು ಸತ್ಯ, ಶಾಂತಿ, ನೀತಿಯಿಂದ ಜೀವನ ಸಾಗಿಸಬೇಕು. ಜೀವನ ಪಾವನಗೊಳಿಸಲು ಮಠ, ಮಂದಿರ, ಶರಣರ ದರ್ಶನ ಮಾಡಬೇಕು ಎಂದರು.
ಅಭಿನವ ಪುಂಡಲಿಂಗ ಮಹಾಶಿವಯೋಗಿ ಹಾಗೂ ರೋಡಗಿ ಅಭಿನವ ಶಿವಲಿಂಗೇಶ್ವರ ಶ್ರೀಗಳು ಸಾನ್ನಿಧ್ಯ, ಮಾತೋಶ್ರಿ ಗುರುದೇವಿ ಅಮ್ಮನವರು ವಹಿಸಿದ್ದರು. ಎಂ.ಆರ್.ಪಾಟೀಲ, ಎಸ್.ಆರ್.ಮೇತ್ತಿ, ಹಣಮಂತ ಮಾಲಗಾರ, ಪುಂಡುಸಾಹುಕಾರ ನಿಂಬರಗಿ, ರವೀಂದ್ರ ಆಳೂರ, ಶಿವಲಿಂಗಪ್ಪ ನಾಗಠಾಣ, ಆಲಿಂಗರಾಯ ಕುಮಸಗಿ, ಸಿದ್ದರಾಮ ತೆಗ್ಗೆಳ್ಳಿ, ಶಿವಲಿಂಗಯ್ಯ ಹಿರೇಮಠ, ದತ್ತಾತ್ರೇಯ ಮಠಪತಿ ಮೊದಲಾದವರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.