ದಾಬಸ್‍ಪೇಟೆ: ಗಣಿತ ಕ್ಷೇತ್ರಕ್ಕೆ ರಾಮಾನುಜನ್, ಆರ್ಯಭಟ, ಬ್ರಹ್ಮಗುಪ್ತ, ಭಾಸ್ಕರಾಚಾರ್ಯರಂತಹ ಮಹನೀಯರನ್ನು ಭಾರತ ಕೊಡುಗೆಯಾಗಿ ನೀಡಿದೆ ಎಂದು ವಿ- ಕೇರ್ ಇಂಟರ್ ನ್ಯಾಷನಲ್ ಶಾಲೆಯ ಕಾರ್ಯದರ್ಶಿ ಸ್ವರ್ಣಾಂಬಾ ರಾಜಶೇಖರ್ ತಿಳಿಸಿದರು.
ಜಗತ್ತಿನ ಗಣಿತ ಕ್ಷೇತ್ರಕ್ಕೆ ಸೊನ್ನೆಯನ್ನು ಕೊಡುಗೆಯಾಗಿ ನೀಡಿದ್ದು ಭಾರತ. ರಾಮಾನುಜನ್ ಅವರ ಹುಟ್ಟುಹಬ್ಬವನ್ನು ಇಂದು ಬರೀ ಭಾರತ ಮಾತ್ರವಲ್ಲ, ಇಡೀ ವಿಶ್ವವೇ ಆಚರಿಸುತ್ತಿದೆ. ಗಣಿತ ವಿಶ್ವದ ಶೈಕ್ಷಣಿಕ ವ್ಯವಸ್ಥೆಯಲ್ಲಿ ನರವ್ಯೂಹವಿದ್ದಂತೆ ಎಂದ ಅವರು, ಗಣಿತವನ್ನು ಪ್ರೀತಿಸಿ, ಗೌರವಿಸಿ, ನಾನು ಒಬ್ಬ ರಾಮಾನುಜನ್ ಆಗಬೇಕು ಎಂಬ ಸ್ಫೂರ್ತಿಯಿಂದ ಮುನ್ನಡೆಯಿರಿ ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಶಾಲಾ ಪ್ರಾಂಶುಪಾಲರಾದ ಶಿಲ್ಪ ಮಾತನಾಡಿ, ಗಣಿತ ಶಿಕ್ಷಣ ಪಡೆದವರಿಗೆ ಇಂದು ಅತಿ ಹೆಚ್ಚಿನ ಉದ್ಯೋಗಾವಕಾಶಗಳು ಲಭ್ಯವಿದೆ. ಕಂಪನಿಗಳಲ್ಲಿ ಮಾತ್ರವಲ್ಲ, ಅಂತಾರಾಷ್ಟ್ರೀಯ ಗುಣಮಟ್ಟದ ಶಿಕ್ಷಣ ನೀಡುವ ಶಾಲೆಯಲ್ಲೂ ಎಂಎಸ್ಸಿ ಗಣಿತ ಮಾಡಿದವರಿಗೆ ಬೇಡಿಕೆ ಇದೆ. ಗಣಿತ ಐಸೋಲೇಟೇಡ್ ವಿಷಯವಲ್ಲ, ಇದು ವಿಜ್ಞಾನ, ಅರ್ಥಶಾಸ್ತ್ರ ಸೇರಿದಂತೆ ಎಲ್ಲಾ ವಿಷಯಗಳೊಂದಿಗೆ ಸಂಬಂಧ ಹೊಂದಿದೆ ಎಂದರು.ಗಣಿತ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ವಿವಿಧ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.