ಹೊಸಪೇಟೆಯಲ್ಲಿ ಗಣಿತ ಕ್ಲಬ್, ಕಾರ್ಯಾಗಾರ ಉದ್ಘಾಟನೆ
ಎಂಜಿನಿಯರಿಂಗ್‌ನ ಯಾವುದೇ ಬೆಳವಣಿಗೆ, ತಂತ್ರಜ್ಞಾನ ಆವಿಷ್ಕಾರವಾಗಬೇಕಾದರೆ ಗಣಿತ ಸೂತ್ರಗಳು ಮೂಲ ಅಡಿಪಾಯವಾಗಿವೆ ಎಂದು ಬೆಂಗಳೂರಿನ ದಯಾನಂದ ಸಾಗರ್ ಅಕಾಡೆಮಿ ಆಫ್ ಟೆಕ್ನಾಲಜಿ ಕಾಲೇಜಿನ ಗಣಿತ ವಿಭಾಗದ ಸಹ ಪ್ರಾಧ್ಯಾಪಕಿ ಡಾ. ವತ್ಸಲಾ ಜಿ.ಎ. ಹೇಳಿದರು.
ಹೊಸಪೇಟೆಯ ಪ್ರೌಢದೇವರಾಯ ತಾಂತ್ರಿಕ (ಪಿಡಿಐಟಿ) ಮಹಾವಿದ್ಯಾಲಯದ ಗಣಿತ ವಿಭಾಗದ ವತಿಯಿಂದ ಐಕ್ಯೂಎಸಿಯ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಗಣಿತ ಕ್ಲಬ್ ಉದ್ಘಾಟನೆ ಮತ್ತು ಗಣಿತ ಕಾರ್ಯಾಗಾರವನ್ನು ಶನಿವಾರ ಉದ್ಘಾಟಿಸಿ ಅವರು ಮಾತನಾಡಿದರು. ಗಣಿತ ಸಹಜವಾಗಿ ಸಂಶೋಧನೆ ಮತ್ತು ಅಭಿವೃದ್ಧಿಯ ಮುಖ್ಯ ಅಂಗವಾಗಿದೆ. ಎಂಜಿನಿಯರಿಂಗ್ ಕ್ಷೇತ್ರಗಳಲ್ಲಿ ಗಣಿತವು ಅನೇಕ ಮೂಲಭೂತ ಆವಿಷ್ಕಾರಗಳಿಗೆ ಮಾರ್ಗದರ್ಶನ ನೀಡುತ್ತದೆ ಎಂದು ಹೇಳಿದರು.ಗಣಿತ ಸೂತ್ರಗಳು, ಮಾದರಿಗಳು ಮತ್ತು ಗಣನಾ ವಿಧಾನಗಳು ವಿವಿಧ ತಂತ್ರಜ್ಞಾನಗಳ ಕಾರ್ಯನಿರ್ವಹಣೆಯನ್ನು, ಪರಿಣಾಮಕಾರಿತ್ವವನ್ನು ಮತ್ತು ಭವಿಷ್ಯದ ತಂತ್ರಜ್ಞಾನಗಳು ಹೇಗೆ ಅಭಿವೃದ್ಧಿಯಾಗಬಹುದು ಎಂಬುದನ್ನು ನಿರ್ಧರಿಸಲಿವೆ. ಆಧುನಿಕ ಎಲೆಕ್ಟ್ರಾನಿಕ್ಸ್ ಹಾಗೂ ಎಲೆಕ್ಟ್ರಿಕಲ್ ಎಂಜಿನಿಯರಿಂಗ್‌ನಲ್ಲಿ ಗಣಿತವನ್ನು ಬಳಸಿಕೊಂಡು ಸರ್ಕ್ಯೂಟ್ ಡಿಸೈನಿಂಗ್, ಸಿಗ್ನಲ್ ಪ್ರಾಸೆಸಿಂಗ್‌ಗಳನ್ನು ಮಾಡಲಾಗುತ್ತದೆ ಎಂದರು.
ಕಂಪ್ಯೂಟರ್ ಸೈನ್ಸ್ ಆಲ್ಗೋರಿದಮ್‌ಗಳ ವಿಶ್ಲೇಷಣೆ, ಡೇಟಾ ಸ್ಟ್ರಕ್ಚರ್‌ಗಳ ವಿನ್ಯಾಸ, ಮತ್ತು ಕೃತಕ ಬುದ್ಧಿಮತ್ತೆ (AI) ಹೊಂದಿರುವ ಭಾಗಗಳು ಗಣಿತದ ಆಧಾರದ ಮೇಲೆ ಕೆಲಸ ಮಾಡುತ್ತವೆ. ಈಗಾಗಲೇ, ಎಂಜಿನಿಯರಿಂಗ್‌ನಲ್ಲಿ ಗಣಿತವನ್ನು ಇನ್ನಷ್ಟು ದೀರ್ಘ ಆವಿಷ್ಕಾರಗಳಿಗೆ ಸೇರಿಸಲು ಗಣಿತಜ್ಞರು ಹಾಗೂ ಎಂಜಿನಿಯರ್‌ಗಳು ಕೂಡ ಸ್ವರೂಪಗಳನ್ನು ಕಂಡುಹಿಡಿಯುತ್ತಿದ್ದಾರೆ ಎಂದರು.
ಕಾರ್ಯಕ್ರಮದ ಸಂಚಾಲಕರಾದ ಡಾ. ಎನ್. ಪ್ರಭುದೇವ್ ಮಾತನಾಡಿ, ಗಣಿತ ಕ್ಲಬ್ ಸ್ಥಾಪನೆಯಿಂದ ಇಂತಹ ಕಾರ್ಯಾಗಾರಗಳನ್ನು ಹಾಗೂ ಗಣಿತದ ಬಗ್ಗೆ ವಿಶೇಷ ಉಪನ್ಯಾಸವನ್ನು ಆಯೋಜಿಸಲು ಸಹಕಾರಿಯಾಗಿದೆ. ವಿದ್ಯಾರ್ಥಿಗಳು ಅದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.