ಬಾಳೆಹೊನ್ನೂರು ರಂಭಾಪುರಿ ಮಠದಲ್ಲಿ ತಾಲೂಕು ಪತ್ರಕರ್ತರ ಸಂಘದ ಆಶ್ರಯದಲ್ಲಿ ನಡೆದ ಕೃಷಿ ಸಮ್ಮೇಳನ- 2005 ಉದ್ಘಾಟನೆ
ರಾಜ್ಯದಲ್ಲಿ ಸರ್ಕಾರಕ್ಕಿಂತ ಹೆಚ್ಚಾಗಿ ಮಠ, ಮಂದಿರಗಳು ಅನ್ನ ದಾಸೋಹ, ಅಕ್ಷರ ದಾಸೋಹ ನಡೆಸುತ್ತಿವೆ ಎಂದು ಭಾರತೀಯ ಜನತಾ ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ತಿಳಿಸಿದರು.
ಮಂಗಳವಾರ ತಾಲೂಕಿನ ಬಾಳೆಹೊನ್ನೂರಿನ ರಂಭಾಪುರಿ ಮಠದಲ್ಲಿ ಜಗದ್ಗುರುಗಳ ಸಾನ್ನಿದ್ಯದಲ್ಲಿ ತಾಲೂಕು ಪತ್ರಕರ್ತರ ಸಂಘದ ಆಶ್ರಯದಲ್ಲಿ ನಡೆದ ಕೃಷಿ ಸಮ್ಮೇಳನ - 2025 ಉದ್ಘಾಟಿಸಿ ಮಾತನಾಡಿದರು. ರಾಜ್ಯದಲ್ಲಿ ಅನೇಕ ಮುಖ್ಯ ಮಂತ್ರಿಗಳು, ಸರ್ಕಾರಗಳು ಬಂದಿವೆ. ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ರೈತರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕಾರ ಮಾಡಿ ರೈತರಿಗಾಗಿ ಅನೇಕ ಕಾರ್ಯಕ್ರಮ ಜಾರಿಗೆ ತಂದಿದ್ದರು. ಆದರೆ, ಇತ್ತೀಚಿನ ವರ್ಷಗಳಲ್ಲಿ ಸರ್ಕಾರ ಬಜೆಟ್ ಮಂಡಿಸುವಾಗ ರೈತರಿಗೆ ಅನುದಾನ ಘೋಷಣೆ ಮಾಡುತ್ತಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು.ಸೈನಿಕರು ದೇಶ ಕಾಯುತ್ತಾರೆ. ರೈತರು ದೇಶದ ಜನರಿಗೆ ಅನ್ನ ನೀಡುತ್ತಾರೆ. ಮಲೆನಾಡು ಭಾಗದಲ್ಲಿ ಅಡಕೆ, ಕಾಫಿ ಮುಖ್ಯ ಕೃಷಿಯಾಗಿದೆ. ಆದರೆ, ಅಡಕೆಗೆ ರೋಗ ಬಾಧೆ ಕಾಣಿಸಿಕೊಂಡು ಬೆಳೆದ ಬೆಳೆಗಳಿಗೆ ವೈಜ್ಞಾನಿಕ ಬೆಲೆ ಸಿಗುತ್ತಿಲ್ಲ. ಮುಂದಿನ ದಿನಗಳಲ್ಲಿ ಉತ್ತಮ ಮಳೆಯಾಗಿ ರೈತರು ಬೆಳೆದ ಬೆಳೆಗಳಿಗೆ ವೈಜ್ಞಾನಿಕ ಬೆಲೆ ಸಿಗುವಂತಾಗಬೇಕು ಎಂದು ಆಶಯ ವ್ಯಕ್ತಪಡಿಸಿದರು.
ಇತ್ತೀಚಿನ ವರ್ಷಗಳಲ್ಲಿ ಮಕ್ಕಳು ವೃದ್ಧ ತಂದೆ, ತಾಯಿಯರನ್ನು ಸರಿಯಾಗಿ ನೋಡಿಕೊಳ್ಳುತ್ತಿಲ್ಲ. ಮಕ್ಕಳಿಗೆ ಶಿಕ್ಷಣ ದೊಂದಿಗೆ ಪೂರಕ ಸಂಸ್ಕಾರ ನೀಡುವ ಕೆಲಸ ಮಾತ್ರ ಆಗುತ್ತಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು. ಮಕ್ಕಳನ್ನು ಧಾರ್ಮಿಕ ಕಾರ್ಯಕ್ರಮಗಳಿಗೆ ಹೆಚ್ಚಾಗಿ ಕರೆದುಕೊಂಡು ಬರಬೇಕು ಎಂದು ಸಲಹೆ ನೀಡಿದರು.
ಸಚಿವ ಡಿ.ಎನ್.ಜೀವರಾಜ್ ಮಾತನಾಡಿ, ರಂಭಾಪುರಿ ಮಠ ಕೇವಲ ಲಿಂಗಾಯತರ ಮಠವಾಗಿರದೆ ಈ ಭಾಗದ ಎಲ್ಲಾ ಧರ್ಮದವರ ಮಠವಾಗಿದೆ. ಎಲ್ಲಾ ಹಿಂದೂಗಳು ಇಲ್ಲಿಗೆ ಬರುತ್ತಾರೆ. ಇಲ್ಲಿನ ಶ್ರೀಗಳು ಎಲ್ಲರನ್ನೂ ಪ್ರೀತಿಯಿಂದ ಸಮಾನರಾಗಿ ಕಾಣುತ್ತಾರೆ. ಧರ್ಮದ ನಡೆ ಹೇಗಿರಬೇಕು ಎಂದು ಶ್ರೀಗಳು ತೋರಿಸಿದ್ದಾರೆ ಎಂದರು.
ಸೈನಿಕ, ರೈತನನ್ನು ಎಂದಿಗೂ ಮರೆಯಬಾರದು: ರಂಭಾಪುರಿ ಶ್ರೀ
ಸಭೆ ದಿವ್ಯ ಸಾನ್ನಿಧ್ಯವಹಿಸಿದ್ದ ಅವರು, ಭೂಮಿಯಲ್ಲಿ ಅದ್ಭುತ ಶಕ್ತಿಯಿದೆ. ಭೂ ತಾಯಿ ಮಡಲಿಗೆ ಹಿಡಿ ಕಾಳು ಹಾಕಿದರೆ ಖಂಡಗ ಕಾಳು ಕೊಡುತ್ತಾಳೆ. ಒಕ್ಕಲಿಗ ಒಕ್ಕಿದರೆ ಲೋಕವೆಲ್ಲ ಉಕ್ಕುವುದು. ಒಕ್ಕಲಿಗೆ ಒಕ್ಕದಿದ್ದರೆ ಲೋಕವೆಲ್ಲ ಬಿಕ್ಕು ವುದೆಂದು ಸರ್ವಜ್ಞ ಕವಿ ಎಚ್ಚರಿಸಿದ್ದಾರೆ. ಮಲೆನಾಡು ಪ್ರಾಂತ್ಯದಲ್ಲಿ ಕಾಫಿ ಮತ್ತು ಅಡಕೆ ಬೆಳೆ ಮುಖ್ಯವಾದವು. ಕೃಷಿ ಮಾಡುವ ರೈತ ಏನೇ ಸವಾಲುಗಳು ಬಂದರೂ ಅವುಗಳನ್ನು ಎದುರಿಸಿ ಪರಿಹಾರ ಕಂಡುಕೊಳ್ಳಬೇಕಾಗುತ್ತದೆ. ರೈತರು ಕಷ್ಟ ಬಂದಾಗ ಆತ್ಮಸ್ಥೈರ್ಯ ಕಳೆದುಕೊಳ್ಳಬಾರದು. ಆತ್ಮಹತ್ಯೆಯಂತಹ ಕಾರ್ಯಕ್ಕೆ ಕೈ ಹಾಕಬಾರದು ಎಂದು ಕಿವಿ ಮಾತು ಹೇಳಿದರು.
ಯಾವುದೇ ಸಮಸ್ಯೆ ಬಂದರೂ ಮೆಟ್ಟಿನಿಲ್ಲುವೆ
ನದಿ ಹರಿಯುವಾಗ ಕಲ್ಲು,ಮಣ್ಣು, ಕಸ ಅಡ್ಡ ಬಂದರೂ ಅದನ್ನು ನಿವಾರಿಸಿಕೊಂಡು ತನ್ನ ಜಾಗವನ್ನು ಸೇರುತ್ತದೆ. ಅದೇ ರೀತಿ ನನಗೆ ಯಾವುದೇ ಸಮಸ್ಯೆ ಬಂದರೂ ಗುರುಗಳ ಆಶೀರ್ವಾದದಿಂದ ಅದನ್ನು ಮೆಟ್ಟಿ ನಿಂತು ಸಂಘಟನೆ ಮಾಡಿ ನನ್ನ ಗುರಿ ತಲುಪುತ್ತೇನೆ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಮಾರ್ಮಿಕವಾಗಿ ತಿಳಿಸಿದರು.