ಫೆಬ್ರವರಿ 22 ರಂದು ಮಾವಿನಕೆರೆ ಲಕ್ಷ್ಮಿವೆಂಕಟರಮಣಸ್ವಾಮಿ ರಥೋತ್ಸವ

KannadaprabhaNewsNetwork |  
Published : Feb 20, 2024, 01:46 AM IST
19ಎಚ್ಎಸ್ಎನ್12ಎ : ಮಾವಿನಕೆರೆ ಗ್ರಾಮದಲ್ಲಿರುವ ಶ್ರೀ ವೆಂಕಟರಮಣಸ್ವಾಮಿಯ ರಥೋತ್ಸವ ಹಿಂದೆ ವಿಜೃಂಭಣೆಯಿಂದ ಜರುಗಿದೆ. | Kannada Prabha

ಸಾರಾಂಶ

ಹೊಳೆನರಸೀಪುರ ತಾಲೂಕಿನ ಐತಿಹಾಸಿಕ ಹಿನ್ನೆಲೆಯ ಹಳೇಕೋಟೆ ಬೆಟ್ಟದ ಶ್ರೀ ರಂಗನಾಥಸ್ವಾಮಿ ದೇವಾಲಯ ಹಾಗೂ ಮಾವಿನಕೆರೆ ಶ್ರೀ ಲಕ್ಷ್ಮಿವೆಂಕಟರಮಣಸ್ವಾಮಿ ದೇವಾಲಯದ ಬ್ರಹ್ಮ ರಥೋತ್ಸವ ಫೆ.೨೨ರ ಗುರುವಾರ ೧೧.೩೦ರಿಂದ ಜರುಗಲಿದೆ.

ದೇವಾಲಯಕ್ಕೆ ಇದೆ ಐತಿಹಾಸಿಕ ಹಿನ್ನೆಲೆ । ಬೆಟ್ಟದ ಶೃಂಗದಲ್ಲಿ ರಂಗನಾಥನ ಪೂಜೆ

ಎಚ್.ವಿ. ರವಿಕುಮಾರ್

ಕನ್ನಡಪ್ರಭ ವಾರ್ತೆ ಹೊಳೆನರಸೀಪುರ

ತಾಲೂಕಿನ ಐತಿಹಾಸಿಕ ಹಿನ್ನೆಲೆಯ ಹಳೇಕೋಟೆ ಬೆಟ್ಟದ ಶ್ರೀ ರಂಗನಾಥಸ್ವಾಮಿ ದೇವಾಲಯ ಹಾಗೂ ಮಾವಿನಕೆರೆ ಶ್ರೀ ಲಕ್ಷ್ಮಿವೆಂಕಟರಮಣಸ್ವಾಮಿ ದೇವಾಲಯದ ಬ್ರಹ್ಮ ರಥೋತ್ಸವ ಫೆ.೨೨ರ ಗುರುವಾರ ೧೧.೩೦ರಿಂದ ಜರುಗಲಿದೆ.

ಐತಿಹಾಸಿಕ ಹಿನ್ನೆಲೆ:

ಹೇಮಾವತಿ ನದಿ ತಟದ ಸುಂದರ ಪ್ರಕೃತಿಯ ಮಡಿಲಿನ ಮಾವಿನಕೆರೆ ಗ್ರಾಮವು ಪಾಳೇಗಾರ ಲಕ್ಷ್ಮಣನಾಯಕನ ಆಳ್ವಿಕೆಯಲ್ಲಿ ಆತನ ಗೋಶಾಲೆಯ ಹಸು ಬೆಟ್ಟದ ಮೇಲೆ ತಾನಾಗಿಯೇ ಕಲ್ಲಿನ ಮೇಲೆ ಹಾಲು ಸುರಿಸುವುದನ್ನು ಕಣ್ಣಾರೆ ಕಂಡಿದ್ದರು. ಆ ಹಸುವನ್ನು ದೈವವೆಂದೂ ಆರಾಧಿಸಿ ಲಿಂಗಾಕಾರವಾದ ಮೂರ್ತಿ(ಕಲ್ಲು)ಯನ್ನು ಭಕ್ತಿಯಿಂದ ಪೂಜಿಸಿದನು.

ಆ ಉದ್ಭವ ಮೂರ್ತಿಯು ಶಿವನಾಕಾರವಿದ್ದರಿಂದ ಶಿವನೆಂದು, ಶೇಷಾಕಾರದ ಬೆಟ್ಟದಲ್ಲಿ ಇರುವುದರಿಂದ ವಿಷ್ಣುವೆಂದು ಮಾವಿನಕೆರೆ ಹಾಗೂ ಬೆಟ್ಟದ ಸಾತೇನಹಳ್ಳಿ ಗ್ರಾಮದವರಲ್ಲಿ ವಾದ ನಡೆದಿತ್ತು ಎನ್ನಲಾಗಿದೆ. ಜ್ಞಾನಿಗಳ ಸಲಹೆಯಂತೆ ದೇವತಾ ಸ್ವರೂಪ ತಾನಾಗಿಯೇ ಮೂಡಿ ಬರುವಂತೆ ಪ್ರಾರ್ಥಿಸಿದ್ದರು. ಈಶ್ವರನೇ ಆಗಿದ್ದಲ್ಲಿ ಬಸವೇಶ್ವರನೇ ಉದ್ಬವಿಸಲಿ ಎಂದು ಪ್ರಾರ್ಥಿಸಿ ಗ್ರಾಮಸ್ಥರು ಬೆಟ್ಟದಲ್ಲಿ ಮಲಗಿದ್ದರು. ನಡುರಾತ್ರಿಯಲ್ಲಿ ಸಿಡಿಲಿನ ಆರ್ಭಟವಾಗಿ, ಬಂಡೆಯ ಉತ್ತಾರಾಭಿಮುಖವಾಗಿ ಅಂಜನೇಯ ಸ್ವರೂಪದ ರೇಖಾತ್ಮಕವಾದ ರೂಪ ಕಂಗೊಳಿಸಿತ್ತು ಎನ್ನಲಾಗಿದೆ. ಒಮ್ಮತದ ನಿರ್ಣಯದಿಂದ ವಿಷ್ಣು ಸಾನಿಧ್ಯವೆಂದು ತೀರ್ಮಾನಿಸಿ ವಿಷ್ಣು ನಾಮಸ್ಮರಣೆ ಮಾಡಲಾಗುತ್ತಿದೆ. ಬೆಟ್ಟದ ಶೃಂಗದಲ್ಲಿ ಶ್ರೀ ರಂಗನಾಥ ಶೇಷಶಾಯಿಯಾಗಿ ವಾಸವಾಗಿದ್ದಾರೆ ಎಂಬ ಪ್ರತೀತಿ ಇದೆ.

ಬೆಟ್ಟದ ಶ್ರೀ ರಂಗನಾಥನ ದರ್ಶನವನ್ನು ೬೭೫ ಕ್ಕೂ ಹೆಚ್ಚು ಮೆಟ್ಟಿಲುಗಳನ್ನು ಹತ್ತಲು ವಯೋವೃದ್ದರಿಗೆ ಕಷ್ಟವಾಗಿತ್ತು. ದೈವ ಪ್ರೇರಣೆಯಂತೆ ನಾಯಕನ ಆಳ್ವಿಕೆಗೆ ಒಳಪಟ್ಟಿದ್ದ ಶಿವಮೊಗ್ಗ ನಗರದಲ್ಲಿದ್ದ ಶಿಲಾಮೂರ್ತಿಯನ್ನು ತಂದು ಹೇಮಾವತಿ ನದಿ ತೀರದಲ್ಲಿ ಯಥಾಸ್ಥಿತಿ ಪ್ರತಿಷ್ಠಾಪನೆ ಮಾಡುವಂತೆ ಭಗವತ್ ಪ್ರೇರಣೆಯಾಗಿತ್ತು ಎಂಬ ಉಲ್ಲೇಖವಿದೆ. ಆ ಶಿಲಾಮೂರ್ತಿಯು ಶ್ರೀ ವೆಂಕಟರಮಣ ಅವತಾರದಲ್ಲಿ ಇದ್ದು, ಮೂರ್ತಿಯನ್ನು ಮಾವಿನಕೆರೆ ಗ್ರಾಮದಲ್ಲಿ ಪ್ರತಿಷ್ಠಾಪಿಸಿ ಶ್ರೀ ಲಕ್ಷ್ಮಿವೆಂಕಟರಮಣ ಸ್ವಾಮಿ ಎಂಬ ಹೆಸರಿನಲ್ಲಿ ಪೂಜಿಸಲಾಗುತ್ತಿದೆ.

ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹಾಗೂ ಕುಟುಂಬ ಸದಸ್ಯರ ಮನೆಗಳಲ್ಲಿ ಜರಗುವ ಶುಭ ಕಾರ್ಯಗಳು, ಹಬ್ಬ ಹಾಗೂ ವಿಶೇಷ ದಿನಗಳು ಮತ್ತು ಚುನಾವಣೆ ಸಂದರ್ಭದಲ್ಲಿ ಬೆಟ್ಟದ ಶ್ರೀ ರಂಗನಾಥಸ್ವಾಮಿ ದೇವಾಲಯಲ್ಲಿ ಪೂಜೆ ಸಲ್ಲಿಸುವುದು ರೂಢಿಯಲ್ಲಿದೆ.

ಹಿರಿಯ ಅರ್ಚಕ ಕೇಶವಮೂರ್ತಿ ಪೂಜೆ ನೆರವೇರಿಸುತ್ತಾರೆ. ಐತಿಹಾಸಿಕ ಪರಂಪರೆಯ ಮಹತ್ವವನ್ನು ಹೊಂದಿರುವ ಶ್ರೀ ಬೆಟ್ಟದ ರಂಗನಾಥಸ್ವಾಮಿ ದರ್ಶನಕ್ಕೆ ನಿತ್ಯ ಭಕ್ತರು ದೇವಾಲಯದಲ್ಲಿ ಪೂಜೆ ಸಲ್ಲಿಸುತ್ತಾರೆ. ಹಬ್ಬ- ಹರಿದಿನಗಳು ಹಾಗೂ ವಿಶೇಷ ಸಂದರ್ಭಗಳಲ್ಲಿ ಸಾವಿರಾರು ಭಕ್ತರು ಆಗಮಿಸುತ್ತಾರೆ.

ಬಸ್ ಮಾರ್ಗ:

ಮಾವಿನಕೆರೆ ಗ್ರಾಮವು ಹೊಳೆನರಸೀಪುರ ಪಟ್ಟಣದಿಂದ ಹಾಸನಕ್ಕೆ ತೆರಳುವ ಹೆದ್ದಾರಿಯಲ್ಲಿ ೭ ಕಿಮೀ ಸಾಗಿದರೆ ಹಳೇಕೋಟೆ ಗ್ರಾಮವಿದೆ. ಅಲ್ಲಿಂದ ಬೆಟ್ಟದ ರಸ್ತೆಯಲ್ಲಿ ೨ ಕಿಮೀ ಸಾಗಬೇಕು. ಶ್ರೀ ಕ್ಷೇತ್ರಕ್ಕೆ ಬಸ್ ಸೌಕರ್ಯವಿದೆ. ಹಳೇಕೋಟೆ ಗ್ರಾಮದಿಂದ ಆಟೋಗಳು ದೊರೆಯುತ್ತವೆ.

ದೇವಾಲಯಗಳ ಪೂಜಾ ಕೈಂಕರ್ಯಗಳ ಹೆಚ್ಚಿನ ಮಾಹಿತಿಗಾಗಿ ಬೆಟ್ಟದ ಶ್ರೀ ರಂಗನಾಥಸ್ವಾಮಿ ದೇವಾಲಯದ ಹಿರಿಯ ಅರ್ಚಕ ಕೇಶವಮೂರ್ತಿ, ಮೊ.ಸಂಖ್ಯೆ ೯೪೪೮೨೦೭೪೮೯ ಮತ್ತು ಮಾವಿನಕೆರೆ ಶ್ರೀ ಲಕ್ಷ್ಮಿವೆಂಕಟರಮಣಸ್ವಾಮಿ ಅರ್ಚಕರಾದ ಎಂ.ಎಸ್. ಜನಾರ್ಧನ ಭಟ್ಟ ಮೊ.ಸಂಖ್ಯೆ ೭೦೨೬೭೫೬೪೩೩ ಅನ್ನು ಸಂರ್ಪಕಿಸಬಹುದು.ಹಳೇಕೋಟೆ ಬೆಟ್ಟದ ಶ್ರೀ ರಂಗನಾಥಸ್ವಾಮಿ ದೇವಾಲಯದ ಅಲಂಕೃತ ಶ್ರೀ ರಂಗನಾಥಸ್ವಾಮಿಯ ಉದ್ಭವ ಮೂರ್ತಿ ಹಾಗೂ ಪ್ರತಿಷ್ಠಾಪಿತ ಶ್ರೀ ಸ್ವಾಮಿಯ ಮೂರ್ತಿ.

PREV

Recommended Stories

2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ
ಕುರ್ಚಿಯಲ್ಲೇ ಬಿಟ್ಟುಹೋಗಿದ್ದ ಡೈರಿಯಲ್ಲಿತ್ತು ಅಚ್ಚರಿಯ ಮಾಹಿತಿ : ಡೈರಿ ರಹಸ್ಯ...