ರೈತ ಮಹಿಳೆ ಪಹಣಿ ಲೋಪ ಸರಿಪಡಿಸಲು ಮೇ 28ರವರೆಗೆ ಗಡುವು

KannadaprabhaNewsNetwork | Published : May 11, 2024 1:30 AM

ಸಾರಾಂಶ

ಕೊಗ್ಗನೂರು ಗ್ರಾಮದ ರೈತ ಮಹಿಳೆ ನಿಂಗಮ್ಮ ಅವರಿಗೆ ಸೇರಿದ ಜಮೀನಿನ ಪಹಣಿಯಲ್ಲಿದ್ದ ಲೋಪದೋಷಗಳನ್ನು ಮೇ 27ರೊಳಗೆ ಸರಿಪಡಿಸಬೇಕು. ಇಲ್ಲದಿದ್ದರೆ ದಾವಣಗೆರೆ ತಹಸೀಲ್ದಾರ್ ಕಚೇರಿ ಎದುರು ತೀವ್ರ ಸ್ವರೂಪದ ಹೋರಾಟ ನಡೆಸುವುದಾಗಿ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಜಿಲ್ಲಾಧ್ಯಕ್ಷ ಬುಳ್ಳಾಪುರ ಹನುಮಂತಪ್ಪ ಎಚ್ಚರಿಸಿದ್ದಾರೆ.

- ಸ್ಪಂದಿಸದಿದ್ದರೆ ತಹಸೀಲ್ದಾರ್‌ ಕಚೇರಿ ಬಳಿ ಉಗ್ರ ಪ್ರತಿಭಟನೆ: ರೈತ ಸಂಘ-ಹಸಿರು ಸೇನೆ ಎಚ್ಚರಿಕೆ

- - -

ಕನ್ನಡಪ್ರಭ ವಾರ್ತೆ ದಾವಣಗೆರೆ

ಕೊಗ್ಗನೂರು ಗ್ರಾಮದ ರೈತ ಮಹಿಳೆ ನಿಂಗಮ್ಮ ಅವರಿಗೆ ಸೇರಿದ ಜಮೀನಿನ ಪಹಣಿಯಲ್ಲಿದ್ದ ಲೋಪದೋಷಗಳನ್ನು ಮೇ 27ರೊಳಗೆ ಸರಿಪಡಿಸಬೇಕು. ಇಲ್ಲದಿದ್ದರೆ ದಾವಣಗೆರೆ ತಹಸೀಲ್ದಾರ್ ಕಚೇರಿ ಎದುರು ತೀವ್ರ ಸ್ವರೂಪದ ಹೋರಾಟ ನಡೆಸುವುದಾಗಿ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಜಿಲ್ಲಾಧ್ಯಕ್ಷ ಬುಳ್ಳಾಪುರ ಹನುಮಂತಪ್ಪ ಎಚ್ಚರಿಸಿದರು.

ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ದಾವಣಗೆರೆ ತಾಲೂಕು ಕೊಗ್ಗನೂರು ಗ್ರಾಮದ ನಿಂಗಮ್ಮ, ಬಸಮ್ಮ, ಕೆಂಚಪ್ಪ ಎಂಬವರಿಗೆ ಸೇರಿದ ರಿ.ಸ.ನಂ.1ರಲ್ಲಿ 2 ಎಕರೆ 19 ಗುಂಟೆ ಜಮೀನಿದೆ. ರಾಷ್ಟ್ರೀಯ ಹೆದ್ದಾರಿಗೆಂದು 14 ಗುಂಟೆ ಜಮೀನು ಹೋಗಿದ್ದು, ಪಹಣಿಯಲ್ಲಿ ಕೇವಲ 12 ಗುಂಟೆ ತೋರಿಸುತ್ತಿದೆ ಎಂದರು.

ಬಸಮ್ಮ ಅವರಿಂದ 2 ಗುಂಟೆ ಇಂಡೀಕರಣ ಮಾಡಿ, ನಿಂಗಮ್ಮನವರಿಗೆ ಸೇರಿದ ಜಮೀನಿಗೆ 26 ಗುಂಟೆಯನ್ನು ಪಹಣಿಯಲ್ಲಿ ಸರಿಪಡಿಸಬೇಕು. ಪಹಣಿ ಸರಿಪಡಿಸುವಂತೆ ನಿಂಗಮ್ಮ ಮತ್ತು ಮಗ ಹಾಲೇಶ 1 ವರ್ಷದಿಂದಲೂ ದಾವಣಗೆರೆ ತಹಸೀಲ್ದಾರ್ ಕಚೇರಿಗೆ ಅಲೆದಾಡುತ್ತಿದ್ದಾರೆ. ಆದರೆ, ಯಾವೊಬ್ಬ ಅಧಿಕಾರಿ, ಸಿಬ್ಬಂದಿಯೂ ಅವರ ಸಮಸ್ಯೆಗೆ ಸ್ಪಂದಿಸಿಲ್ಲ. ಸಂಘದ ಗಮನಕ್ಕೆ ಈ ವಿಚಾರ ಬಂದ ಹಿನ್ನೆಲೆ ತಹಸೀಲ್ದಾರ್‌ ಅವರನ್ನು ಭೇಟಿ ಮಾಡಲಾಗಿದೆ. ಆಗ ಒಂದೇ ವಾರದಲ್ಲೇ ಸಮಸ್ಯೆ ಸರಿಪಡಿಸುವ ಭರವಸೆ ನೀಡಿದ್ದರು. ಆದರೆ, ಈವರೆಗೆ ಸಮಸ್ಯೆ ಮಾತ್ರ ಪರಿಹಾರ ಕಂಡಿಲ್ಲ ಎಂದು ದೂರಿದರು.

ಸಂಘ ಹಮ್ಮಿಕೊಳ್ಳುವ ಹೋರಾಟದ ಬ್ಯಾನರನ್ನು ಮೇ 20ರಂದು ತಹಸೀಲ್ದಾರ್ ಕಚೇರಿ ಎದುರು ಕಟ್ಟಿ, ರೈತ ಕುಟುಂಬಕ್ಕೆ ನ್ಯಾಯ ಸಿಗುವವರೆಗೆ ನಮ್ಮ ಹೋರಾಟ ನಡೆಯಲಿದೆ. ಅಲ್ಲಿವರೆಗೆ ಸಂಘದ ಬ್ಯಾನರ್‌ಗೆ ಏನೇ ಆದರೂ ತಹಸೀಲ್ದಾರರೇ ನೇರ ಹೊಣೆ ಎಂದು ತಿಳಿಸಿದರು.

ಸಂಘದ ಎಸ್.ಟಿ.ಪರಮೇಶ್ವರಪ್ಪ, ಐಗೂರು ಶಿವಮೂರ್ತೆಪ್ಪ, ಕೊಗ್ಗನೂರು ಹನುಮಂತಪ್ಪ, ಕರಿಲಕ್ಕೇನಹಳ್ಳಿ ಹನುಮಂತಪ್ಪ, ಸಿಡ್ಲಪ್ಪ ಇತರರು ಇದ್ದರು.

- - - -10ಕೆಡಿವಿಜಿ2:

ದಾವಣಗೆರೆಯಲ್ಲಿ ರೈತ ಸಂಘದ ಜಿಲ್ಲಾಧ್ಯಕ್ಷ ಬುಳ್ಳಾಪುರ ಹನುಮಂತಪ್ಪ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು.

Share this article