ಶಿಗ್ಗಾಂವಿ: ತಾಲೂಕಿನ ಹಿರೇಬೆಂಡಿಗೇರಿ ಗ್ರಾಮದ ಕಾಶಿ ಮಹಾಸಂಸ್ಥಾನದ ಶಾಖಾ ಮಠದ ನೂತನ ಪಟ್ಟಾಧ್ಯಕ್ಷರಾಗಿ ಚನ್ನಯ್ಯ ದೇವರು ನೇಮಕವಾಗಿದ್ದಾರೆ. ಅವರ ಪಟ್ಟಾಧಿಕಾರ ಸಮಾರಂಭ ಮೇ ೪ರಂದು ಹರಗುರು ಚರಮೂರ್ತಿಗಳ ಸಮ್ಮುಖದಲ್ಲಿ ಜರುಗಲಿದೆ ಎಂದು ಶಿಗ್ಗಾಂವಿ ವಿರಕ್ತಮಠದ ಸಂಗನಬಸವ ಸ್ವಾಮೀಜಿ ತಿಳಿಸಿದರು.ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನೂತನ ಶ್ರೀಗಳ ಗುರು ಪಟ್ಟಾಧಿಕಾರ ಮಹೋತ್ಸವದ ರೂಪುರೇಷೆ ಕಾರ್ಯಕ್ರಮಗಳ ಸಿದ್ಧತೆ ಕುರಿತು ಚರ್ಚಿಸಲು ಶಿಗ್ಗಾಂವಿ ವಿರಕ್ತಮಠ ಮಂಗಲಭವನದಲ್ಲಿ ಮಾ. ೧೯ರಂದು ಬೆಳಗ್ಗೆ ೧೦ಕ್ಕೆ ಪೂರ್ವಬಾವಿ ಸಭೆ ಕರೆಯಲಾಗಿದೆ. ಅಂದು ನಡೆಯುವ ಸಭೆಯಲ್ಲಿ ಭಕ್ತರು ಪಾಲ್ಗೊಂಡು ಸಲಹೆ- ಸೂಚನೆ ನೀಡಬೇಕು ಎಂದರು. ಹಿರೇಬೆಂಡಿಗೇರಿ ಗ್ರಾಮದ ದಂಪತಿ ಪುಟ್ಟಯ್ಯಸ್ವಾಮಿ ಹಾಗೂ ಅನ್ನಪೂರ್ಣಮ್ಮನವರ ಪುತ್ರರಾಗಿ ಜನಿಸಿದ ಚನ್ನಯ್ಯ ದೇವರು, ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣವನ್ನು ಹಿರೇಬೆಂಡಿಗೇರಿಯಲ್ಲಿ ಪಡೆದಿದ್ದಾರೆ. ಕಳೆದ ೨೦ ವರ್ಷಗಳಿಂದಲೂ ಈ ಭಾಗದಲ್ಲಿ ಅವರು ಕೈಗೊಂಡ ಧಾರ್ಮಿಕ, ಆಧ್ಯಾತ್ಮಿಕ, ಸಾಮಾಜಿಕ, ಸಾಂಸ್ಕೃತಿಕ ಸುಧಾರಣೆಗಳು ಚನ್ನಯ್ಯ ದೇವರನ್ನು ಹಿರೇಬೆಂಡಿಗೇರಿಯ ಕಾಶಿ ಶಾಖಾ ಹಿರೇಮಠದ ಪಟ್ಟಾಧ್ಯಕ್ಷರಾಗುವರೆಗೂ ಕರೆತಂದಿವೆ. ಕಾಶಿ ಮಹಾಪೀಠದ ಡಾ. ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರ ಸಾನ್ನಿಧ್ಯದಲ್ಲಿ ನೂತನ ಶ್ರೀಗಳ ಪಟ್ಟಾಧಿಕಾರ ಮಹೋತ್ಸವ ಜರುಗಲಿದೆ ಎಂದರು.ಕೆಸಿಸಿ ಬ್ಯಾಂಕ್ ಮಾಜಿ ನಿರ್ದೇಶಕ ಗಂಗಾಧರ ಸಾತಣ್ಣವರ ಮಾತನಾಡಿ, ಎಲ್ಲ ಮಠಮಂದಿರಗಳಿಗೆ ತನ್ನದೆ ಆದ ಆಸ್ತಿ ಇದ್ದು, ಆದರೆ ಈ ಮಠಕ್ಕೆ ಯಾವುದೆ ಆಸ್ತಿ ಇಲ್ಲ. ಆದರೂ ಮಠಕ್ಕೆ ಸ್ವಾಮೀಜಿ ಆಗಬೇಕು ಅನ್ನುವುದು ದೊಡ್ಡದು ಎಂದರು.ಶಿವಾನಂದಸ್ವಾಮಿ ಹಿರೇಮಠ, ಗದಗಯ್ಯ ಹಿರೇಮಠ, ಬಸವರಾಜ ಹೆಸರೂರ, ಪುರಸಭೆ ಸದಸ್ಯ ರಮೇಶ ವನಹಳ್ಳಿ, ದಯಾನಂದ ಅಕ್ಕಿ, ಶಂಕರಗೌಡ್ರ ಪಾಟೀಲ, ಎಂ.ಎಸ್. ಹಿರೇಮಠ, ಶಶಿಧರ ಹೊನ್ನಣ್ಣನವರ ಇತರರಿದ್ದರು. ಬಿಜೆಪಿ ನಿಕಟಪೂರ್ವ ಅಧ್ಯಕ್ಷ ಶಿವಾನಂದ ಮ್ಯಾಗೇರಿ ಮಾತನಾಡಿದರು.
ಹಳೆ ವಿದ್ಯಾರ್ಥಿಗಳಿಂದ ಗುರುವಂದನಾ ಕಾರ್ಯಕ್ರಮಹಾನಗಲ್ಲ: ಹಾನಗಲ್ಲಿನ ಶ್ರೀ ಕುಮಾರೇಶ್ವರ ಕಲಾ ವಾಣಿಜ್ಯ ಮಹಾವಿದ್ಯಾಲಯ ಹಾಗೂ ನ್ಯೂ ಕಾಂಪೋಜಿಟ್ ಜ್ಯೂನಿಯರ್ ಕಾಲೇಜಿನಲ್ಲಿ ಅಧ್ಯಯನ ಮಾಡಿ 1992- 93ರಲ್ಲಿ ಪದವಿ ಪೂರ್ಣಗೊಳಿಸಿದ ವಿದ್ಯಾರ್ಥಿಗಳು ಮಾ. 23 ರಂದು ಗುರುವಂದನಾ ಕಾರ್ಯಕ್ರಮ ಆಯೋಜಿಸಿದ್ದಾರೆ.
ಮಾ. 23ರ ಬೆಳಗ್ಗೆ 10 ಗಂಟೆಗೆ ಪಟ್ಟಣದ ಶ್ರೀ ಕುಮಾರೇಶ್ವರ ಕಲಾ ವಾಣಿಜ್ಯ ಮಹಾವಿದ್ಯಾಲಯದ ಸಭಾಂಗಣದಲ್ಲಿ ನಡೆಯುವ ಸಮಾರಂಭದಲ್ಲಿ ತಮಗೆ ವಿದ್ಯಾದಾನ ಮಾಡಿದ ಎಲ್ಲ ಗುರು ಬಳಗವನ್ನು ಗೌರವಿಸಲಿದ್ದಾರೆ. 1988 ಮತ್ತು 1989ರಲ್ಲಿ ನ್ಯೂಕಾಂಪೋಜಿಟ್ ಜ್ಯೂನಿಯರ್ ಕಾಲೇಜಿನಲ್ಲಿ ಪಿಯುಸಿ ಹಾಗೂ 1990ರಿಂದ 1992ರ ಅವಧಿಯಲ್ಲಿ ಶ್ರೀ ಕುಮಾರೇಶ್ವರ ಕಲಾ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಪದವಿ ಅಧ್ಯಯನ ಮಾಡಿದ ಎಲ್ಲ ವಿದ್ಯಾರ್ಥಿಗಳು ಈ ಗೌರವಪೂರ್ಣ ಸಮಾರಂಭದಲ್ಲಿ ಪಾಲ್ಗೊಳ್ಳುವಂತೆ ಸಹಕಾರ ಲೆಕ್ಕ ಪರಿಶೋಧನಾ ಇಲಾಖೆ ಉಪನಿರ್ದೇಶಕ ಅರವಿಂದ ನಾಗಜ್ಜನವರ ಹಾಗೂ ಗೆಳೆಯರ ಬಳಗ ಮನವಿ ಮಾಡಿದೆ.