ಶಿಗ್ಗಾಂವಿ: ಗಣೇಶೋತ್ಸವ ನಮ್ಮ ದೇಶದ ಸಂಸ್ಕೃತಿಯ ಅನಾವರಣದ ವೇದಿಕೆಗಳಾಗಬೇಕು. ವೃದ್ಧರು, ಮಹಿಳೆಯರು, ಮಕ್ಕಳು ಭಾಗವಹಿಸಿ ಆನಂದಿಸುವಂತಾಗಬೇಕು ಎಂದು ಶಿಗ್ಗಾಂವಿ ಪೊಲೀಸ್ ಉಪ ಅಧೀಕ್ಷಕ ಕೆ.ವಿ. ಗುರುಶಾಂತಪ್ಪ ಹೇಳಿದರು.
ಪಟ್ಟಣದ ಡಾ. ಬಿ.ಆರ್. ಅಂಬೇಡ್ಕರ್ ಆಡಳಿತ ಸಂಕೀರ್ಣದ ಸಭಾಭವನದಲ್ಲಿ ನಡೆದ ಶಾಂತಿಸಭೆಯಲ್ಲಿ ಮಾತನಾಡಿದ ಅವರು, ಸುಪ್ರೀಂ ಕೋರ್ಟ್ ಆದೇಶದ ಪ್ರಕಾರ 75 ಡೆಸಿಬಲ್ ವರೆಗೆ ಧ್ವನಿವರ್ಧಕ ಬಳಸಲು ಅವಕಾಶವಿದೆ. ಡಿಜೆ ಬಳಕೆಗೆ ಅವಕಾಶವಿಲ್ಲ. 1000 ಡೆಸಿಬಲ್ ಹೊಂದಿರುವ ಡಿಜೆ ಬಳಸುವುದರಿಂದ ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ ಎಂದು ಹೇಳಿದರು.ಗಣೇಶ ಪೆಂಡಾಲ್‌ನಲ್ಲಿ ಇಸ್ಪೀಟ್ ಹಾಗೂ ಜೂಜಾಟದಂತಹ ಕೃತ್ಯಗಳಿಗೆ ಗಣೇಶ ಸಮಿತಿಯವರು ಸಹಕರಿಸಿದರೆ ಅವರ ಮೇಲೆ ನಿರ್ದಾಕ್ಷಿಣ್ಯ ಕ್ರಮ ಜರುಗಿಸುವ ಜತೆಗೆ ಸಿಬ್ಬಂದಿ ಯಾರಾದರೂ ಅದರಲ್ಲಿ ಭಾಗಿಯಾದರೆ ಅವರ ಮೇಲೆ ಕ್ರಮ ಜರುಗಿಸುತ್ತೇವೆ ಎಂದರು.
ಶಿಗ್ಗಾಂವಿ ಪಿಎಸ್‌ಐ ವಿ.ಎಸ್. ಹಿರೇಮಠ ಮಾತನಾಡಿ, ಗಣೇಶ ಮಂಡಳಿಯ ವಿವಿಧ ಸಮಿತಿಯವರು ಕಡ್ಡಾಯವಾಗಿ ಗಣಪತಿ ಪ್ರತಿಷ್ಠಾಪಿಸುವ ಜಾಗಕ್ಕೆ ತಹಸೀಲ್ದಾರರಿಂದ ಪರವಾನಗಿ ಪಡೆಯಬೇಕು. ಬ್ಯಾನರ್, ಬಟ್ಟಿಂಗ್ಸ್ ಕಟ್ಟುವ ಪೂರ್ವದಲ್ಲಿ ಪುರಸಭೆಯಿಂದ ಪರವಾನಗಿ ಪಡೆಯಬೇಕು. ಗಣೇಶ ಮಂಡಳಿ ಹಾಗೂ ಸಮಿತಿಯವರು ಕಡ್ಡಾಯವಾಗಿ ಪ್ರತಿಷ್ಠಾಪನೆ ಮಾಡಿದ ಸ್ಥಳದಲ್ಲಿ ಸಿಸಿ ಕ್ಯಾಮೆರಾ ಅಳವಡಿಸಬೇಕು. ಯಾವುದೇ ಕಾನೂನುಬಾಹಿರ ಚಟುವಟಿಕೆ ನಡೆಯದಂತೆ ಕಮಿಟಿ ನಿಗಾ ವಹಿಸಬೇಕು. ಅಕ್ರಮ ಚಟುವಟಿಕೆ ನಡೆದರೆ ಕಾನೂನಾತ್ಮಕ ಕ್ರಮಕ್ಕೆ ಮುಂದಾಗಬೇಕಾಗುತ್ತದೆ. ಗಣೇಶ ಮೂರ್ತಿ ವಿಸರ್ಜನೆ ಸಮಯದಲ್ಲಿ ಮೆರವಣಿಗೆ ಶಾಂತ ರೀತಿಯಲ್ಲಿ ಇರಬೇಕು ಎಂದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಿಗ್ಗಾಂವಿ ತಹಸೀಲ್ದಾರ್ ಯಲ್ಲಪ್ಪ ಗೋಣೆಣ್ಣವರ ಮಾತನಾಡಿ, ನಮ್ಮ ಹಬ್ಬಗಳು ನಮ್ಮ ಸಂಸ್ಕೃತಿ ಬೆಳೆಸುವಂತಿರಲಿ. ಬೇರೆ ಸಮುದಾಯಕ್ಕೆ ತೊಂದರೆ ಆಗಬಾರದು. ಗಣೇಶ ಹಬ್ಬ ಮುಗಿಯುವ ವರೆಗೂ ಗಣೇಶ ವಿಜರ್ಜನೆಯ ಮಾರ್ಗಗಳಲ್ಲಿ ಪುರಸಭೆಯವರು ಯಾವುದೇ ಕಾಮಗಾರಿ ಕೈಗೊಳ್ಳಬಾರದು. ಮೆರವಣಿಗೆ ಹೋಗುವ ರಸ್ತೆ ದುರಸ್ತಿ ಮಾಡಬೇಕು ಎಂದು ಹೇಳಿದರು.
ಹೆಸ್ಕಾಂ ಸೆಕ್ಷನ್ ಅಧಿಕಾರಿ ಬಸವರಾಜ ಬಂಡಿವಡ್ಡರ, ಅಗ್ನಿಶಾಮಕ ಠಾಣೆಯ ವೆಂಕಟೇಶ, ಪುರಸಭೆಯ ಖಾಂಜಾದೆ ಭಾಗವಹಿಸಿದ್ದರು. ಪೊಲೀಸ್ ಸಿಬ್ಬಂದಿ ಸುರೇಶ ದೇವಸೂರ ಕಾರ್ಯಕ್ರಮ ನಿರೂಪಿಸಿದರು.