ಸದಾಕಾಲ ನಮ್ಮೊಳಗೆ ಬೆಳಗುವ ಕನ್ನಡ ಜ್ಯೋತಿಯಾಗಬೇಕು. ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ಇಡೀ ವರ್ಷದುದ್ದಕ್ಕೂ ಒಂದಿಲ್ಲೊಂದು ವಿನೂತನ ರೀತಿಯಲ್ಲಿ ಕನ್ನಡ ನಾಡು, ನುಡಿ, ಸಾಹಿತ್ಯ, ಸಂಸ್ಕೃತಿ ತೆರೆದಿಡುವ ಅರ್ಥಪೂರ್ಣ ಕಾರ್ಯಕ್ರಮಗಳು ನಡೆಯುತ್ತವೆ.
ಕನ್ನಡಪ್ರಭ ವಾರ್ತೆ ಧಾರವಾಡ
ಕನ್ನಡ ಕೇವಲ ನವೆಂಬರ್ ತಿಂಗಳಿಗೆ ಮಾತ್ರ ಸೀಮಿತವಾಗಬಾರದು. ಸದಾಕಾಲ ನಮ್ಮೊಳಗೆ ಬೆಳಗುವ ಕನ್ನಡ ಜ್ಯೋತಿಯಾಗಬೇಕು. ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ಇಡೀ ವರ್ಷದುದ್ದಕ್ಕೂ ಒಂದಿಲ್ಲೊಂದು ವಿನೂತನ ರೀತಿಯಲ್ಲಿ ಕನ್ನಡ ನಾಡು, ನುಡಿ, ಸಾಹಿತ್ಯ, ಸಂಸ್ಕೃತಿ ತೆರೆದಿಡುವ ಅರ್ಥಪೂರ್ಣ ಕಾರ್ಯಕ್ರಮಗಳು ನಡೆಯುತ್ತವೆ ಎಂದು ಪರಿಸರವಾದಿ ಕೆ.ಎಚ್. ನಾಯಕ ಹೇಳಿದರು.
ಕರ್ನಾಟಕ ವಿದ್ಯಾವರ್ಧಕ ಸಂಘವು 71ನೇ ಕರ್ನಾಟಕ ರಾಜ್ಯೋತ್ಸವ ನಿಮಿತ್ತ ಪ್ರಯುಕ್ತ ಇಡೀ ತಿಂಗಳು ಆಯೋಜಿಸಿರುವ ವೈವಿಧ್ಯಮಯ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕನ್ನಡಿಗರು ಪ್ರತಿದಿನ ಸಂಜೆ ಎರಡು ಗಂಟೆ ತಮ್ಮ ಮೊಬೈಲ್‌ಗೆ ವಿಶ್ರಾಂತಿ ನೀಡಿ, ಕವಿವ ಸಂಘಕ್ಕೆ ಬಂದರೆ ಕನ್ನಡ ಸಾಹಿತ್ಯ, ಸಂಸ್ಕೃತಿ, ಭಾಷೆ, ನಾಡು, ನುಡಿ, ಪರಂಪರೆ ಬಿಂಬಿಸುವ ಮೌಲಿಕ ಕಾರ್ಯಕ್ರಮಗಳು ನಮ್ಮನ್ನು ಹೊಸ ಚಿಂತನೆ, ಹೊಸ ಅರಿವಿಗೆ ಹಚ್ಚುತ್ತವೆ. ಎಲ್ಲರೂ ಇದರ ಸದುಪಯೋಗ ಪಡೆದುಕೊಳ್ಳಬೇಕೆಂದರು.
ಪ್ರಾಚಾರ್ಯರಾದ ಡಾ. ವೀಣಾ ಬಿರಾದಾರ ಮಾತನಾಡಿ, ಅಕ್ಕಮಹಾದೇವಿ ದೃಶ್ಯ ರೂಪಕವನ್ನು ಗೃಹಿಣಿಯರೇ ಕೂಡಿಕೊಂಡು ವಚನ ಭಾವಗಳ ಜತೆ ಪ್ರದರ್ಶನ ಮಾಡಿದ ಮೊದಲ ಪ್ರಯತ್ನವಾಗಿದೆ. ಇದಕ್ಕೆ ಕವಿವ ಸಂಘದ ವೇದಿಕೆ ದೊರೆತಿದ್ದು ಸಂತಸ ತಂದಿದೆ ಎಂದರು.
ರಜೆ ರಹಿತ ಸೇವೆ ಸಲ್ಲಿಸಿದ ಧಾರವಾಡದ ಆರ್.ಎ. ಗುಳಗುಂದಿ ಅವರಿಗೆ ಪುರಸ್ಕಾರ ಫಲಕ ನೀಡಿ ಸಾಧಕರ ಸನ್ಮಾನ ಮಾಡಿ ಗೌರವಿಸಲಾಯಿತು. ಡಾ. ಅರ್ಜುನ ವಠಾರ ಅವರಿಂದ ಸುಗಮ ಸಂಗೀತ, ಡಾ. ವೀಣಾ ಬಿರಾದಾರ ಹಾಗೂ ತಂಡ ಅನುಭವ ಮಂಟಪ ಸಂಘದಿಂದ ವೀರ ವೀರಾಗಿಣಿ ಅಕ್ಕಮಹಾದೇವಿ’ ದೃಶ್ಯ ರೂಪಕ ಹಾಗೂ ಕಬನೂರಿನ ಶ್ರೀಅಲ್ಲಿಕೇರಿ ಬಸವೇಶ್ವರ ಸಾಂಸ್ಕೃತಿಕ ಕಲಾ ತಂಡದಿಂದ ಜಾನಪದ ವೈವಿಧ್ಯಮಯ ಕಾರ್ಯಕ್ರಮಗಳು ಜರುಗಿದವು.
ವೀರಣ್ಣ ಒಡ್ಡೀನ ಸ್ವಾಗತಿಸಿದರು. ಶಂಕರ ಹಲಗತ್ತಿ ಪ್ರಾಸ್ತಾವಿಕ ಮಾತನಾಡಿದರು. ಡಾ. ಶೈಲಜಾ ತ. ಅಮರಶೆಟ್ಟಿ ಸನ್ಮಾನ ಫಲಕ ವಾಚಿಸಿದರು. ಡಾ. ಧನವಂತ ಹಾಜವಗೋಳ ನಿರೂಪಿಸಿ, ಡಾ. ಜಿನದತ್ತ ಹಡಗಲಿ ವಂದಿಸಿದರು. ಡಾ. ಸಂಜೀವ ಕುಲಕರ್ಣಿ, ಬಸವಪ್ರಭು ಹೊಸಕೇರಿ, ಶಂಕರ ಕುಂಬಿ, ಶಿವಾನಂದ ಭಾವಿಕಟ್ಟಿ, ಗುರು ಹಿರೇಮಠ, ವಿಶ್ವೇಶ್ವರಿ ಹಿರೇಮಠ ಹಾಗೂ ಡಾ. ಪಾರ್ವತಿ ಸುರೇಶ ಹಾಲಭಾವಿ, ಲಿಂಗರಾಜ ಪಾಟೀಲ, ವೀರಣ್ಣ ನವಲಗುಂದ, ಬಸವಂತಪ್ಪ ತೋಟದ, ಪುಂಡಲಿಕ ಜಾಧವ, ಚಂದ್ರು ಕುಂಬಾರ, ಎಸ್.ಎಸ್. ಹಿರೇಮಠ ಸೇರಿದಂತೆ ಅನೇಕರಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.