ಕುಂದಗೋಳ: ನಿಮ್ಮೆಲ್ಲರ ಭಕ್ತಿಯ ಶಕ್ತಿಯೇ ಇಂದು ಇಂತಹ ನೆನಪಿನಂಗಳದಲ್ಲಿ ಉಳಿಯುವ ಗುರುವಂದನೆಯ ಜತೆಗೆ ತುಲಾಭಾರ ಮಾಡುವ ಮೂಲಕ ಋಣ ತೀರಿಸಿದ್ದೀರಿ ಎಂದು ಶಿರಹಟ್ಟಿಯ ಫಕೀರ ಸಿದ್ದರಾಮ ಶ್ರೀಗಳು ಹೇಳಿದರು
ವಿದ್ಯಾರ್ಥಿಗಳಾಗಿದ್ದವರು ಒಂದೇ ತರಹದ ಬಟ್ಟೆ ತೊಟ್ಟು ಗೌರವ ಮೂಡಿಸಿದ್ದಾರೆ. ನಡೆ-ನುಡಿ, ಆಚಾರ-ವಿಚಾರಗಳು ನಮ್ಮ ಬದುಕನ್ನು ಬೆಳದಿಂಗಳಾಗಿಸಬೇಕು. ನಮಗೆ ಸಂದ ತುಲಾಭಾರದ ಕಾರ್ಯ ಅದ್ಭುತವಾದದ್ದಾಗಿದೆ. ತಕ್ಕಡಿ ಕೆಳಗಿತ್ತು. ನಾಣ್ಯ ಹಾಕುತ್ತಲೇ ಗುರು ಮೇಲೆದ್ದರೆ, ನಾಣ್ಯ ಕೆಳಗೆ ಹೋಯಿತು. ಇದರರ್ಥ ಅಜ್ಞಾನ ಎಂಬ ತಕ್ಕಡಿಗೆ ಜ್ಞಾನವೆಂಬ ಗುರು ಮೇಲೆ ಬಂದಂತೆ. ಭಕ್ತನಿಗೆ ಯಾವುದೂ ಭಾರವಾಗಬಾರದು, ಗುರು ಹಗುರವಾಗಿರಬೇಕು. ಹಾಗಾಗಿ ನಾನೀಗ ಹೃದಯದ ತಕ್ಕಡಿಯಲ್ಲಿದ್ದೇನೆ ಎಂದು ಫಕೀರ ಸಿದ್ದರಾಮ ಶ್ರೀಗಳು ಹೇಳಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ನಿವೃತ್ತ ಶಿಕ್ಷಕ ಎಸ್.ಕೆ. ಗದಗಿನಮಠ, ಈ ಸಂತೋಷ ನನ್ನ ಆಯುಷ್ಯ ವೃದ್ಧಿಸಿದೆ. ಶಿಕ್ಷಕರ ಮೇಲಿನ ಅಭಿಮಾನ ಹೆಚ್ಚಿನದು. ಸಧ್ಯದ ಪರಿಸ್ಥಿತಿಯಲ್ಲಿ ಸಂಬಂಧಗಳು ಹಳಸಿವೆ. ಹೀಗಿರುವಾಗ ಬಾಂಧವ್ಯ ಬೆಸೆದಿದ್ದು ಸಂತಸ ತಂದಿದೆ. ಈ ಸಂಸ್ಥೆ ಬೆಳೆಯಲು ಶ್ರೀಮಠದ ಒಂಬತ್ತನೇ ಪಟ್ಟಾಧ್ಯಕ್ಷ ಚೆನ್ನವೀರೇಶ್ವರ ಮಹಾಸ್ವಾಮಿಗಳು ಕಾರಣ ಎಂದು ಸ್ಮರಿಸಿದರು.ಅದ್ಯಕ್ಷತೆ ವಹಿಸಿದ್ದ ಸಿ.ಸಿ. ಬೆಳದಡಿ ಅವರ ಪರವಾಗಿ ಶಿಕ್ಷಕ ಡಿ.ಸಿ. ಬೊಮ್ಮನಗೌಡ್ರ ಮಾತನಾಡಿ, ಅಜ್ಜನ ತುಲಾಭಾರ ಮಾಡಿದ ಮೊದಲಿಗರು, ಕಲಿಸಿದ ಶಿಕ್ಷಕರಿಗೆ ಗುರು ನಮನ ಸಲ್ಲಿಸಿದ ನೀವೇ ಧನ್ಯರು. ಈ ಶಾಲೆಯಲ್ಲಿ 9 ಸಾವಿರ ವಿದ್ಯಾರ್ಥಿಗಳು ಕಲಿತು, ಅನೇಕರು ನಾನಾ ಉದ್ಯೋಗದಲ್ಲಿದ್ದಾರೆ. ನೆನಪು ಸ್ಮರಣೀಯ. ಸಮಾಧಾನ ಸಂತೋಷ ತಂದುಕೊಟ್ಟ ಈ ದಿನ ಸ್ಮರಣೀಯ ಎಂದರು.