ಶಿಕಾರಿಪುರ: ಇಂದಿನ ಯುವ ಪೀಳಿಗೆಗೆ ಪುನೀತ್ ರಾಜಕುಮಾರ್ ರವರ ಬದುಕು ಪ್ರೇರಣೆಯಾಗಬೇಕು. ಬದುಕಿದ್ದ ಅಲ್ಪ ಕಾಲದಲ್ಲಿಯೇ ಸರ್ವ ಸಮಾಜಕ್ಕೆ ಮಾದರಿಯಾದ ಅವರ ವ್ಯಕ್ತಿತ್ವದ ಕೆಲ ಅಂಶವನ್ನು ಅಳವಡಿಸಿಕೊಳ್ಳುವ ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದು ಇಲ್ಲಿನ ವಲಯ ಅರಣ್ಯಾಧಿಕಾರಿ ರೇವಣಸಿದ್ದಯ್ಯ ಬಿ. ಹಿರೇಮಠ್ ಕರೆ ನೀಡಿದರು.
ತಂದೆ ರಾಜಕುಮಾರ ಅವರಂತೆಯೇ ಅಪ್ಪುರವರ ಅಭಿನಯದ ಎಲ್ಲ ಚಲನಚಿತ್ರಗಳು ಸಮಾಜಕ್ಕೆ ಮಾದರಿಯಾಗಿವೆ. ನಟರಲ್ಲಿಯೇ ಅಪರೂಪದ ವ್ಯಕ್ತಿತ್ವ ಹೊಂದಿರುವ ನಟನಾಗಿದ್ದ ಪುನೀತ್ ರಾಜಕುಮಾರ್ ಅವರು ಅಪ್ಪಾಜಿಯಂತೆಯೆ ಕಣ್ಣಿಗೆ ಕಾಣದ ಹಾಗೆ ದಾನ ಮಾಡಿದ ದೊಡ್ಡ ಮನುಷ್ಯ ಎಂದರು.
ಪುನೀತ್ ಅವರು ನಮ್ಮ ಅರಣ್ಯ ಇಲಾಖೆಯ ರಾಯಭಾರಿಯಾಗಿದ್ದರು. ನಾವು ಬೇರೆ ದೇಶದ ಅರಣ್ಯಗಳ ಕುರಿತು ಮಾತನಾಡುತ್ತೇವೆ ಆದರೆ ಅಪ್ಪು ಗಂಧದಗುಡಿ ಎನ್ನುವ ಸಿನಿಮಾ ಮಾಡಿ ಕಾಡು ಮತ್ತು ವನ್ಯ ಜೀವಿಗಳ ಉಳಿವಿನ ಕುರಿತು ಮಕ್ಕಳಿಗೆ ಪ್ರೇರಣೆಯಾದರು. ಇದು ನಮ್ಮ ಕರ್ನಾಟಕದ ಹೆಮ್ಮೆ. ಅವರ ತತ್ವ ಆದರ್ಶಗಳು ಎಂದೆಂದಿಗೂ ಪ್ರಸ್ತುತ ಎಂದು ಹೇಳಿದರು.ಇದೇ ವೇಳೆ ಶಾಲಾ ಮಕ್ಕಳಿಗೆ ಸಸಿ ವಿತರಿಸಿ, ಸಾರ್ವಜನಿಕರಿಗೆ ಅನ್ನ ಸಂತರ್ಪಣೆಯನ್ನು ಹಮ್ಮಿಕೊಳ್ಳಲಾಗಿತ್ತು.ಎ.ಸಿ.ಎಫ್ ರವೀಂದ್ರನಾಯ್ಕ್, ಡಿಆರ್.ಎಫ್.ಓ ಪ್ರಮೋದ್.ಕೆ, ಅಪ್ಪು ಅಭಿಮಾನಿ ಬಳಗದ ಪ್ರಮುಖರಾದ ಆರ್.ರಾಜಕುಮಾರ್, ವೈಭವ ಬಸವರಾಜ್, ಸುಬ್ರಮಣ್ಯ ವಿ.ರೇವಣಕರ್, ರವಿ, ಸಲೀಂ, ಮಧು, ಗಿಡ್ಡಪ್ಪ, ಕಾಳಿಂಗರಾವ್, ಮಂಜುನಾಥ್, ಯೋಗೇಶ್ ಇತರರರು ಹಾಜರಿದ್ದರು.