ನರಗುಂದ: ಮಹಿಳೆಗೆ ತಾಯಿ ಸ್ಥಾನದ ಗೌರವವನ್ನು ನಮ್ಮ ಸಮಾಜ ಕೊಡುತ್ತದೆ. ಹಾಗಾಗಿ ಸಮಾಜ ಸುಧಾರಣೆಯಲ್ಲಿ ಮಹಿಳೆ ಪಾತ್ರ ಅಪಾರವಾಗಿದೆ ಎಂದು ಅಭಿನವ ಯಚ್ಚರ ಶ್ರೀಗಳು ಹೇಳಿದರು.
ಅವರು ತಾಲೂಕಿನ ಶಿರೋಳ ಗ್ರಾಮದ ಜಗದ್ಗುರು ಯಚ್ಚರಸ್ವಾಮಿಗಳ ಗವಿಮಠದಲ್ಲಿ ನಡೆದ 17ನೇ ಮಾಸಿಕ ಶಿವಾನುಭವ ಗೋಷ್ಠಿ ಹಾಗೂ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ನಮ್ಮ ಇಡೀ ಜೀವನ ಸ್ತ್ರೀ ಅವಲಂಬಿತ ಜೀವನವಾಗಿದೆ. ತಾಯಿಯಾಗಿ, ತಂಗಿಯಾಗಿ, ಅಕ್ಕನಾಗಿ, ಸಖಿಯಾಗಿ ಮಡದಿಯಾಗಿ ಹೀಗೆ ಮನುಷ್ಯನ ಜೀವನದಲ್ಲಿ ಮಹಿಳೆಯ ಪಾತ್ರವಿರುತ್ತದೆ. ಒಂದು ಮನೆಯನ್ನು ಸುಂದರವಾಗಿಸುವುದಲ್ಲದೆ ಸಮಾಜವನ್ನು ಕೂಡ ತಿದ್ದುವ ಶಕ್ತಿ ಮಹಿಳೆಯಲ್ಲಿದೆ. ಮಹಿಳೆ ಇಲ್ಲದೆ ಯಾರ ಜೀವನವೂ ಮುನ್ನಡೆಯಲು ಸಾಧ್ಯವಿಲ್ಲ. ಹಾಗಾಗಿ ಸಮಾಜದಲ್ಲಿ ಮಹಿಳೆಯ ಪಾತ್ರ ದೊಡ್ಡದು ಎಂದು ಹೇಳಿದರು.ಮಾತೃ ದೇವೋ ಭವಃ ಎನ್ನುವ ವಿಷಯದ ಕುರಿತು ಬೀಳಗಿಯ ಜ್ಞಾನ ಸಿದ್ಧಾಶ್ರಮದ ಜ್ಞಾನಾನಂದ ಶರಣರು ಮಾತನಾಡಿ, ತಾಯಿ ತನ್ನ ಇಡೀ ಜೀವನವನ್ನು ಸುಧಾರಿಸಲು ಶ್ರಮವಹಿಸಿ ದುಡಿಯುತ್ತಾಳೆ. ತಾಯಿ ಇಲ್ಲದಿದ್ದರೆ ಈ ಭೂಮಿಯ ಮೇಲೆ ಏನು ಇಲ್ಲ, ಹಾಗಾಗಿ ನಮ್ಮ ಸನಾತನ ಸಂಸ್ಕೃತಿಯಲ್ಲಿ ತಾಯಿಗೆ ಮೊದಲ ಆದ್ಯತೆಯನ್ನು ನೀಡಿದ್ದಾರೆ ಎಂದರು.
ಶಿಕ್ಷಕ ಎಚ್.ವಿ. ಬ್ಯಾಡಗಿ ಮಾತನಾಡಿ, ಗವಿಮಠ ಪ್ರತಿಯೊಂದು ರಂಗದಲ್ಲೂ ಸಮಾಜವನ್ನು ಕಟ್ಟುವ ಕೆಲಸ ಮಾಡುತ್ತಿದೆ. ಗವಿಮಠದ ಕಾರ್ಯ ಶ್ಲಾಘನೀಯ ಎಂದರು.ಕಾರ್ಯಕ್ರಮದಲ್ಲಿ ನರೇಗಲ್ ಗ್ರಾಮದ ಶಿಕ್ಷಕಿ ರಿಂದಮ್ಮ ವಡ್ಡಟ್ಟಿ, ಜಿ.ಬಿ. ಚಿಕ್ಕಣ್ಣವರ, ಎಸ್.ಪಿ. ಅಂಬೋರಿ, ಇ.ಎಂ. ನದಾಫ್, ರೇಣುಕಾ ಬ್ಯಾಡಗಿ, ಆರೋಗ್ಯ ಸಹಾಯಕಿ ಆರ್. ಸುಮಿತ್ರಾ, ಎಂ.ಎಚ್. ಶಾಂತಪ್ಪನವರ ಸೇರಿದಂತೆ ಮುಂತಾದವರು ಇದ್ದರು. ಶ್ರೀಕಾಂತ ದೊಡ್ಡಮನಿ ಸ್ವಾಗತಿಸಿದರು. ಸುನೀಲ ಕಳಸದ ಕಾರ್ಯಕ್ರಮ ನಿರೂಪಿಸಿದರು. ಎಸ್.ವೈ. ಮುಲ್ಕಿಪಾಟೀಲ ವಂದಿಸಿದರು.