ಸಾಹಿತ್ಯ ಪರಿಷತ್ ಆಶಯಕ್ಕೆ ಸಹಕಾರ ದೊರೆಯಲಿ: ಸಿದ್ದಲಿಂಗಪ್ಪ

KannadaprabhaNewsNetwork | Published : Jan 15, 2024 1:46 AM

ಸಾರಾಂಶ

ಇತ್ತೀಚೆಗೆ ನಡೆದ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಅಚ್ಚುಕಟ್ಟಾಗಿ, ವ್ಯವಸ್ಥಿತವಾಗಿತ್ತು. ಗೋಷ್ಠಿಗಳ ಜೊತೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಸಮ್ಮೇಳನದ ಏಕತಾನತೆಯನ್ನು ವೈವಿಧ್ಯಮಯಗೊಳಿಸಲಾಗಿತ್ತು. ಸಮ್ಮೇಳನದ ಖರ್ಚು,ವೆಚ್ಚವನ್ನು ಪತ್ರಿಕೆಗಳಿಗೆ ಪ್ರಕಟಣೆ ನಿಡುವ ಮೂಲಕ ಬಹಿರಂಗಪಡಿಸಿದ್ದ ಜಿಲ್ಲಾ ಕಸಾಪದ ಕಾರ್ಯ ಅಭಿನಂದನೀಯ.

ಕನ್ನಡಪ್ರಭ ವಾರ್ತೆ ತುಮಕೂರು

ಕನ್ನಡ ಸಾಹಿತ್ಯ ಪರಿಷತ್ತಿನ ಆಶಯಗಳ ಈಡೇರಿಕೆಗೆ ಎಲ್ಲರೂ ಸಹಕಾರ ನೀಡಬೇಕು, ನಮ್ಮ ನಾಡು, ನುಡಿ, ಕಲೆ, ಸಂಸ್ಕೃತಿಯನ್ನು ಮುಂದಿನ ತಲೆಮಾರಿಗೆ ಉಳಿಸಿ, ಬೆಳೆಸಲು ಎಲ್ಲರ ಸಹಕಾರ ಅಗತ್ಯವಿದೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ.ಎಸ್.ಸಿದ್ಧಲಿಂಗಪ್ಪ ಹೇಳಿದರು.

ನಗರದ ಕನ್ನಡ ಭವನದಲ್ಲಿ ಭಾನುವಾರ ನಡೆದ ಪ್ರೊ.ಎಸ್.ಆರ್.ದೇವಪ್ರಕಾಶ್ ಪ್ರವಾಸ ಸಾಹಿತ್ಯ ಹಾಗೂ ಭಾಗೀರಥಮ್ಮ ಶಾಂಪೂರ್‌ಕರ್ ಮಕ್ಕಳ ಸಾಹಿತ್ಯ ದತ್ತಿ ಪ್ರಶಸ್ತಿ ಪ್ರದಾನ ಮತ್ತು ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಕಾರ್ಯಕರ್ತರಿಗೆ ಅಭಿನಂದನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ವಿವಿಧ ಸಾಹಿತ್ಯ ಪ್ರಕಾರಗಳನ್ನು ಪ್ರೋತ್ಸಾಹಿಸಲು ಪ್ರೊ.ಎಸ್.ಆರ್.ದೇವಪ್ರಕಾಶ್ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ದತ್ತಿ ನಿಧಿ ಸ್ಥಾಪಿಸಿದ್ದಾರೆ. ಕನ್ನಡ ಸಾಹಿತ್ಯ ಬೆಳವಣಿಗೆಗೆ ಪ್ರೋತ್ಸಾಹ ನೀಡಬೇಕು.ಕನ್ನಡ ಸಾಹಿತ್ಯ ಪರಿಷತ್ ಸ್ಥಾಪಿಸಿದ ನಾಲ್ವಡಿ ಕೃಷ್ಣರಾಜ ಒಡೆಯರ್ ಆಶಯವೂ ಪ್ರೊ.ದೇವಪ್ರಕಾಶ್ ಆಶಯವೂ ಒಂದೇ ಆಗಿದೆ ಎಂದು ಶ್ಲಾಘಿಸಿದರು.

ಈ ಬಾರಿಯ ಪ್ರವಾಸ ಸಾಹಿತ್ಯಕ್ಕೆ ದತ್ತಿ ಪ್ರಶಸ್ತಿ ಪಡೆದ ಕೆ.ಎನ್.ಭಗವಾನ್ ಅವರು ಕೊರಟಗೆರೆ ತಾಲೂಕಿನ ಕ್ಯಾಶವಾರದವರು. ಏರೋನಾಟಿಕಲ್ ಇಂಜಿನಿಯರ್ ಆಗಿದ್ದ ಭಗವಾನ್ , ಸಾಹಿತ್ಯ ಪ್ರೇಮ ಬೆಳೆಸಿಕೊಂಡು ೪೦ ಕೃತಿ ರಚಿಸಿ ಕೊಡುಗೆ ನೀಡಿದ್ದಾರೆ. ಈ ಪ್ರಶಸ್ತಿ ಮೂಲಕ ಅವರನ್ನು ಪರಿಷತ್ತು ಗೌರವಿಸಿ ಅಭಿನಂದಿಸುತ್ತದೆ ಎಂದರು.

ವಿವಿಧ ಪ್ರಕಾರಗಳಲ್ಲಿ ಸಾಹಿತ್ಯ ರಚಿಸಿರುವ ತಿಪಟೂರು ತಾಲೂಕು ಬಿಳಿಗೆರೆಯ ಕೃಷ್ಣಮೂರ್ತಿಯವರು ಮಕ್ಕಳ ಸಾಹಿತ್ಯದಲ್ಲಿ ಹೆಚ್ಚು ತೊಡಗಿಸಿಕೊಂಡು ಮಕ್ಕಳ ಸಾಹಿತ್ಯ ಕ್ಷೇತ್ರವನ್ನು ಶ್ರೀಮಂತಗೊಳಿಸಲು ಕಾರಣವಾಗಿದ್ದಾರೆ ಎಂದು ಪ್ರಶಂಸಿಸಿದರು.

ಈ ವೇಳೆ ಮಕ್ಕಳ ಸಾಹಿತಿ ಪ್ರೊ.ಕೃಷ್ಣಮೂರ್ತಿ ಬಿಳಿಗೆರೆ ಅವರಿಗೆ ಭಾಗೀರಥಮ್ಮ ಶಾಂಪೂರ್‌ಕರ್ ಮಕ್ಕಳ ಸಾಹಿತ್ಯ ದತ್ತಿ ಪ್ರಶಸ್ತಿ, ಕೆ.ಎನ್.ಭಗವಾನ್ ಅವರಿಗೆ ಪ್ರೊ.ಎಸ್.ಆರ್.ದೇವಪ್ರಕಾಶ್ ಪ್ರವಾಸ ಸಾಹಿತ್ಯ ದತ್ತಿ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು.

ಹಿರಿಯ ಗಾಂಧಿವಾದಿ, ಬಾಪೂಜಿ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಎಂ.ಬಸವಯ್ಯ ಮಾತನಾಡಿ, ನಮ್ಮ ಮಕ್ಕಳಿಗೆ ನಾವು ಪರಭಾಷೆ ಕಲಿಸುತ್ತಿದ್ದೇವೆ, ಮುಂದೆ ಅವರು ಪರದೇಸಿಗಳಾಗುತ್ತಾರೆ. ನಮ್ಮ ಭಾಷೆ ಕಲಿಸದೇ ಕಡೆಗಣಿಸಿದ ಕಾರಣ ಅವರು ಮುಂದೆ ನಮ್ಮನ್ನೂ ಕಡೆಗಣಿಸಿ ವಿದೇಶಗಳಿಗೆ ಹೋಗುತ್ತಾರೆ. ಇಂತಹ ವಾತಾವರಣದಲ್ಲಿ ನಾವು ಮಕ್ಕಳನ್ನು ಬೆಳೆಸುತ್ತಿದ್ದೇವೆ ಎಂದು ವಿಷಾದಿಸಿದರು.

ಮಕ್ಕಳಿಗೆ ಮನೆಯಲ್ಲಿ ಸಂಸ್ಕಾರ ಕಲಿಸದಿದ್ದರೆ ಯಾವ ಶಾಲೆಯಲ್ಲೂ ಸಂಸ್ಕಾರ ಕಲಿಸುವುದಿಲ್ಲ. ಈಗಿನ ಶಿಕ್ಷಣ ವ್ಯವಸ್ಥೆಯೂ ಹಾಗೇ ಇದೆ, ಇದೆಲ್ಲವೂ ಮುಂದಿನ ತಲೆಮಾರನ್ನು ದಿಕ್ಕು ತಪ್ಪಿಸುವ ವ್ಯವಸ್ಥೆಯಾಗಿದೆ ಎಂದರು.

ಸಾಹಿತಿ ಡಾ.ಪದ್ಮಾ ಪ್ರಸಾದ್ ಮಾತನಾಡಿ, ಇತ್ತೀಚೆಗೆ ನಡೆದ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಅಚ್ಚುಕಟ್ಟಾಗಿ, ವ್ಯವಸ್ಥಿತವಾಗಿತ್ತು. ಗೋಷ್ಠಿಗಳ ಜೊತೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಸಮ್ಮೇಳನದ ಏಕತಾನತೆಯನ್ನು ವೈವಿಧ್ಯಮಯಗೊಳಿಸಲಾಗಿತ್ತು. ಸಮ್ಮೇಳನದ ಖರ್ಚು,ವೆಚ್ಚವನ್ನು ಪತ್ರಿಕೆಗಳಿಗೆ ಪ್ರಕಟಣೆ ನಿಡುವ ಮೂಲಕ ಬಹಿರಂಗಪಡಿಸಿದ್ದ ಜಿಲ್ಲಾ ಕಸಾಪದ ಕಾರ್ಯ ಅಭಿನಂದನೀಯ. ಇದು ಸಮ್ಮೇಳದ ನಾಯಕತ್ವ ವಹಿಸಿಕೊಂಡವರ ಆತ್ಮಶುದ್ಧಿ ತೋರಿಸುತ್ತದೆ ಎಂದರು.

ಜಿಲ್ಲಾ ಕಸಾಪ ಕೋಶಾಧ್ಯಕ್ಷ ಎಂ.ಎಚ್.ನಾಗರಾಜು, ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳದ ಜಮಾ ಖರ್ಚು ಮಂಡಿಸಿದರು. ಸಮ್ಮೇಳನದ ಯಶಸ್ಸಿಗೆ ಸಹಕರಿಸಿದ ವಿವಿಧ ಸಮಿತಿ ಸಂಚಾಲಕರು, ಕಾರ್ಯಕರ್ತರನ್ನು ಈ ಸಂದರ್ಭದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.

ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ಡಾ.ಸಣ್ಣಹೊನ್ನಯ್ಯ ಕಂಟಲಗೆರೆ, ಸಂಘಟನಾ ಕಾರ್ಯದರ್ಶಿ ಎಸ್.ಯೋಗಾನಂದ್, ಉಮಾ ಮಹೇಶ್ ಇತರರು ಭಾಗವಹಿಸಿದ್ದರು.

Share this article