ರೈತರಲ್ಲಿ ಸಂಕ್ರಾಂತಿ ಬದುಕಿನ ಬೆಳಕಿನ ಸಂಭ್ರಮ ತರಲಿ: ಡಾ. ಗಂಗಾಧರ ಶ್ರೀ

KannadaprabhaNewsNetwork |  
Published : Jan 16, 2025, 12:48 AM IST
ಯಾದಗಿರಿ ಸಮೀಪದ ಅಬ್ಬೆತುಮಕೂರಿನ ಸೀಮಾಂತರದ ಭೀಮಾ ನದಿಯ ತಟದಲ್ಲಿ ಶ್ರೀಮಠದ ವತಿಯಿಂದ ಮಂಗಳವಾರ ಹೊಳಿ ಜಾತ್ರೆ ಜರುಗಿತು. | Kannada Prabha

ಸಾರಾಂಶ

May Sankranti bring the joy of light and life to farmers: Dr. Gangadhar Sri

-ಅಬ್ಬೆತುಮಕೂರಿನ ಸೀಮಾಂತರದ ಭೀಮಾ ನದಿಯ ತಟದಲ್ಲಿ ಶ್ರೀಮಠದಿಂದ ಹೊಳಿ ಜಾತ್ರೆ

-----

ಕನ್ನಡಪ್ರಭ ವಾರ್ತೆ ಯಾದಗಿರಿ

ಒಕ್ಕಲಿಗ ಚೆನ್ನಾಗಿದ್ದರೆ ನಾಡೆಲ್ಲ ಚೆನ್ನಾಗಿರುತ್ತದೆ, ಸಂಕ್ರಾಂತಿ ಹಬ್ಬ ರೈತರ ಪಾಲಿಗೆ ಸುಗ್ಗಿಯ ಹಿಗ್ಗನ್ನು ತರುವ ಹಬ್ಬವಾಗಿದೆ. ರೈತ ಉತ್ತಿ ಬಿತ್ತಿ ಬೆಳೆದ ಫಸಲನ್ನು ರಾಶಿ ಮಾಡಿಕೊಳ್ಳುವ ಸಂದರ್ಭದಲ್ಲಿ ಬರುವ ಸಂಕ್ರಾಂತಿ ಆತನ ಬದುಕಿನ ಬೆಳಕಾಗಿ ಈ ಹಬ್ಬ ಸಂಭ್ರಮವನ್ನು ತರುವಂತಾಗಲಿ ಎಂದು ಅಬ್ಬೆತುಮಕೂರಿನ ಪೀಠಾಧಪತಿ ಡಾ. ಗಂಗಾಧರ ಮಹಾಸ್ವಾಮಿಗಳು ನುಡಿದರು.

ಶ್ರೀಮಠದ ವತಿಯಿಂದ ಸಮೀಪದ ಅಬ್ಬೆತುಮಕೂರಿನ ಸೀಮಾಂತರದ ಭೀಮಾ ನದಿಯ ತಟದಲ್ಲಿ ಹಮ್ಮಿಕೊಂಡಿದ್ದ ಹೊಳಿ ಜಾತ್ರೆಯ ಸಾನ್ನಿಧ್ಯವನ್ನು ವಹಿಸಿ ಆಶೀರ್ವಚನ ನೀಡಿದರು. ನೂತನ ವರ್ಷದ ಮೊದಲ ಹಬ್ಬವಾಗಿರುವ ಸಂಕ್ರಾಂತಿ ರೈತರ ಬದುಕಿಗೆ ಸಮೃದ್ಧಿಯನ್ನು ತರುವ ಹಬ್ಬವಾಗಿದೆ. ಈ ಹಬ್ಬ ಅನ್ನದಾತ ರೈತ ಜನಾಂಗಕ್ಕೆ ಹಿಗ್ಗನ್ನು ತರಲಿ ಎಂದು ಶುಭ ಹಾರೈಸಿದರು.

ಸಂಕ್ರಾಂತಿ ಉತ್ತರಾಯಣದ ಪುಣ್ಯಕಾಲವಾಗಿದೆ. ಸೂರ್ಯ ಮಕರ ರಾಶಿಯನ್ನು ಪ್ರವೇಶಿಸುವ ಪರ್ವ ಕಾಲವಾಗಿದೆ. ಇಂತಹ ವಿಶೇಷ ದಿನದಂದು ನದಿಗಳಿಗೆ ತೆರಳಿ ಪುಣ್ಯ ಸ್ನಾನ ಮಾಡುವುದರಿಂದ ಜೀವನದಲ್ಲಿ ಒಳ್ಳೆಯ ಫಲ ಪ್ರಾಪ್ತಿಯಾಗುತ್ತದೆ. ಈ ಸಂದರ್ಭದಲ್ಲಿ ಎಳ್ಳು ದಾನ ಮಾಡುವುದರಿಂದಲೂ ಪುಣ್ಯ ಸಿಗುತ್ತದೆ ಎಂಬ ನಂಬಿಕೆಯಿಂದ ಜನರು ಎಳ್ಳು, ಬೆಲ್ಲವನ್ನು ಪರಸ್ಪರ ಕೊಡುಕೊಳ್ಳುವ ಪರಂಪರೆ ನಮ್ಮಲ್ಲಿದೆ ಎಂದರು.

ಇದಕ್ಕೂ ಮುನ್ನ ಶ್ರೀಗಳು ಅಪಾರ ಭಕ್ತ ವೃಂದದೊಂದಿಗೆ, ಅಬ್ಬೆತುಮಕೂರಿನ ಶ್ರೀಮಠದಿಂದ ಸೀಮಾಂತರದ ಭೀಮಾನದಿ ಯವರೆಗೆ ಡೊಳ್ಳು, ಹಲಗೆ, ಬಾಜಾ ಭಜಂತ್ರಿ, ವಿವಿಧ ಮಂಗಲ ವಾದ್ಯಗಳು ಮತ್ತು ಸುಮಂಗಲೆಯರ ಕಳಸದೊಂದಿಗೆ ಮೆರವಣಿಗೆಯಲ್ಲಿ ನದಿ ತಟಕ್ಕೆ ತೆರಳಿದರು. ಅಲ್ಲಿ ಶ್ರೀಗಳು ಹೂವಿನಿಂದ ಅಲಂಕೃತವಾದ ತೆಪ್ಪದಲ್ಲಿ ಭೀಮಾನದಿಯ ಮಧ್ಯಭಾಗಕ್ಕೆ ತೆರಳಿ ಪುಣ್ಯ ಸ್ನಾನವನ್ನು ಮಾಡಿ ನಾಡಿಗೆ ಒಳಿತಾಗಲಿ ಎಂದು ಪ್ರಾರ್ಥಿಸಿ ಗಂಗಾದೇವಿಗೆ ವಿಶೇಷ ಪೂಜೆ ನೆರವೇರಿಸಿದರು.

ಪುನಃ ಶ್ರೀಗಳು ತೆಪ್ಪದಲ್ಲಿ ನದಿಯ ಮಧ್ಯ ಭಾಗದಿಂದ ದಡಕ್ಕೆ ಆಗಮಿಸಿದರು. ಆಗ ಅಲ್ಲಿ ನೆರೆದಿದ್ದ ಸಹಸ್ರಾರು ಭಕ್ತರು ಶ್ರೀಗಳ ಪಾದದಿಂದ ನದಿಯ ನೀರನ್ನು ಪ್ರೋಕ್ಷಿಸಿಕೊಂಡು ಪುನೀತರಾದರು. ನಂತರ ಭಕ್ತರು ಶ್ರೀಗಳ ಪಾದಪೂಜೆ ನೆರೆವೇರಿಸಿದರು.

ನಂತರ ಹೊಳಿ ಜಾತ್ರಗೆ ಆಗಮಿಸಿದ ಎಲ್ಲ ಭಕ್ತರು ಬಿಳಿ ಜೋಳದ ರೊಟ್ಟಿ, ಸಜ್ಜಿ ರೊಟ್ಟಿ, ಶೇಂಗಾ ಹೋಳಿಗೆ, ಕರಿಗಡಬು, ಪುಂಡಿಪಲ್ಯ, ಹಿಂಡಿಪಲ್ಯ, ಎಣ್ಣೆ ಬದನೆಕಾಯಿ, ಶೇಂಗಾ ಹಿಂಡಿ, ಬಜ್ಜಿ, ಭರ್ತಾ, ಚಿತ್ರಾನ್ನ. ಹೀಗೆ ವಿವಿಧ ಬಗೆಯ ಸಂಕ್ರಾಂತಿಯ ಭಕ್ಷ ಭೋಜನವನ್ನು ಸವಿದರು. ಜಾತ್ರೆಯಲ್ಲಿ ರಟಗಲ್‌ದ ಲಾವಣ್ಯ ಮೆಲೋಡಿಸ್ಟ್ ಕಲಾ ತಂಡದವರು ನಡೆಸಿಕೊಟ್ಟ ಗೀತಗಾಯನ ಕಾರ್ಯಕ್ರಮ ಎಲ್ಲರ ಗಮನ ಸೆಳೆಯಿತು.

ಮಠದ ಕಿರಿಯ ಸ್ವಾಮೀಜಿ ಶಿವಶೇಖರ ಮಹಾಸ್ವಾಮಿಗಳು, ಡಾ. ಸುಭಾಶ್ಚಂದ್ರ ಕೌಲಗಿ, ಸೇರಿದಂತೆ ಅಬ್ಬೆತುಮಕೂರು ಮತ್ತು ಸುತ್ತಮುತ್ತಲಿನ ಹಳ್ಳಿಗಳು ಅಲ್ಲದೆ ಶಹಾಪುರ, ಸುರಪುರ, ಗುರುಮಠಕಲ್, ಕಲಬುರಗಿ, ಸೇಡಂ, ಚಿತ್ತಾಪೂರ, ಬಿಜಾಪುರ, ಸಿಂದಗಿ, ದಾವಣಗೇರ, ಸಿಂಧನೂರ, ಮಾನವಿ, ರಾಯಚೂರು ಸೇರಿದಂತೆ ಆಂಧ್ರ, ತೆಲಂಗಾಣ ಮತ್ತು ಮಹಾರಾಷ್ಟ್ರದಿಂದಲೂ ಅನೇಕ ಭಕ್ತರು ಆಗಮಿಸಿದ್ದರು.

----

15ವೈಡಿಆರ್6: ಯಾದಗಿರಿ ಸಮೀಪದ ಅಬ್ಬೆತುಮಕೂರಿನ ಸೀಮಾಂತರದ ಭೀಮಾ ನದಿಯ ತಟದಲ್ಲಿ ಶ್ರೀಮಠದ ವತಿಯಿಂದ ಹೊಳಿ ಜಾತ್ರೆ ಜರುಗಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!