ಪೌರಕಾರ್ಮಿಕರಿಗೆ ಸಮಾಜ ಸದಾ ಋಣಿಯಾಗಿರಲಿ: ಉಜ್ಜಿಯನಿ ಶ್ರೀ

KannadaprabhaNewsNetwork | Published : Mar 27, 2025 1:02 AM

ಸಾರಾಂಶ

ಸ್ವಚ್ಛತೆಯಲ್ಲಿ ದೇವರನ್ನು ಕಾಣುವ ಪೌರಕಾರ್ಮಿಕರು ತಮ್ಮ ಆರೋಗ್ಯವನ್ನು ನಿರ್ಲಕ್ಷಿಸಿ ಪಟ್ಟಣವನ್ನು ಸದಾ ಸ್ವಚ್ಛವಾಗಿಡುವಲ್ಲಿ ಶ್ರಮಿಸುತ್ತಿದ್ದಾರೆ.

ಕನ್ನಡಪ್ರಭ ವಾರ್ತೆ ಕೊಟ್ಟೂರು

ಸ್ವಚ್ಛತೆಯಲ್ಲಿ ದೇವರನ್ನು ಕಾಣುವ ಪೌರಕಾರ್ಮಿಕರು ತಮ್ಮ ಆರೋಗ್ಯವನ್ನು ನಿರ್ಲಕ್ಷಿಸಿ ಪಟ್ಟಣವನ್ನು ಸದಾ ಸ್ವಚ್ಛವಾಗಿಡುವಲ್ಲಿ ಶ್ರಮಿಸುತ್ತಿದ್ದಾರೆ ಎಂದು ಉಜ್ಜಿಯನಿ ಜಗದ್ಗುರು ಸಿದ್ದಲಿಂಗ ರಾಜದೇಶಿ ಕೇಂದ್ರ ಶಿವಾಚಾರ್ಯ ಮಹಾಸ್ವಾಮೀಜಿ ಹೇಳಿದರು.

ಮಂಗಳವಾರ ಸಂಜೆ ಪಟ್ಟಣದ ಚಾನುಕೋಟಿ ಸಭಾಂಗಣದಲ್ಲಿ ಆದಿ ಜಗದ್ಗುರು ಪಂಚಾಚಾರ್ಯರ ಯುಗಮಾನೋತ್ಸವ ಮತ್ತು ಚಾನುಕೋಟಿ ಶ್ರೀಗಳ ಷಷ್ಟಿ ಸಂಭ್ರಮದ ಆರನೇ ದಿನದ ಕಾರ್ಯಕ್ರಮದಲ್ಲಿ 60ಕ್ಕೂ ಹೆಚ್ಚು ಪೌರಕಾರ್ಮಿಕರನ್ನು ಸನ್ಮಾನಿಸಿ ಮಾತನಾಡಿದರು.

ಸದಾ ಹೊಲಸನ್ನು ಮತ್ತು ಕಸವನ್ನು ನಿರ್ಮಾಣ ಮಾಡುವ ನಾಗರಿಕರ ಎಲ್ಲಾ ಬಗ್ಗೆಯ ಅಸ್ವಚ್ಛತೆಯನ್ನು ದಿನ ನಿತ್ಯ ತಮ್ಮ ಕಾಯಕದ ಮೂಲಕ ಹೊರ ಹೊತ್ತು ಸಾಗುವ ಪೌರಕಾರ್ಮಿಕರ ಬಗ್ಗೆ ಜನತೆ ಮತ್ತು ಸಮಾಜ ಸದಾ ಋಣಿಯಾಗಿರಬೇಕು ಎಂದು ಹೇಳಿದರು.

ಕೊಟ್ಟೂರಿನ ಚಾನುಕೋಟಿ ಮಠದಲ್ಲಿ ಕಳೆದ ಒಂದು ವಾರದಿಂದ ಶ್ರೀ ಶೈಲ ಮತ್ತು ಕಾಶಿ ಜಗದ್ಗುರುಗಳ ಇಷ್ಟಲಿಂಗ ಪೂಜೆ ಮತ್ತು ಧರ್ಮ ಸಭೆಗಳು ಜನಜಂಗುಳಿಯಲ್ಲಿ ನಡೆಯುತ್ತಿರುವುದು ಜನತೆ ಧಾರ್ಮಿಕ ಭಾವನೆಯಲ್ಲಿರಿಸಿರುವ ವಿಶ್ವಾಸವನ್ನು ತೋರುತ್ತದೆ ಎಂದರು.

ಯುಗಮಾನೋತ್ಸವದ ಕೊನೆಯ ದಿನವಾದ ಏ. 03ರಂದು ನಾಲ್ಕು ಜಗದ್ಗುರುಗಳು ಮತ್ತು ಸಿದ್ದಾಂತ ಶಿಖಾಮಣಿ, ವಚನ ಸಾಹಿತ್ಯ, ದಾಸ ಸಾಹಿತ್ಯ, ವೀರಶೈವ ಪಂಚಾಸೂತ್ರಾಣಿಗಳ ಬೃಹತ್ ಗ್ರಂಥಗಳ ಅಡ್ಡ ಪಲ್ಲಕ್ಕಿ ಮಹೋತ್ಸವ ನಡೆಯಲಿದೆ ಎಂದರು.

ಕಾರ್ಯಕ್ರಮ ಉದ್ಘಾಟಿಸಿದ ಜಿಪಂ ಮಾಜಿ ಸದಸ್ಯ, ಸ್ವಾಗತ ಸಮಿತಿಯ ಕಾರ್ಯಾಧ್ಯಕ್ಷ ಎಂಎಂಜೆ ಹರ್ಷವರ್ಧನ್ ಪೌರಕಾರ್ಮಿಕರನ್ನು ಈ ಕಾರ್ಯಕ್ರಮದಲ್ಲಿ ಸನ್ಮಾನಿಸುತ್ತಿರುವುದು ಕಾರ್ಯಕ್ರಮದ ಗರಿಮೆ ಹೆಚ್ಚಿಸಿದೆ ಎಂದರು.

ಚಾನುಕೋಟಿ ಮಠಾಧ್ಯಕ್ಷ ಡಾ. ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ ಸೇರಿದಂತೆ ಅನೇಕ ಸ್ವಾಮೀಜಿ ಮಾತನಾಡಿದರು.

ಹಿರಿಯ ವರ್ತಕ ಬಿ.ಎಸ್. ಕೊಟ್ರೇಶ, ಮುಖಂಡರಾದ ಕರಡಿ ಕೊಟ್ರೇಶ, ದಾರುಕೇಶ್, ಪಂಪಾಪತಿ ಬಸಾಪುರ್, ಅಜ್ಜನಗೌಡ, ಪಪಂ ಉಪಾಧ್ಯಕ್ಷ ಜಿ. ಸಿದ್ದಯ್ಯ, ಅಟವಾಳಿಗೆ ಸಂತೋಷ್, ಅಡಿಕೆ ಮಂಜುನಾಥ, ದೇವರಮನೆ ಕರಿಯಪ್ಪ, ರಾಂಪುರ ವಿವೇಕಾನಂದ, ಜಿ. ಕಾರ್ತಿಕ್, ಮತ್ತಿತರರಿದ್ದರು. ಕಾಳಾಪುರ, ನಡುಮಹನಹಳ್ಳಿ, ಹಿರೇವಡ್ರಳ್ಳಿ, ಮೂರ್ತಿನಾಯಕನಹಳ್ಳಿ, ಹಾರಕನಾಳು, ಚಿನ್ನೆನಹಳ್ಳಿ, ಕೊನಣಹಳ್ಳಿ, ಗ್ರಾಮದ ದೈವಸ್ಥರಿಗೆ ಗುರು ರಕ್ಷೆಯನ್ನು ಜಗದ್ಗುರುಗಳು ನೀಡಿದರು.

ಶಿಕ್ಷಕ ಬಂಜಾರ್ ನಾಗರಾಜ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಾಧ್ಯಾಪಕ ಅರವಿಂದ್ ಬಸಾಪುರ್ ನಿರೂಪಿಸಿದರು.

Share this article