ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಅರಸುರಂತಹ ಮಹಾನ್ ವ್ಯಕ್ತಿಗಳ ಜನ್ಮ ದಿನಗಳು ಆತ್ಮಾವಲೋಕನದ ದಿನಾಚರಣೆಗಳಾಗಬೇಕು. ಅವಲೋಕನದ ಮೂಲಕ ಎಚ್ಚರಗೊಳ್ಳಬೇಕಿದೆ ಎಂದು ಕುವೆಂಪು ವಿವಿ ಕನ್ನಡ ಭಾರತಿ ವಿಭಾಗದ ಹಿರಿಯ ಪ್ರಾಧ್ಯಾಪಕ ಡಾ.ಜಿ.ಪ್ರಶಾಂತ್ ನಾಯಕ್ ಹೇಳಿದರು.ನಗರದ ಕುವೆಂಪು ರಂಗಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಗಳ ಸಹಯೋಗದಲ್ಲಿ ಬುಧವಾರ ಏರ್ಪಡಿಸಿದ್ದ ಮಾಜಿ ಮುಖ್ಯಮಂತ್ರಿ ದಿ.ಡಿ.ದೇವರಾಜ ಅರಸುರವರ 110 ನೇ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿ ಮಾತನಾಡಿದರು.
ಡಿ.ದೇವರಾಜ ಅರಸುರವರು ರಾಜ್ಯದ ಅಸ್ಮಿತೆ ಹಾಗೂ ಹೆಮ್ಮೆ. ಅವರ ವ್ಯಕ್ತಿತ್ವ, ಅಧಿಕಾರದ ಅವಧಿಯಲ್ಲಿ ಕೈಗೊಂಡ ಸಾಧನೆಗಳು ನಿರಂತರವಾಗಿ ನಮ್ಮನ್ನು ಕಾಡುತ್ತಿವೆ. ಇವರ ಬಗ್ಗೆ ಇರುವಷ್ಟು ಬರಹಗಳು, ಪುಸ್ತಕಗಳು ಬೇರೆ ಯಾವ ರಾಜಕಾರಣಿಗಳ ಬಗ್ಗೆ ಇರಲಿಕ್ಕಿಲ್ಲ. ಇದು ಇವರ ಕಾಡುವಿಕೆಗೆ ಸಾಕ್ಷಿಯಾಗಿದೆ ಎಂದರು.ಇತಿಹಾಸದುದ್ದಕ್ಕೂ ಆಗಾಗ್ಗೆ ಸತ್ವಶಾಲಿ ವ್ಯಕ್ತಿಗಳ ಉಗಮವಾಗುತ್ತದೆ. ಬುದ್ದ, ಬಸವ ,ಗಾಂಧಿ, ಅಂಬೇಡ್ಕರ್ , ಇದೇ ರೀತಿಯಲ್ಲಿ ಹೀಗೊಬ್ಬ ಅರಸು ಹುಟ್ಟುತ್ತಾರೆ. ಜಾತಿಗಳನ್ನು ಮೀರಿ ಏನನ್ನೋ ಕಟ್ಟಬೇಕಿದೆ ಎಂದು ಜಾತ್ಯಾತೀತ ಕನಸು ಕಟ್ಟುತ್ತಾರೆ. ಆದರೆ ಜಾತಿಗಳು ಅಹಂಕಾರವಾಗಿ ಪರಿವರ್ತನೆ ಆಗಿವೆ. ಜಾತಿ ವ್ಯವಸ್ಥೆ ದುರ್ಗತಿಗೆ ಬಂದು ನಿಂತಿದೆ ಎಂದು ಬೇಸರ ವ್ಯಕ್ತಪಡಿಸಿರು.
ಅವರ ಹಾವನೂರು ವರದಿ ಇಂದಿಗೂ ತಲ್ಲಣ ಮೂಡಿಸಿದೆ. ಜೀತ ನಿಷೇಧ, ವಿದ್ಯಾರ್ಥಿಗಳ ಕಲ್ಯಾಣ ಯೋಜನೆಗಳು, ಮಲಹೊರುವ ಪದ್ಧತಿಯ ನಿಷೇಧ, ಉಳುವವನೇ ಒಡೆಯ, ಗರೀಬಿ ಹಠಾವೋ, ಭಾಗ್ಯಜ್ಯೋತಿ, ಕನಿಷ್ಟ ಕೂಲಿ ನಿಗದಿ, ಋಣ ಪರಿಹಾರ ಹೀಗೆ ನೊಂದವರಿಗೆ, ಹಿಂದುಳಿದವರಿಗಾಗಿ ಅನೇಕ ಜನಪರ ಕಲ್ಯಾಣ ಯೋಜನೆಗಳನ್ನು ಜಾರಿಗೆ ತಂದ ಅರಸುರವರು ಒಳ್ಳೆಯ ಓದುಗ ಎಂದು ಬಣ್ಣಿಸಿದರು. ನಾಡು ಎಂಬುದು ಪ್ರದೇಶ ಒಂದರ ರೂಪಕ ಆಗಬಾರದೆಂಬ ಕಾರಣದಿಂದ ಮೈಸೂರನ್ನು ಕರ್ನಾಟಕ ಎಂದು ನಾಮಕರಣ ಮಾಡಿದರು.ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಮಾತನಾಡಿ, ಅರಸುರವರನ್ನು ನಾವು ಕಣ್ಣಿಂದ ಕಾಣದಿದ್ದರೂ ಅವರ ಸಾಧನೆ, ಕೊಡುಗೆಗಳನ್ನು ಕಾಣುತ್ತಿದ್ದೇವೆ. ಅವರ ಮುಂದಾಲೋಚನೆಯಿಂದಾಗಿ ಹಿಂದುಳಿದ ವರ್ಗಗಳು, ಎಸ್‌ಸಿ, ಎಸ್‌ಟಿ ಹಾಗೂ ಹೆಣ್ಣುಮಕ್ಕಳಿಗೆ ರಾಜ್ಯಾದ್ಯಂತ ವಸತಿನಿಲಯಗಳ ಸೌಲಭ್ಯ ಕಲ್ಪಿಸಿ, ವಿದ್ಯೆ ಪಡೆಯಲು ಅತ್ಯಂತ ಸಹಕಾರಿಯಾಗಿದೆ. ಭೂ ಸುಧಾರಣೆ ಕಾಯ್ದೆಯಿಂದ ಜಿಲ್ಲೆಯಲ್ಲಿ 30 ಸಾವಿರಕ್ಕೂ ಹೆಚ್ಚು ಜನರಿಗೆ ಭೂಮಿ ಲಭಿಸಿದೆ. ಎಲ್ಲ ವರ್ಗಗಳ ಅಭಿವೃದ್ದಿಗಾಗಿ ಶ್ರಮಿಸುತ್ತಿದ್ದ ಅವರು ಬೆಂಗಳೂರನ್ನು ಎಲೆಕ್ಟ್ರಾನಿಕ್ ಸಿಟಿಯನ್ನಾಗಿ ಮಾಡಲು ಸಹ ಅಡಿಗಲ್ಲು ಹಾಕಿದ್ದರು ಎಂದು ತಿಳಿಸಿದರು.
ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಟಾನ ಪ್ರಾಧಿಕಾರದ ಅಧ್ಯಕ್ಷ ಸಿ.ಎಸ್.ಚಂದ್ರಭೂಪಾಲ ಮಾತನಾಡಿ, ಮಹಾ ಮಾನವತಾವಾದಿ ಹಾಗೂ ಹಿಂದುಳಿದವರ, ನೊಂದವರ ಏಳ್ಗೆಗಾಗಿ ಶ್ರಮಿಸಿದ ಮೌನಕ್ರಾಂತಿಯ ಹರಿಕಾರ ಡಿ.ದೇವರಾಜ ಅರಸುರವರ ಹೆಸರು ಇತಿಹಾಸದಲ್ಲಿ ಎಂದಿಗೂ ಅಳಿಸಲಾಗದು ಎಂದರು.ಕಾರ್ಯಕ್ರಮದಲ್ಲಿ ಹಿಂದುಳಿದ ಜಾತಿ ಒಕ್ಕೂಟದ ಅಧ್ಯಕ್ಷ ವಿ. ರಾಜು ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದರು. ಹಿಂದುಳಿದ ವರ್ಗಗಳ ಕಲ್ಯಾಣ ಅಧಿಕಾರಿ ಕೆ.ಆರ್. ಶೋಭಾ, ಎಎಸ್‌ಪಿ ಎಸ್.ರಮೇಶ್ ಕುಮಾರ್, ಜಿ.ಪಂ. ಉಪ ಕಾರ್ಯದರ್ಶಿ ಸುಜಾತ, ವಿವಿಧ ಸಮಾಜದ ಮುಖಂಡರು, ಅಧಿಕಾರಿಗಳು, ವಿದ್ಯಾರ್ಥಿಗಳು ಹಾಜರಿದ್ದರು.
ಎಸ್ಸೆಸ್ಸೆಲ್ಸಿ, ಪಿಯುಸಿ ಮಕ್ಕಳಿಗೆ ಪ್ರತಿಭಾ ಪುರಸ್ಕಾರಹಿಂದುಳಿದ ವರ್ಗಗಳ ವಸತಿ ಶಾಲೆಗಳಲ್ಲಿ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು ಹಾಗೂ ವಸತಿ ಶಾಲೆಗಳಲ್ಲಿ ಏರ್ಪಡಿಸಲಾಗಿದ್ದ ಪ್ರಬಂಧ, ರಸಪ್ರಶ್ನೆ, ಕ್ರೀಡಾ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಮಾಜಿಕ ಸೇವಾ ಕಾರ್ಯಕರ್ತರಾದ ಶಂಕರಪ್ಪ ಡಿ, ಶೈಕ್ಷಣಿಕ ಸೇವಾ ಕಾರ್ಯಕರ್ತರಾದ ಬಿ.ಎ ಉಮಾಪತಿ, ಜಾನಪದ ಕಲಾವಿದರಾದ ಎಂ.ಯಲ್ಲಪ್ಪ ಭಾಗವತ್, ಉದ್ಯಮಿ ಮತ್ತು ಸಾಮಾಜಿಕ ಸೇವಾ ಕಾರ್ಯಕರ್ತರಾದ ಇಕ್ಬಾಲ್ ಹಬೀಬ್ ಸೇಠ್, ಚಿತ್ರಕಲಾವಿದರಾದ ಸಿ.ಎಸ್.ಗರಗ್, ಸಾಮಾಜಿಕ ಸೇವಾ ಕಾರ್ಯಕರ್ತರಾದ ಅಶೋಕ್, ರಂಗ ಕಲಾವಿದ ಮಂಜುನಾಥ ಸ್ವಾಮಿ ಇವರನ್ನು ಅಭಿನಂದಿಸಲಾಯಿತು ಹಾಗೂ ಎಂಜಿಯರಿಂಗ್‌ನಲ್ಲಿ ಸ್ವರ್ಣ ಪದಕ ಪಡೆದ ಆರ್.ವಂದನಾ ಇವರನ್ನು ಸನ್ಮಾನಿಸಲಾಯಿತು.