ಸ್ವಾತಂತ್ರ್ಯ ಹೋರಾಟಗಾರರ ದಿಟ್ಟತನದ ಅರಿವು ಶಾಶ್ವತವಾಗಿರಲಿ: ವಿ.ಎನ್. ತಿಪ್ಪನಗೌಡರ

KannadaprabhaNewsNetwork | Published : Jan 31, 2024 2:21 AM

ಸಾರಾಂಶ

ಸ್ವಾತಂತ್ರ್ಯ ಹೋರಾಟಗಾರರು ಪ್ರತಿರೋಧದಿಂದ ಬ್ರಿಟಿಷರನ್ನು ಬಗ್ಗು ಬಡಿಯುವ ದಿಟ್ಟತನ ತೋರಿದ್ದರ ಫಲವೇ ನಮಗೆ ಸ್ವಾತಂತ್ರ್ಯ ದೊರೆತಿದೆ.

ಹಲಗಲಿ ಬೇಡರ ವೀರಗಾಥೆಯ ಹತಾರ ನಾಟಕ ಪ್ರದರ್ಶನ

ಕನ್ನಡಪ್ರಭ ವಾರ್ತೆ ಹಾನಗಲ್ಲ

ಸ್ವಾತಂತ್ರ್ಯ ಹೋರಾಟಗಾರರು ಪ್ರತಿರೋಧದಿಂದ ಬ್ರಿಟಿಷರನ್ನು ಬಗ್ಗು ಬಡಿಯುವ ದಿಟ್ಟತನ ತೋರಿದ್ದರ ಫಲವೇ ನಮಗೆ ಸ್ವಾತಂತ್ರ್ಯ ದೊರೆತಿದೆ. ಅದು ನೆನಪು ಮಾತ್ರ ಆಗದೆ ಅದರ ಅರಿವು ನಮಗೆ ಶಾಶ್ವತವಾಗಿರಬೇಕು ಎಂದು ಹುತಾತ್ಮ ಮೈಲಾರ ಮಹಾದೇವೆ ಟ್ರಸ್ಟ್‌ ಅಧ್ಯಕ್ಷ ವಿ.ಎನ್. ತಿಪ್ಪನಗೌಡರ ತಿಳಿಸಿದರು.

ತಾಲೂಕಿನ ರಂಗ ಗ್ರಾಮ ಶೇಷಗಿರಿಯಲ್ಲಿ ರಂಗಾಯಣ ಧಾರವಾಡ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಹುತಾತ್ಮ ಮೈಲಾರ ಮಹಾದೇವ ಟ್ರಸ್ಟ್‌, ಗಜಾನನ ಯುವಕ ಮಂಡಳ ಶೇಷಗಿರಿ ಸಂಯುಕ್ತವಾಗಿ ಕರ್ನಾಟಕ ಸುವರ್ಣ ಸಂಭ್ರಮ-೫೦ರ ಅಂಗವಾಗಿ ರಂಗ ಪಯಣ-೨೪ ಭಾರತ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಹಲಗಲಿ ಬೇಡರ ವೀರಗಾಥೆಯ “ ಹತಾರ ” ನಾಟಕ ಪ್ರದರ್ಶನ ಉದ್ಘಾಟಿಸಿ ಮಾತನಾಡಿದ ಅವರು, ರಾಷ್ಟ್ರದ ದಾಸ್ಯ ವಿಮೋಚನೆಗೆ ಪಣ ತೊಟ್ಟು ಹೋರಾಡಿದ, ಕಾಡು ಮೇಡೆನ್ನದೆ ಎಲ್ಲ ರಾಷ್ಟ್ರಪ್ರೇಮಿಗಳ ಶ್ರಮದ ಫಲವೇ ಭಾರತ ಸ್ವಾತಂತ್ರ್ಯವಾಗಿದೆ. ವಿವಿಧತೆಯಲ್ಲಿಯೂ ಏಕತೆಯ ಸಂಕಲ್ಪದೊಂದಿಗೆ ಭಾರತ ಮುನ್ನಡೆಯುತ್ತಿದೆ. ಸ್ವಾತಂತ್ರ್ಯ ಹೋರಾಟದ ಆ ಕೆಚ್ಚು, ಕಿಚ್ಚು, ಇಚ್ಛಾಶಕ್ತಿಯನ್ನು ಸ್ಮೃತಿ ಪಟಲದಿಂದ ದೂರ ಸರಿಸಲು ಸಾಧ್ಯವಿಲ್ಲ ಎಂದರು.

ಮುಖ್ಯ ಅತಿಥಿಯಾಗಿ ಮಾತನಾಡಿದ ಕವಯಿತ್ರಿ ದೀಪಾ ಗೋನಾಳ, ಸಾಮಾಜಿಕ ನೆಲೆಯಲ್ಲಿ ನಾಟಕಕ್ಕೆ ಪ್ರಮುಖ ಸ್ಥಾನವಿದೆ. ಇದು ಕೇವಲ ಮನೋರಂಜನೆಯಲ್ಲ. ಮಾನವೀಯ ಮೌಲ್ಯಗಳನ್ನು, ರಾಷ್ಟ್ರೀಯ ವಿಚಾರಗಳನ್ನು ಅಭಿವ್ಯಕ್ತಿಸಿದೆ. ಮಹಾಕಾವ್ಯಗಳನ್ನು ರಂಗ ಕಲೆಯ ಮೂಲಕ ಸಮಾಜಕ್ಕೆ ನೀಡಿದ ಹಿರಿಮೆ ಮರೆಯಲಾಗದು. ಕಲಾವಿದರ ಬದುಕು ಬೆಳಗಬೇಕು. ರಂಗಭೂಮಿ ಮತ್ತೆ ಜನಮಾನಸದಲ್ಲಿ ನಿತ್ಯದ ಮನೆ ಮಾತಾಗಬೇಕು ಎಂದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಕಲಾವಿದ ಬಿ.ಆರ್. ಪಾಟೀಲ ಕಲೆಗಾಗಿಯೇ ತೆರೆದುಕೊಂಡಿರುವ ಶೇಷಗಿರಿ ಒಂದು ರಂಗ ಸಂಭ್ರಮದ ಸೋಜಿಗ. ಇಲ್ಲಿ ಕಲಾವಿದರನ್ನು ಬೆಳೆಸಿ ನಾಟಕಗಳನ್ನು ನಾಡಿನುದ್ದಕ್ಕೂ ಪ್ರದರ್ಶಿಸಿದ ಹೆಮ್ಮೆ ಇದಕ್ಕಿದೆ. ಕಲಾವಿದರನ್ನು ಬೆನ್ನು ತಟ್ಟಿ ಬೆಳೆಸುವವರು ಬೇಕಾಗಿದ್ದಾರೆ. ಕಲೆ ಎಲ್ಲರಲ್ಲೂ ಇದೆ. ಅದಕ್ಕೆ ಮಾರ್ಗದರ್ಶನ ಬೇಕು ಎಂದರು.

ಕಾರ್ಯಕ್ರಮದಲ್ಲಿ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಾಹಿತಿ ಸತೀಶ ಕುಲಕರ್ಣಿ, ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಕಲಾವಿದ ಪ್ರಭು ಗುರಪ್ಪನವರ, ಪ್ರೊ. ಎಸ್.ಎನ್. ತಿಪ್ಪನಗೌಡರ, ಸಾಹಿತಿ ಪ್ರೊ. ಮಾರುತಿ ಶಿಡ್ಲಾಪೂರ, ಬಿ.ವಿ. ಬಿರಾದಾರ, ಅಪ್ಪುಶೆಟ್ಟರ, ಎಸ್.ವಿ. ಹೊಸಮನಿ, ವಿ.ಎಸ್. ಚಿಕ್ಕಣ್ಣನವರ, ಜಿ.ಎಸ್. ಮುಚ್ಚಂಡಿ, ಜಿ.ಬಿ. ಕೋಟಿ, ಮಾರುತಿ ಈಳಿಗೇರ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

Share this article