ಸಚಿವ ಸಂಪುಟ ಪುನಾರಚನೆಯನ್ನು ಸಿಎಂ ಸಿದ್ದರಾಮಯ್ಯ ದೆಹಲಿಗೆ ಹೋಗಿ ಅನುಮತಿ ತಗೊಂಡು ಮಾಡಬೇಕು ಎಂದು ಮಾಜಿ ಸಚಿವ ಕೆ.ಎನ್. ರಾಜಣ್ಣ ತಿಳಿಸಿದ್ದಾರೆ.
ಕನ್ನಡಪ್ರಭ ವಾರ್ತೆ ತುಮಕೂರು
ಸಚಿವ ಸಂಪುಟ ಪುನಾರಚನೆಯನ್ನು ಸಿಎಂ ಸಿದ್ದರಾಮಯ್ಯ ದೆಹಲಿಗೆ ಹೋಗಿ ಅನುಮತಿ ತಗೊಂಡು ಮಾಡಬೇಕು ಎಂದು ಮಾಜಿ ಸಚಿವ ಕೆ.ಎನ್. ರಾಜಣ್ಣ ತಿಳಿಸಿದ್ದಾರೆ.ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಈಗಾಗಲೇ ಒಮ್ಮೆ ಅವಕಾಶ ಕೇಳಿದ್ದಾರೆ. ಗೊಂದಲ ಬಂದಿದ್ದರಿಂದ ನಿಧಾನ ಆಗಿದೆ. ಈಗ 25 ರಿಂದ ಕ್ರಿಸ್ ಮಸ್ ಶುರುವಾಗುತ್ತದೆ. ರಾಹುಲ್ ಗಾಂಧಿ ಅವರು ಸಿಗುವುದು ಕಷ್ಟ ಇದೆ. ರಾಹುಲ್ ಗಾಂಧಿ ಅವರನ್ನು ಭೇಟಿಯಾಗಿ ಬಂದ ಮೇಲೆ ಕ್ಯಾಬಿನೆಟ್ ಪುನಾರಚನೆ, ಬದಲಾವಣೆ ಎಲ್ಲಾ ಆಗುತ್ತವೆ ಎಂದರು.
ಸಿದ್ದರಾಮಯ್ಯ ಯಾವಾಗ ಡೆಲ್ಲಿಗೆ ಹೋಗ್ತಾರೋ ಹೇಳೋಕೆ ಆಗುವುದಿಲ್ಲ. ರಾಹುಲ್ ಗಾಂಧಿ ಅವರಿಗೆ ಎರಡು ದಿನದಲ್ಲಿ ವರ್ಕಿಂಗ್ ಕಮಿಟಿ ಮೀಟಿಂಗ್ ಇದೆ. ಆ ಮೇಲೆ ರಾಹುಲ್ ಗಾಂಧಿ ವಿದೇಶಕ್ಕೆ ಹೋಗುತ್ತಾರೆ. ರಾಹುಲ್ ಗಾಂಧಿ ಅವರನ್ನು ಭೇಟಿಯಾಗಿ ಬಂದ ಮೇಲೆ ರಾಜಕೀಯ ಬದಲಾವಣೆ ತೀರ್ಮಾನ ಆಗುತ್ತವೆ. ರಾಹುಲ್ ಗಾಂಧಿ ಭೇಟಿ ಜನವರಿ ಮಧ್ಯ ಭಾಗದಲ್ಲಿ ಆಗುತ್ತೋ ಫೆಬ್ರವರಿ ಮಧ್ಯ ಭಾಗದಲ್ಲಿ ಆಗುತ್ತೋ ಅನ್ನೊದನ್ನು ಹೇಳುವುದಕ್ಕೆ ಆಗುವುದಿಲ್ಲ. ಡಿಕೆ ಶಿವಕುಮಾರ್ ಭೇಟಿ ವಿಚಾರದ ಬಗ್ಗೆ ಮಾತನಾಡಿ ರಾಜಕಾರಣದಲ್ಲಿ ಯಾರು ಶಾಶ್ವತ ಮಿತ್ರರಲ್ಲ ಶತ್ರುಗಳು ಅಲ್ಲ. ರಾಜಕಾರಣದಲ್ಲಿ ಫ್ಲೆಕ್ಸಿಬಿಲಿಟಿ ಇರಬೇಕಾಗುತ್ತದೆ ನಾನೊಬ್ಬನೇ ಅಲ್ಲ ಎಲ್ಲರನ್ನು ಡಿಕೆ ಶಿವಕುಮಾರ್ ಭೇಟಿಯಾಗಿದ್ದಾರೆ. ಸಿದ್ದರಾಮಯ್ಯ ಪರ ಮಾತನಾಡುವವರು, ಡಿಕೆಶಿ ಪರ ಮಾತನಾಡುವವರು ಒಂದಷ್ಟು ಜನ ಇರುತ್ತಾರೆ. ಅವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಕೆಲಸ ರಾಜಕೀಯ ಮುಖಂಡರು ಮಾಡುತ್ತಾರೆ. ಅದೇ ರೀತಿ ಶಿವಕುಮಾರ್ ಸಹ ಮಾಡಿದ್ದಾರೆ. ಡಿಕೆಶಿ ಜೊತೆ ಚರ್ಚೆ ಮಾಡಿದ್ದು ಪಕ್ಷ ಸಂಘಟನೆ ಬಗ್ಗೆ ಎಂದರು.ಡಿಕೆ ಶಿವಕುಮಾರ್ ಕ್ಯಾಬಿನೆಟ್ ನಲ್ಲಿ ನಾನು ಮಂತ್ರಿ ಆಗಲ್ಲ ಎಂಬ ಹೇಳಿಕೆ ವಿಚಾರದ ಬಗ್ಗೆ ಮಾತನಾಡಿದ ಅವರು, ಅದರ ಬಗ್ಗೆ ಎಲ್ಲೂ ಯಾವುದೇ ಚರ್ಚೆ ಆಗಿಲ್ಲ. ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಬಳಿಯೂ ಚರ್ಚೆ ಆಗಿಲ್ಲ. ನಾನು ಸಚಿವ ಸ್ಥಾನವನ್ನು ನಿರೀಕ್ಷೆ ಮಾಡ್ತಿದ್ದೇನೆ. ನಾನು ಅಧಿಕಾರ ಹುಡುಕಿಕೊಂಡು ಹೋದವನಲ್ಲ. ಅಧಿಕಾರ ಕೊಟ್ಟರೆ ನಾನು ಜನಪರ ಕೆಲಸ ಮಾಡುತ್ತೇನೆ ಎಂದರು.
ರಾಜಕಾರಣದಲ್ಲಿ ಏನು ಬೇಕಾದರೂ ಆಗಬಹುದು. ರಾಜಕಾರಣದಲ್ಲಿ ಮಂತ್ರಿ ಆದರು ಸಂತೋಷ ಆಗದೇ ಇದ್ರು ಸಂತೋಷ ಎಂದರು. ಇಡೀ ದೇಶದಲ್ಲಿ 60, 70 ಕಡೆ ವೋಟ್ ಚೋರಿಯಾಗಿದೆ. ಕಾಂಗ್ರೆಸ್ ಗೆ ಹಿನ್ನಡೆ ಆಗಿದೆ. 20 ಕ್ಷೇತ್ರ ಕಡಿಮೆ ಆಗಿದ್ರು ಬಿಜೆಪಿಗೆ ಹಿನ್ನಡೆ ಆಗಿ ಇಷ್ಟೊಂದು ಅಧಿಕಾರಕ್ಕೆ ಬರೋಕೆ ಆಗುತ್ತಿರಲಿಲ್ಲ ಎಂದರು. ಆಗ ಕಾಂಗ್ರೆಸ್, ಕಾಂಗ್ರೆಸ್ ಅಲಿಯನ್ಸ್ ಅಧಿಕಾರಕ್ಕೆ ಬರುತ್ತಿತ್ತು. ಆಗ ರಾಹುಲ್ ಗಾಂಧಿ ಪ್ರಧಾನ ಮಂತ್ರಿ ಆಗುತ್ತಿದ್ದರು ಎಂದರು.ನಮ್ಮ ಸರ್ಕಾರ ಇದ್ದಂತಹ ವೇಳೆ ಬೂತ್ ಲೆವೆಲ್ ಏಜೆಂಟ್ ಅಂತ ನಾವು ಮಾಡಿರುತ್ತೇವೆ. ನೊಂದಾಯಿತ ಎಲ್ಲಾ ಪಾರ್ಟಿಗಳಿಗೆ ಬಿಎಲ್ ಎ ಅಪಾಯಿಂಟ್ ಮೆಂಟ್ ಮಾಡುವ ಅವಕಾಶ ಇರುತ್ತದೆ. ಬಿಎಲ್ಓ ಆಫೀಸರ್ ಗಳನ್ನು ಸರ್ಕಾರ ನೇಮಕ ಮಾಡುತ್ತದೆ. ಬಿಎಲ್ ಎಗಳನ್ನು ಪಾರ್ಟಿ ನೇಮಕ ಮಾಡುತ್ತದೆ. ವೋಟರ್ ಲಿಸ್ಟ್ ಅನೌನ್ಸ್ ಮಾಡಿದಾಗ ಬಿಎಲ್ಎಗಳು ನೋಡಬೇಕಿತ್ತು. ನಾವು ನಮ್ಮ ಕ್ಷೇತ್ರದಲ್ಲಿ ಅದನ್ನೆಲ್ಲಾ ತೆಗೆಸಿಕೊಂಡು ನೋಡುತ್ತೇವೆ. ಸಿಟಿಗಳಲ್ಲಿ ಯಾರು ಹೊಸದಾಗಿ ಸೇರಿಕೊಳ್ತಾರೆ ಅದನ್ನು ನೊಡೋದು ಕಷ್ಟ. ಸಣ್ಣ ಸಣ್ಣ ಮನೆಗಳಲ್ಲಿ 50 ರಿಂದ 100 ಜನರನ್ನ ಸೇರಿಸುತ್ತಾರೆ. ಸಂಶಯಗಳ ಆಧಾರದ ಮೇಲೆ ಅವುಗಳನ್ನು ಪರಿಶೀಲನೆ ಮಾಡಿ ಅಂತಹವರನ್ನು ನಾ ಲಿಸ್ಟ್ ನಿಂದ ಡಿಲೆಟ್ ಮಾಡಿಸಬೇಕಿತ್ತು. ಇದು ಬಿಎಲ್ ಎ ಗಳ ಜವಾಬ್ದಾರಿ ಎಂದ ಅವರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಅದರ ಮುತುವರ್ಜಿ ವಹಿಸಿದ್ದರೆ ಆ ಪ್ರಮಾದವನ್ನು ತಪ್ಪಿಸಬಹುದಿತ್ತು ಎಂದರು.
ಹೈಕಮಾಂಡ್ ಜೊತೆ ಮಾತನಾಡಲು ಸಮಯ ಕೇಳಿದ್ದೇನೆ. ಅವರು ಯಾವಾಗ ಅವಕಾಶ ಕೊಡುತ್ತಾರೋ ಅವಾಗ ಹೋಗಿ ಭೇಟಿ ಮಾಡುತ್ತೇನೆ ಎಂದರು.