ಕನ್ನಡಪ್ರಭ ವಾರ್ತೆ ಜಮಖಂಡಿ

ಪ್ರಧಾನಿ ಮೋದಿ ಅವರ ಕನಸಿನ ಯೋಜನೆ ವಿಕಸಿತ ಭಾರತ, ವಿಬಿ ಜಿ ರಾಮಜಿ ಯಿಂದ ಕಾಂಗ್ರೆಸ್‌ನ ಭ್ರಷ್ಟಾಚಾರಕ್ಕೆ ಕಡಿವಾಣ ಬೀಳಲಿದೆ. ಅದಕ್ಕಾಗಿ ವಿರೋಧ ವ್ಯಕ್ತಪಡಿಸಲಾಗುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು.

ನಗರದ ಶಾಸಕ ಜಗದೀಶ ಗುಡಗುಂಟಿ ನಿವಾಸದಲ್ಲಿ ಗುರುವಾರ ಸಂಜೆ ಏರ್ಪಡಿಸಿದ್ದ ಕಾರ್ಯಕರ್ತರ ಸಮಾವೇಶ ಹಾಗೂ ವಿಬಿ ಜಿ ರಾಮಜಿ ಕುರಿತು ಜಾಗೃತಿ ಅಭಿಯಾನ ಉದ್ದೇಶಿಸಿ ಮಾತನಾಡಿದ ಅವರು, ಗ್ರಾಮಗಳ ಅಭಿವೃದ್ಧಿಗೆ ಕಾನೂನು ಜಾರಿಗೆ ತರಲಾಗಿದೆ. ಮನರೇಗಾ, ಕೂಲಿಗಾಗಿ ಕಾಳು, ಉದ್ಯೋಗ ಖಾತ್ರಿ ಮುಂತಾದ ಹೆಸರುಗಳಿದ್ದವು. ಆದರೆ, ಹೆಸರಿನಲ್ಲಿ ಬದಲಾವಣೆ ಮಾಡಲಾಗಿದ್ದು, 100 ದಿನಗಳ ಕೆಲಸ ಹಾಗೂ ₹350 ಸಂಭಾವನೆ ಬದಲು 120 ದಿನಗಳ ಕೆಲಸ ಹಾಗೂ ₹375 ಸಂಭಾವನೆಗೆ ಹೆಚ್ಚಿಸಲಾಗಿದೆ. ಗ್ರಾಮಗಳ ಅಭಿವೃದ್ಧಿ ಯೋಜನೆಯ ಮುಖ್ಯ ಉದ್ದೇಶವಾಗಿದೆ. ನಕಲಿ ಬಿಲ್‌ಗಳನ್ನು ತೆಗೆಯಲು ಅವಕಾಶ ಇಲ್ಲದ ಕಾರಣ ಕಾಂಗ್ರೆಸ್‌ ವಿರೋಧಿಸುತ್ತಿದೆ ಎಂದು ದೂರಿದರು.ಗಾಂಧಿ ಕೊಲೆ ಎಂದು ಆರೋಪಿಸುವ ಕಾಂಗ್ರೆಸ್ಸಿಗರು ಗಾಂಧಿ ಹೆಸರನ್ನು ಮಾತ್ರ ಬಳಸಿಕೊಂಡಿದ್ದಾರೆ. ಪ್ರಧಾನಿ ಮೋದಿ ಅವರು ಗಾಂಧೀಜಿ ಕನಸಾಗಿದ್ದ ಸ್ವಚ್ಛ ಭಾರತ ಯೋಜನೆ ಜಾರಿಗೆ ತಂದರು. ಸಾಬರಮತಿ ಆಶ್ರಮವನ್ನು ನಿರ್ಮಿಸಿ ನೆಹರು ಕನಸು ನನಸು ಮಾಡಿದರು. ಪ್ರಧಾನಿ ಭಾವಚಿತ್ರ ಸಹಿಸಿಕೊಳ್ಳಲಾಗದ ಇವರು ಜನೌಷಧಿ ಕೇಂದ್ರಗಳನ್ನು ಮುಚ್ಚಿದರು. ನನ್ನ ತೆರಿಗೆ, ನನ್ನ ಹಕ್ಕು ಎನ್ನುವ ಅವರು ಬೆಂಗಳೂರಿನಿಂದ ಹೆಚ್ಚು ತೆರಿಗೆ ಹಣ ವಸೂಲಾಗುತ್ತಿದ್ದರೂ ಏಕೆ ಬೆಂಗಳೂರನ್ನು ಮಾತ್ರ ಅಭಿವೃದ್ಧಿ ಪಡಿಸಲು ಸಾಧ್ಯವಾಗಿಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅದು ಸಾಧ್ಯವಿಲ್ಲ ಎಂದು ತಿಳಿಸಿದರು.ಕಾಂಗ್ರೆಸ್‌ನ ಆಡಳಿತ ವೈಫಲ್ಯಗಳನ್ನು ಮುಚ್ಚಿ ಹಾಕಲು ಇಂಥಹ ಕಾರ್ಯಕ್ರಮಗಳನ್ನು ನಡೆಸುತ್ತಿದೆ. ಗ್ಯಾರಂಟಿ ಯೋಜನೆಗಳಿಂದ ಆರ್ಥಿಕವಾಗಿ ಸರ್ಕಾರ ಮುಗ್ಗರಿಸಿದೆ. ಸಂಬಳ ಕೊಡಲಾಗದ ಸ್ಥಿತಿಗೆ ಬಂದಿದೆ. ಹಿಮಾಚಲಪ್ರದೇಶ ಹಾಗೂ ತೆಲಂಗಾಣಾದಲ್ಲೂ ಇದೇ ಪರಿಸ್ಥಿತಿ ನಿರ್ಮಾಣವಾಗಿದೆ. ಅಬಕಾರಿ ಇಲಾಖೆಗೆ ₹40 ಸಾವಿರ ಕೋಟಿ ಟಾರ್ಗೆಟ್‌ ನೀಡಲಾಗಿದ್ದು, ಎಲ್ಲೆಂದರಲ್ಲೆ ಮದ್ಯ ಮಾರಾಟ ಮಾಡುವ ಹುನ್ನಾರ ನಡೆದಿದೆ. ರಾಜ್ಯದಲ್ಲಿ ಅಭಿವೃದ್ಧಿ ಕಾಮಗಾರಿಗೆ ಹಣವಿಲ್ಲ. ಆದರೆ, ಶಾಸಕರನ್ನು ವಿದೇಶಕ್ಕೆ ಹಳುಹಿಸಲಾಗುತ್ತಿದೆ ಎಂದು ಲೇವಡಿ ಮಾಡಿದರು.ಶಾಸಕ ಜಗದೀಶ ಗುಡಗುಂಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ತೇರದಾಳ ಶಾಸಕ ಸಿದ್ದು ಸವದಿ, ಮಾಜಿ ಶಾಸಕರಾದ ಶ್ರೀಕಾಂತ ಕುಲಕರ್ಣಿ, ಜಿ.ಎಸ್‌.ನ್ಯಾಮಗೌಡ, ವಿಜುಗೌಡ ಪಾಟೀಲ, ಬಾಗಲಕೊಟೆ ಜಿಲ್ಲಾಧ್ಯಕ್ಷ ಶಾಂತನಗೌಡ ಪಾಟೀಲ, ಕಾರ್ಯದರ್ಶಿ ಶರಣು ತಳ್ಳಿಕೇರಿ, ಡಾ.ವಿಜಯಲಕ್ಷ್ಮೀ ತುಂಗಳ, ನಗರ ಅಧ್ಯಕ್ಷ ಅಜಯ ಕಡಪಟ್ಟಿ. ಗ್ರಾಮೀಣ ಅಧ್ಯಕ್ಷ ಮಲ್ಲು ದಾನಗೌಡ ಮುಂತಾದವರು ಇದ್ದರು. ಮುಖಂಡ ಸಿ.ಟಿ.ಉಪಾಧ್ಯಾಯ ಕಾರ್ಯಕ್ರಮ ನಿರೂಪಿಸಿದರು. ಡಾ.ಅಜಯ ಕುಲಕರ್ಣಿ ವಂದೇ ಮಾತರಂ ಹಾಡಿದರು.ಮಾಜಿ ಸಿಎಂ ಬಿ.ಎಸ್‌.ಯಡಿಯೂರಪ್ಪ ಅವರಿಗೆ ಉತ್ತರ ಕರ್ನಾಟಕದ ಜನ ಹೃದಯದಲ್ಲಿ ಸ್ಥಾನ ನೀಡಿದ್ದಾರೆ. ರಾಜ್ಯದ ಜನರ ವಿಶ್ವಾಸ ಪ್ರೀತಿಗೆ ಧಕ್ಕೆ ಬರದಂತೆ ರಾಜ್ಯದಲ್ಲಿ ಪಕ್ಷವನ್ನು ಕಟ್ಟಿ ಬೆಳೆಸುತ್ತೇನೆ. ತಂದೆಯವರ ಮಾರ್ಗ ದರ್ಶನದಲ್ಲಿ ಸಮಗ್ರ ಕರ್ನಾಟಕದ ಅಭಿವೃದ್ಧಿಗೆ ಶ್ರಮಿಸುತ್ತೇನೆ.

-ಬಿ.ವೈ.ವಿಜಯೇಂದ್ರ, ಬಿಜೆಪಿ ರಾಜ್ಯಾಧ್ಯಕ್ಷರು.