ಕನ್ನಡಪ್ರಭ ವಾರ್ತೆ ಬೈಲಹೊಂಗಲ
ಸಮಾಜದಲ್ಲಿ ಸಮಾನತೆ ಮತ್ತು ಸಾಮಾಜಿಕ ನ್ಯಾಯ ಸ್ಥಾಪನೆಗೆ ಡಾ.ಬಾಬಾಸಾಹೇಬ ಅಂಬೇಡ್ಕರ ಅವರ ಚಿಂತನೆಗಳು ಇಂದಿಗೂ ದಿಕ್ಕು ತೋರಿಸುತ್ತಿವೆ ಎಂದು ಉಪನ್ಯಾಸಕ ಎಸ್.ಆರ್.ಕಲಹಾಳ ಹೇಳಿದರು.ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ತಾಲೂಕು ಆಡಳಿತ, ತಾಲೂಕು ಪಂಚಾಯಿತಿ, ನಗರಸಭೆ ಹಾಗೂ ಸಮಾಜ ಕಲ್ಯಾಣ ಇಲಾಖೆ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ ಡಾ.ಬಾಬಾಸಾಹೇಬ ಅಂಬೇಡ್ಕರ ಅವರ 135ನೇ ಜಯಂತಿ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದರು. ಅಂಬೇಡ್ಕರ್ ಅವರು ಶಿಕ್ಷಣ, ಸಂಘಟನೆ ಮತ್ತು ಹೋರಾಟದ ಮೂಲಕ ಶೋಷಿತ ವರ್ಗಗಳಿಗೆ ಹೊಸ ದಾರಿ ತೋರಿದರು. ಯುವಕರು ಅವರ ಆದರ್ಶಗಳನ್ನು ಅಳವಡಿಸಿಕೊಂಡಾಗ ಸಮಾನತೆಯ ಸಮಾಜ ನಿರ್ಮಾಣ ಸಾಧ್ಯವೆಂದರು.ಡಿವೈಎಸ್ಪಿ ಡಾ.ವೀರಯ್ಯ ಹಿರೇಮಠ ಮಾತನಾಡಿ, ಸರ್ಕಾರದ ವಿವಿಧ ಯೋಜನೆಗಳ ಸದುಪಯೋಗ ಪಡೆದು ಹಿಂದುಳಿದ ವರ್ಗಗಳು ಶಿಕ್ಷಣ ಹಾಗೂ ಆರ್ಥಿಕ ಕ್ಷೇತ್ರದಲ್ಲಿ ಮುಂದೆ ಬರಬೇಕು ಎಂದು ಹೇಳಿದರು.
ತಹಸೀಲ್ದಾರ್ ಹನುಮಂತ ಶಿರಹಟ್ಟಿ ಮಾತನಾಡಿದರು. ಪ್ರೊಬೇಷನರಿ ಎಸ್ಪಿ ಡಾ.ಭಾನುಪ್ರಕಾಶ, ನಗರಸಭೆ ಪೌರಾಯುಕ್ತೆ ಭಾಗ್ಯಶ್ರೀ ಹುಗ್ಗಿ, ತಾಪಂ ಇಒ ಸಂಜೀವ ಜುನ್ನೂರ, ತಾಲೂಕು ಆರೋಗ್ಯ ಅಧಿಕಾರಿ ಡಾ.ಎಸ್.ಎಸ್.ಸಿದ್ದಣ್ಣನವರ, ಸುರೇಶ ರಾಯಪ್ಪಗೋಳ, ರುದ್ರಪ್ಪ ನಿಂಗಣ್ಣವರ, ರುದ್ರಪ್ಪ ಮುಂದಿನಮನಿ, ಸಂಜು ಮುರಗೋಡ, ಮಲ್ಲಿಕಾರ್ಜುನ ಕಿತ್ತೂರ, ಶಂಕರ ಕೊರವಿಕೊಪ್ಪ ಸೇರಿ ಅಧಿಕಾರಿಗಳು, ಜನಪ್ರತಿನಿಧಿಗಳು, ಶಿಕ್ಷಕರು, ವಿದ್ಯಾರ್ಥಿಗಳು ಇದ್ದರು. ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಎಂ.ಎಸ್.ಉಳ್ಳಾಗಡ್ಡಿ ಸ್ವಾಗತಿಸಿದರು.ನಗರಸಭೆ ಆವರಣದಲ್ಲಿ ಡಾ.ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಮೆರವಣಿಗೆಗೆ ಚಾಲನೆ ನೀಡಲಾಯಿತು. ಮೆರವಣಿಗೆ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಅಂಬೇಡ್ಕರ್ ನಗರ ತಲುಪಿತು.