ಜನರ ಅಚ್ಚರಿಗೆ ಕಾರಣವಾದ ಸರ್ಕಾರದ ನಡೆ
ಕನ್ನಡಪ್ರಭ ವಾರ್ತೆ ರಾಣಿಬೆನ್ನೂರು
ಲಂಚ ಪಡೆಯುವಾಗ ಲೋಕಾಯುಕ್ತ ಅಧಿಕಾರಿಗಳ ಕೈಗೆ ರೆಡ್‌ಹ್ಯಾಂಡ್ ಆಗಿ ಸಿಕ್ಕಿಬಿದ್ದ ರಾಣಿಬೆನ್ನೂರು ತಾಲೂಕು ದಂಡಾಧಿಕಾರಿ (ತಹಸೀಲ್ದಾರ್) ಎಚ್.ಎನ್. ಶಿರಹಟ್ಟಿ ಅವರು 17 ದಿನದಲ್ಲಿ ಮತ್ತೆ ಅದೇ ಸ್ಥಾನಕ್ಕೆ ನಿಯುಕ್ತಿ ಆಗಿರುವುದು ಸಾರ್ವಜನಿಕರಲ್ಲಿ ಅಚ್ಚರಿ ಮೂಡಿಸಿದೆ.ಲೋಕಾ ಬಲೆಗೆ ಬಿದ್ದರೂ ಪುನಃ ಅದೇ ಹುದ್ದೆಯಲ್ಲಿ ಕಾರ್ಯನಿರ್ವಹಿಸಬಹುದೇ? ಎಂಬ ಜಿಜ್ಞಾಸೆ ಜನರ ಮನದಲ್ಲಿ ಉಂಟಾಗಿದ್ದು ಸಾರ್ವತ್ರಿಕವಾಗಿ ಈ ವಿಷಯ ಚರ್ಚೆಯಾಗುತ್ತಿದೆ.
ರಾಜ್ಯದಲ್ಲಿ ಒಂದು ವರ್ಷದ ಅವಧಿಯಲ್ಲಿ 307 ಟ್ರ್ಯಾಪ್ ಪ್ರಕರಣ ನಡೆದಿವೆ. ಆದರೆ ಇದರಲ್ಲಿ ಯಾವ ಅಧಿಕಾರಿಗಳಿಗೂ ಮರಳಿ ಅದೇ ಜಾಗದಲ್ಲಿ ಕೆಲಸ ಮಾಡಲು ಅವಕಾಶ ನೀಡಿದ ಉದಾಹರಣೆಗಳಿಲ್ಲ. ಅಧಿಕಾರಿ ಟ್ರ್ಯಾಪ್ ಆದ ಸ್ಥಳಕ್ಕೆ ಮತ್ತೆ ಕೆಲಸ ಮಾಡಲು ಅವಕಾಶ ನೀಡಿದರೆ ಸಾಕ್ಷಿ ನಾಶ, ದೂರುದಾರನ ವಿರುದ್ಧ ಷಡ್ಯಂತ್ರ ಮಾಡುವ ಸಂಭವ ಇರುತ್ತದೆ ಎನ್ನುವ ಕಾರಣಕ್ಕೆ ಅಮಾನತುಗೊಳಿಸಿ ನಂತರ ಕೆಲ ದಿನದಲ್ಲಿ ಬೇರೆಡೆ ನಿಯೋಜನೆ ಮಾಡಲಾಗುತ್ತದೆ.
ತಹಸೀಲ್ದಾರ್ ಕರ್ತವ್ಯದ ಕುರಿತು ಜಿಲ್ಲಾಧಿಕಾರಿ ರಘುನಂದನ್ ಮೂರ್ತಿ ಅವರನ್ನು ವಿಚಾರಿಸಿದಾಗ ಅದು ರಾಜ್ಯ ಸರ್ಕಾರದಿಂದ ಆಗಬೇಕು. ಅವರ ನಿಯೋಜನೆ ಕುರಿತು ನಾವು ಹೇಳಲು ಬರುವುದಿಲ್ಲ ಎಂದಿದ್ದಾರೆ.
ರಾಣಿಬೆನ್ನೂರು ತಹಸೀಲ್ದಾರ್ ಎಚ್.ಎನ್. ಶಿರಹಟ್ಟಿ ಲಂಚ ತೆಗೆದುಕೊಳ್ಳುತ್ತಿದ್ದ ಸಮಯದಲ್ಲಿ ಟ್ರ್ಯಾಪ್ ಮಾಡಿ ಪ್ರಕರಣ ದಾಖಲಿಸಲಾಗಿದೆ. ಒಂದು ದಿನ ಅವರನ್ನು ಬಂಧನದಲ್ಲಿಡಲಾಗಿತ್ತು. ಜಾಮೀನು ಪಡೆದ ಮೇಲೆ ಅವರನ್ನು ಬಿಡುಗಡೆ ಮಾಡಲಾಗಿದೆ. ಈ ಬಗ್ಗೆ ಕಂದಾಯ ಇಲಾಖೆಗೆ ವರದಿ ಸಲ್ಲಿಸಲಾಗಿದೆ. ಮುಂದಿನ ಕ್ರಮದ ಬಗ್ಗೆ ಕಂದಾಯ ಇಲಾಖೆಯಿಂದ ತಿಳಿಯಬೇಕಿದೆ ಎನ್ನುತ್ತಾರೆ ಲೋಕಾಯುಕ್ತ ಹಾವೇರಿ ಡಿವೈಎಸ್ಪಿ ಬಿ.ಪಿ. ಚಂದ್ರಶೇಖರ.