ಕುಶಾಲನಗರ: ದುಬಾರೆ ಆನೆ ಶಿಬಿರಕ್ಕೆ ಸಾರ್ವಜನಿಕರ ಭೇಟಿಗೆ ಭಾನುವಾರದಿಂದ ಅವಕಾಶ ಕಲ್ಪಿಸಲಾಗಿದೆ. ಮಡಿಕೇರಿ ಕ್ಷೇತ್ರ ಶಾಸಕ ಡಾ ಮಂತರ್ ಗೌಡ ಅವರು ಪ್ರವಾಸಿಗರಿಗೆ ಆನೆ ಶಿಬಿರಕ್ಕೆ ತೆರಳುವ ಸ್ವಾಗತ ಕೇಂದ್ರದಲ್ಲಿ ಟಿಕೆಟ್ ವಿತರಿಸುವ ಮೂಲಕ ಚಾಲನೆ ನೀಡಿದರು.
ಈ ಸಂದರ್ಭ ಮಾತನಾಡಿದ ಶಾಸಕರು ಈ ಹಿಂದೆ ಶಿಬಿರದಲ್ಲಿ ಅಹಿತಕರ ಘಟನೆಯೊಂದು ನಡೆದಿದ್ದು ಮುಂದಿನ ದಿನಗಳಲ್ಲಿ ಯಾವುದೇ ರೀತಿಯ ಸಮಸ್ಯೆಗಳು ಉಂಟಾಗದಂತೆ ಪ್ರತಿಯೊಬ್ಬರೂ ಕೈಜೋಡಿಸಿ ದುಬಾರೆ ಆನೆ ಶಿಬಿರದ ಅಭಿವೃದ್ಧಿಯೊಂದಿಗೆ ಅತ್ಯುತ್ತಮ ಪ್ರವಾಸಿ ಕೇಂದ್ರವನ್ನಾಗಿ ರೂಪಿಸುವಂತಾಗಬೇಕು ಎಂದರು. ಶಾಸಕರು ಶಿಬಿರದ ಸುರಕ್ಷತಾ ವಿಧಾನಗಳ ಬಗ್ಗೆ ಮಡಿಕೇರಿ ವಿಭಾಗದ ಅರಣ್ಯ ಉಪ ಸಂರಕ್ಷಣಾಧಿಕಾರಿ ವಿ ಅಭಿಷೇಕ್ ಅವರಿಂದ ಮಾಹಿತಿ ಪಡೆದರು. ಅರಣ್ಯ ಸಂರಕ್ಷಣಾಧಿಕಾರಿ ವಿ ಅಭಿಷೇಕ್ ಮಾತನಾಡಿ ಶಿಬಿರದಲ್ಲಿ ಸುರಕ್ಷತಾ ವಿಧಾನಗಳಲ್ಲಿನ ಮುಂಜಾಗ್ರತ ಕ್ರಮಗಳನ್ನು ಕಡ್ಡಾಯವಾಗಿ ಪಾಲಿಸಬೇಕಾಗಿದೆ. ಶಿಬಿರವು ಸಾರ್ವಜನಿಕ ಪ್ರವೇಶಕ್ಕೆ ಯೋಗ್ಯವಾಗಿರುವ ಬಗ್ಗೆ ಎಲ್ಲಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಹೇಳಿದರು. ಪ್ರಾರಂಭದಲ್ಲಿ ದಿನನಿತ್ಯ ಬೆಳಗ್ಗೆ 9.30ಯಿಂದ 11.30 ತನಕ 2 ಗಂಟೆಗಳ ಕಾಲ ಸೀಮಿತವಾಗಿ ಪ್ರವಾಸಿಗರಿಗೆ ಭೇಟಿಗೆ ಅವಕಾಶ ಕಲ್ಪಿಸಲಾಗುವುದು. ಒಂದು ತಂಡದಲ್ಲಿ 150 ಪ್ರವಾಸಿಗರಿಗೆ ಮಾತ್ರ ಭೇಟಿಗೆ ಅವಕಾಶ ನಂತರ ತಂಡ ತಂಡವಾಗಿ ಶಿಬಿರಕ್ಕೆ ತೆರಳಲು ಅವಕಾಶ ಕಲ್ಪಿಸಲಾಗುತ್ತದೆ ಎಂದರು. ಪ್ರಸಕ್ತ ಶಿಬಿರದ ಹತ್ತು ಆನೆಗಳನ್ನು ಮಾತ್ರ ಪ್ರವಾಸಿಗರ ಭೇಟಿಗೆ ಅವಕಾಶ ಕಲ್ಪಿಸಲಾಗುತ್ತದೆ ಎಂದರು.
ಪ್ರತಿ ಮಂಗಳವಾರ ಶಿಬಿರಕ್ಕೆ ಪ್ರವಾಸಿಗರ ಭೇಟಿಗೆ ನಿರ್ಬಂಧ ಹೇರಲಾಗಿದೆ. ಆ ದಿನದಂದು ಶಿಬಿರದ ನಿರ್ವಹಣಾ ಕಾರ್ಯ ನಡೆಯಲಿದೆ ಎಂದರು. ಮುಂದಿನ ದಿನಗಳಲ್ಲಿ ಪರಿಸ್ಥಿತಿಗೆ ಅನುಗುಣವಾಗಿ ಪ್ರವಾಸಿಗರ ಭೇಟಿಗೆ ಹೆಚ್ಚಿನ ಅವಧಿ ನಿಗದಿಪಡಿಸಲು ಚಿಂತಿಸಲಾಗಿದೆ ಎಂದರು.ಈ ಸಂದರ್ಭ ಕುಶಾಲನಗರ ಯೋಜನಾ ಅಧಿಕಾರದ ಅಧ್ಯಕ್ಷ ಪ್ರಮೋದ್ ಮುತ್ತಪ್ಪ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ನವೀನ್ ಕುಮಾರ್, ಕುಶಾಲನಗರ ವಲಯ ಅರಣ್ಯ ಅಧಿಕಾರಿ ರಕ್ಷಿತ್, ಉಪ ಅರಣ್ಯ ವಲಯ ಅಧಿಕಾರಿ ಕನ್ನಂಡ ರಂಜನ್, ವೆಂಕಟೇಶ್ ನಲವಡೆ, ಸಿಬ್ಬಂದಿಗಳು ಮಾವುತರು ಕಾವಡಿಗರು, ದುಬಾರೆ ರಾಪ್ಟಿಂಗ್ ಅಸೋಸಿಯೇಷನ್, ಸಲಹೆಗಾರರಾದ ಕೆ ಎಸ್ ರತೀಶ್, ಪ್ರಮುಖರಾದ ನಂಗಾರು ಜಗ, ವಸಂತ್, ರಾಜೇಶ್, ವಿಜು ಚೆಂಗಪ್ಪ ಪ್ರಮುಖರಾದ ಅಪ್ಪು ಸುನಿತಾ ಮತ್ತಿತರರು ಇದ್ದರು.