ಶಿರಸಿ ಮಾರಿಕಾಂಬಾ ಜಾತ್ರೆಯ ಪೂರ್ವಭಾವಿ ಸಭೆ
ರಾಜ್ಯದ ಇತಿಹಾಸ ಪ್ರಸಿದ್ಧ ಶಿರಸಿಯ ಮಾರಿಕಾಂಬಾ ದೇವಿಯ ಜಾತ್ರೆಯು ಶಾಂತಿ, ಸುವ್ಯವಸ್ಥೆ, ವಿಜೃಂಭಣೆಯಿಂದ ನಡೆಸಬೇಕು. ಇದಕ್ಕೆ ಎಲ್ಲ ಸಹಕಾರ ಅಗತ್ಯ. ಸ್ವಚ್ಛತೆಗೆ ಮೊದಲ ಆದ್ಯತೆ ನೀಡಲಾಗುತ್ತದೆ. ಎಲ್ಲೆಂದರಲ್ಲಿ ಕಸ ಎಸೆಯುವುದನ್ನು ಸಾರ್ವಜನಿಕರು ತಪ್ಪಿಸಬೇಕು. ಎಲ್ಲ ಭಕ್ತರು ಸ್ವಚ್ಛತೆಗೆ ಆದ್ಯತೆ ನೀಡಿ ಜಾತ್ರೆ ಆಚರಣೆ ಮಾಡಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಹೇಳಿದರು.
ಸೋಮವಾರ ನಗರದ ಆಡಳಿತ ಸೌಧದಲ್ಲಿ ಶಿರಸಿ ಮಾರಿಕಾಂಬಾ ಜಾತ್ರೆಯ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಾರ್ವಜನಿಕರು ನಮ್ಮೂರಿನ ಜಾತ್ರೆ ಎಂದು ಭಾಗವಹಿಸಬೇಕು. ದೇವಿ ಜಾತ್ರೆಗೆ ನಿತ್ಯವೂ ಒಂದು ಲಕ್ಷಕ್ಕೂ ಅಧಿಕ ಜನರು ಆಗಮಿಸುತ್ತಾರೆ. ಎಲ್ಲ ಅಧಿಕಾರಿಗಳು ತಮ್ಮ ಕೆಲಸವನ್ನು ಜವಾಬ್ದಾರಿಯಿಂದ ನಿರ್ವಹಿಸಬೇಕು. ಶಿರಸಿ ಸುತ್ತಮುತ್ತಲಿನ ಸಾರ್ವಜನಿಕರು ಮನೆ ಕೆಲಸ ಬಿಟ್ಟು ಎಲ್ಲರೂ ಭಾಗವಹಿಸಿದ್ದಾರೆ. ಜಾತ್ರೆ ಯಶಸ್ವಿಗೆ ಶಿರಸಿಯವರು ಸಹಕಾರ ನೀಡುತ್ತಿದ್ದಾರೆ ಎಂದರು.ಯಾವುದೇ ಸರ್ಕಾರದಲ್ಲಿ ಜಾತ್ರೆಗೆ ವಿಶೇಷ ಅನುದಾನ ಎಂದಿಗೂ ಬರುವುದಿಲ್ಲ. ಕಾಂಗ್ರೆಸ್ ಸರ್ಕಾರದ ಬಳಿ ಅನುದಾನವಿದೆ. ಶಾಸಕರ ಬಳಿ ₹50 ಕೋಟಿ ರೂ. ಅನುದಾನವಿದೆ. ಜಾತ್ರೆಯ ಒಳಗಾಗಿ ನಗರದ ಎಲ್ಲ ರಸ್ತೆಗಳು ಡಾಂಬರೀಕರಣಗೊಳ್ಳುತ್ತದೆ. ಪ್ರತಿ ಸರ್ಕಾರಿ ಇಲಾಖೆಯ ಕಟ್ಟಡಕ್ಕೆ ಸುಣ್ಣಬಣ್ಣ ಹಚ್ಚಿ, ವಿದ್ಯುತ್ ದೀಪಾಲಂಕಾರ ಮಾಡಬೇಕು. ಸರ್ಕಾರದ ಹತ್ತಿರ ಸಾಮರ್ಥ್ಯವೂ ಇದೆ. ಹಣವೂ ಇದೆ. ಯಾವುದಕ್ಕೂ ಕೊರತೆಯಾಗಬಾರದು. ಜಾತ್ರೆಯ ಪೂರ್ವದಲ್ಲಿ ಬೀದಿನಾಯಿಗಳ ನಿಯಂತ್ರಣ ಮಾಡಲು ನಗರಸಭೆ ಕ್ರಮ ಕೈಗೊಳ್ಳಬೇಕೆಂದು ಸೂಚಿಸಿದರು.
ಶಾಸಕ ಭೀಮಣ್ಣ ನಾಯ್ಕ ಮಾತನಾಡಿ, ದಕ್ಷಿಣ ಭಾರತದ ದೊಡ್ಡ ಜಾತ್ರೆ. ಸಕಲ ವ್ಯವಸ್ಥೆಗೆ ಯೋಜಿಸಲಾಗಿದೆ. ಈವರಗೆ ಜಾತ್ರೆ ನಡೆದಂತೆ ಮುಂದೆಯೂ ಶಾಂತಿಯುತವಾಗಿ ನಡೆಯಲು ಎಲ್ಲರ ಸಹಕಾರ ಬೇಕು. ಈಗಾಗಲೇ ನಗರದಾದ್ಯಂತ ಸಂಚಾರ ಮಾಡಿ, ಅಗತ್ಯವಿರುವ ಕಾಮಗಾರಿಗಳ ಪರಿಶೀಲನೆ ನಡೆಸಲಾಗಿದ್ದು, ಕುಡಿಯುವ ನೀರು, ಆದ್ಯತೆ ನೀಡಲಾಗುತ್ತದೆ. ಕೆಂಗ್ರೆ, ಮಾರಿಗದ್ದೆ ನೀರಿನ ಹರಿವು ಒತ್ತಡ ಕಡಿಮೆ ಆದಂತೆ ನೀರು ನಿಲ್ಲಿಸಲಾಗುತ್ತದೆ ಎಂದರು.ಹೆಸ್ಕಾಂ ಎಇಇ ನಾಗರಾಜ, ನಗರದಲ್ಲಿ ವಿದ್ಯುತ್ ಸಮಸ್ಯೆ ಆಗದಂತೆ ನೋಡುತ್ತೇವೆ ಎಂದರು.
ಮಾರಿಕಾಂಬಾ ದೇವಸ್ಥಾನದ ಅಧ್ಯಕ್ಷ ಆರ್.ಜಿ. ನಾಯ್ಕ ಮಾತನಾಡಿ, ಜಾತ್ರಾ ಗದ್ದುಗೆ ಸುತ್ತಲಿನ ಅಂಗಡಿಗಳನ್ನು ಆದಷ್ಟು ಶೀಘ್ರ ತೆರವು ಮಾಡಿಕೊಡಬೇಕು ಎಂದರು.ಡಿಎಸ್ಪಿ ಗೀತಾ ಪಾಟೀಲ ಮಾತನಾಡಿ, ಜಾತ್ರೆಯ ಶಾಂತಿ-ಸುವ್ಯವಸ್ಥೆ ಕಾಪಾಡಲು 1 ಸಾವಿರ ಪೊಲೀಸರು ಇರಲಿದ್ದಾರೆ. ಪ್ರವೇಶ, ನಿರ್ಗಮನದಲ್ಲಿ ಗದ್ದುಗೆ ಹೊರತುಪಡಿಸಿ 45 ಸಿಸಿಕ್ಯಾಮೆರಾ ಹಾಕಬೇಕಾಗುತ್ತದೆ. 10ರಿಂದ 12 ಪಾರ್ಕಿಂಗ್ ಇದೆ. ಪಾರ್ಕಿಂಗ್ ವ್ಯವಸ್ಥೆಯಲ್ಲಿ ಸ್ವಚ್ಛತೆ ಆಗಬೇಕು ಎಂದರು.
ಸಾರಿಗೆ ಸಂಸ್ಥೆಯ ವಿಭಾಗೀಯ ನಿಯಂತ್ರಣಾಧಿಕಾರಿ ಬಸವರಾಜ ಅಮ್ಮಣ್ಣನವರ ಮಾತನಾಡಿ, ಜಾತ್ರೆಯ ವಿಶೇಷವಾಗಿ ಉತ್ತಮ ಕಂಡೀಷನ್ ಹೊಂದಿರುವ 230 ಬಸ್ಸುಗಳ ವ್ಯವಸ್ಥೆ ಮಾಡಿಕೊಳ್ಳುತ್ತೇವೆ. ಭಕ್ತರ ಬೇಡಿಕೆ ಅನುಗುಣವಾಗಿ ಬಸ್ಸು ಓಡಿಸುತ್ತೇವೆ ಎಂದರು.ಹೋರಾಟಗಾರ ಅನಂತಮೂರ್ತಿ ಹೆಗಡೆ ಮಾತನಾಡಿ, ಜಾತ್ರಾ ಕಾಲದಲ್ಲಿ ಕಲ್ಯಾಣ ಮಂಟಪಗಳನ್ನು ಧರ್ಮ ಛತ್ರ ಮಾಡಬೇಕು. ಶೌಚಾಲಯ, ಇತರೆ ವ್ಯವಸ್ಥೆ ಆಗಬೇಕು ಎಂದು ಬೇಡಿಕೆ ಇಟ್ಟರು.
ನಗರಸಭೆ ಮಾಜಿ ಸದಸ್ಯ ಶ್ರೀಧರ ಮೊಗೇರ, ಪ್ರಮುಖ ಸುಭಾಸ ಕಾನಡೆ ಮಾತನಾಡಿ ಸಲಹೆ ನೀಡಿದರು.ಜಿಲ್ಲಾ ಗ್ಯಾರಂಟಿ ಪ್ರಾಧಿಕಾರದ ಅಧ್ಯಕ್ಷ ಸತೀಶ ನಾಯ್ಕ, ಜಿಪಂ ಸಿಇಓ ಡಾ. ದಿಲೀಪ ಶಸಿ, ಉಪ ಅರಣ್ಯ ಸಂರಕ್ಷಣಾಧಿಕಾರಿ ಸಂದೀಪ ಸೂರ್ಯವಂಶಿ, ತಹಸೀಲ್ದಾರ ಪಟ್ಟರಾಜ ಗೌಡ, ಸಿಪಿಐ ಶಶಿಕಾಂತ ವರ್ಮಾ, ತಾಪಂ ಇಓ ಚನ್ನಬಸಪ್ಪ ಹಾವಣಗಿ, ತಾಪಂ ಆಡಳಿತಾಧಿಕಾರಿ ಡಾ. ಬಿ.ಪಿ. ಸತೀಶ, ಮಾರಿಕಾಂಬಾ ದೇವಾಲಯದ ಉಪಾಧ್ಯಕ್ಷ ಸುದೇಶ ಜೋಗಳೇಕರ್, ಧರ್ಮದರ್ಶಿ ಸುಧೀರ ಹಂದ್ರಾಳ ಮತ್ತಿತರರು ಇದ್ದರು.