ಬಹದ್ದೂರಬಂಡಿ ಶಾಲೆಯಲ್ಲಿ ವಿಶ್ವ ಅಂಗವಿಕಲರ ದಿನಾಚರಣೆ
ಅಂಗವಿಕಲರಾಗಿದ್ದೂ ಸಂಗೀತ ಕ್ಷೇತ್ರದಲ್ಲಿ ಸಾಮಾನ್ಯರಿಗಿಂತ ಹೆಚ್ಚಿನ ಸಾಧನೆ ಮಾಡಿದ ಹಾಗೂ ಅಂಗವಿಕಲರ ಬದುಕಿಗೆ ಆಶಾಕಿರಣವಾಗಿದ್ದ ಪಂ. ಪುಟ್ಟರಾಜ ಗವಾಯಿಗಳಿಗೆ ಕೇಂದ್ರ ಸರ್ಕಾರ ಮರಣೋತ್ತರ ಭಾರತರತ್ನ ನೀಡಬೇಕು ಎಂದು ಮಾಜಿ ಗೃಹಸಚಿವ ಪಿ.ಜಿ.ಆರ್. ಸಿಂಧ್ಯಾ ಹೇಳಿದರು.
ತಾಲೂಕಿನ ಬಹದ್ದೂರಬಂಡಿ ಶಾಲೆಯಲ್ಲಿ ವಿಕಲಚೇತನ ನೌಕರರ ಸಂಘ ತಾಲೂಕು ಘಟಕ ಹಾಗೂ ಶಾಲೆಯ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ವಿಶ್ವ ಅಂಗವಿಕಲರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಪಂ. ಪುಟ್ಟರಾಜ ಗವಾಯಿಗಳು ಹುಟ್ಟುತ್ತಾ ಅಂಧರಾಗಿದ್ದರೂ ಧೃತಿಗೆಡದೇ ಸಂಗೀತ ಅಭ್ಯಾಸ ಮಾಡುತ್ತಾ, ಸಂಗೀತ ಕ್ಷೇತ್ರದಲ್ಲಿ ಸಾಮಾನ್ಯರು ಮಾಡದ ಸಾಧನೆ ಮಾಡುವ ಜತೆಗೆ ತಮ್ಮ ಹಾಗೆ ಇರುವ ಅನೇಕ ಅಂಕವಿಕಲರ ಬಾಳು ಕೂಡಾ ಸರಿಯಾದ ದಿಕ್ಕಿನಲ್ಲಿ ಸಾಗಬೇಕು ಎಂಬ ಉದ್ದೇಶವನ್ನು ಇಟ್ಟುಕೊಂಡು ಆಶ್ರಮ ಪ್ರಾರಂಭ ಮಾಡಿ ಅಂಗವಿಕಲರ ಬದುಕಿಗೆ ಬೆಳಗಾಗಿದ್ದಾರೆ. ಸಮಾಜಕ್ಕೆ ಮಾದರಿಯಾಗುವ ರೀತಿಯ ಸಾಧನೆ ಮಾಡಿದ ಪಂ. ಪುಟ್ಟರಾಜ ಗವಾಯಿಗಳಿಗೆ ಸರ್ಕಾರ ಕೂಡಲೇ ಮರಣೋತ್ತರ ಭಾರತರತ್ನ ಪ್ರಶಸ್ತಿ ನೀಡಬೇಕು, ಅಂದಾಗ ಮಾತ್ರ ಅಂಗವಿಕಲ ಸಮುದಾಯಕ್ಕೆ ಗೌರವ ನೀಡಿದಂತೆ ಆಗುತ್ತದೆ ಎಂದು ಹೇಳಿದರು.ವಿಕಲಚೇತನ ನೌಕರರ ಸಂಘದ ರಾಜ್ಯಾಧ್ಯಕ್ಷ ಬೀರಪ್ಪ ಅಂಡಗಿ ಚಿಲವಾಡಗಿ ಮಾತನಾಡಿ, ಅಂಗವಿಕಲ ನೌಕರರಿಗೆ ೭ನೇ ವೇತನ ಆಯೋಗದ ಪ್ರಕಾರ ಅವರ ಮೂಲ ವೇತನದ ಶೇ. ೬ರಷ್ಟು ಸಂಚಾರಿ ಭತ್ಯೆ, ಪೋಷಣಾ ಭತ್ಯೆ ಜಾರಿಗೆ ಮಾಡುವಂತೆ ಆಯೋಗ ವರದಿ ಕೊಟ್ಟು ೨ ತಿಂಗಳು ಕಳೆದರೂ ಸರ್ಕಾರ ಜಾರಿ ಮಾಡಿಲ್ಲ. ನಿರುದ್ಯೋಗಿ ಅಂಗವಿಕಲರ ಭತ್ಯೆ ಹೆಚ್ಚಳ ಮಾಡುವುದು, ಶಕ್ತಿ ಯೋಜನೆಯ ಅಡಿಯಲ್ಲಿ ಪುರುಷ ಅಂಗವಿಕಲರಿಗೆ ಉಚಿತ ಪ್ರಯಾಣ, ವಿಆರ್‌ಡಬ್ಲ್ಯೂ ಹಾಗೂ ಎಂಆರ್‌ಡಬ್ಲ್ಯೂಗಳನ್ನು ಆಯಂ ಮಾಡುವುದು, ಅಂಗವಿಕಲ ಮಕ್ಕಳ ವಿದ್ಯಾರ್ಥಿ ವೇತನ ಹೆಚ್ಚಳ ಮಾಡುವುದು ಸೇರಿದಂತೆ ಅನೇಕ ಬೇಡಿಕೆಗಳನ್ನು ಈಡೇರಿಸಿದಾಗ ಮಾತ್ರ ದಿನಾಚರಣೆಗೆ ಮಹತ್ವ ಬರುತ್ತದೆ ಎಂದು ಹೇಳಿದರು.
ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷ ಮಂಜುನಾಥ ಕುರಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.