
ಗದಗ: ಗದಗ ಮತಕ್ಷೇತ್ರದ ಜನತೆ ಬಹಳಷ್ಟು ಪುಣ್ಯವಂತರಾಗಿದ್ದು, ಜನಸೇವೆಯ ಉದ್ದೇಶದಿಂದ 11 ಸಾವಿರ ಮನೆಗಳನ್ನು ದತ್ತು ಪಡೆದು ಸೇವೆ ಮಾಡಲು ಎಚ್.ಕೆ. ಪಾಟೀಲ ಸೇವಾ ತಂಡ ಮುಂದಾಗಿರುವುದು ಸವಾಲಿನ ಕೆಲಸ. ಈ ಸವಾಲನ್ನು ತಂಡ ಸಮರ್ಥವಾಗಿ ನಿಭಾಯಿಸಲಿದೆ ಎಂಬ ವಿಶ್ವಾಸವಿದೆ ಎಂದು ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಪುತ್ರ ಅನಿಲ್ ಲಾಲ್ ಬಹದ್ದೂರ್ ಶಾಸ್ತ್ರಿ ಹೇಳಿದರು.
ಹಲವು ವರ್ಷಗಳ ಕಾಲ ಕರ್ನಾಟಕದ ಬೆಂಗಳೂರು, ಬೆಳಗಾವಿ ಹಾಗೂ ಹುಬ್ಬಳ್ಳಿಯಲ್ಲಿ ಕೆಲಸ ನಿರ್ವಹಿಸಿದ್ದೇನೆ. ಆದರೆ ಗದಗ ನಗರಕ್ಕೆ ಮೊದಲ ಬಾರಿಗೆ ಆಗಮಿಸಿರುವುದು ಸಂತಸ ತಂದಿದೆ ಎಂದರು.
ಶಾಸಕ ಡಾ. ಎಚ್.ಕೆ. ಪಾಟೀಲ ಅವರು ಸ್ಥಳೀಯ ನಾಯಕರ ಸಹಕಾರ ಪಡೆದು ಉತ್ತಮ ಜನಸೇವೆ ಮಾಡುತ್ತಿದ್ದಾರೆ. ಅವರ ಪುತ್ರ ಕೆ.ಎಚ್. ಪಾಟೀಲ ಕೂಡ ತಂದೆಯ ಹಾದಿಯಲ್ಲಿ ಸಾಗುತ್ತಾ ಜನಸೇವೆಯಲ್ಲಿ ತೊಡಗಿರುವುದು ಸಂತಸದ ಸಂಗತಿ. ಸೇವಾ ತಂಡದಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲ ಕ್ಯಾಪ್ಟನ್‌ಗಳ ಸೇವೆಯೂ ಮಹತ್ವದ್ದಾಗಿದೆ ಎಂದರು.ಎಚ್.ಕೆ. ಪಾಟೀಲ ಅವರು 73ನೇ ವಯಸ್ಸಿನಲ್ಲಿಯೂ ಜನಸೇವೆ ಮಾಡುವ ಹಂಬಲ ಹೊಂದಿದ್ದಾರೆ. ಮಹಾತ್ಮ ಗಾಂಧಿ ಹಾಗೂ ಸ್ವಾಮಿ ವಿವೇಕಾನಂದರ ಆದರ್ಶಗಳನ್ನು ರೂಢಿಸಿಕೊಂಡು ಸಮಾಜ ಸೇವೆ ಮಾಡುತ್ತಿದ್ದಾರೆ. ದಿ. ಕೆ.ಎಚ್. ಪಾಟೀಲರ ಜನಸೇವೆಯನ್ನು ಡಾ. ಎಚ್.ಕೆ. ಪಾಟೀಲ ಮುಂದುವರಿಸಿಕೊಂಡು ಹೋಗುತ್ತಿದ್ದಾರೆ. ಅವರ ಪುತ್ರ ಕೆ.ಎಚ್. ಪಾಟೀಲ ಅವರು ಅಜ್ಜ ಹಾಗೂ ತಂದೆಯ ಹಾದಿಯಲ್ಲಿ ಸಾಗುತ್ತಿರುವುದು ಸಂತಸ ತಂದಿದೆ ಎಂದರು.
ಸಮಾವೇಶದಲ್ಲಿ ಎಚ್.ಕೆ. ಪಾಟೀಲ ಸೇವಾ ತಂಡದ 23 ಸೇವೆಗಳ ಪಟ್ಟಿಯನ್ನು ವೆಬ್‌ಸೈಟ್ ಮೂಲಕ ಅನಾವರಣಗೊಳಿಸಲಾಯಿತು. ಶಾಸಕ ಡಾ. ಎಚ್.ಕೆ. ಪಾಟೀಲರು ಕ್ಯಾಪ್ಟನ್‌ಗಳಿಗೆ ಪ್ರತಿಜ್ಞಾವಿಧಿ ಬೋಧಿಸಿದರು. ಅನಿಲ್ ಲಾಲ್ ಬಹದ್ದೂರ್ ಶಾಸ್ತ್ರಿ ಅವರನ್ನು ನಂದಿ ವಿಗ್ರಹ ನೀಡಿ ಸೇವಾ ತಂಡದ ವತಿಯಿಂದ ಸನ್ಮಾನಿಸಲಾಯಿತು.