ಹಾಲಕ್ಕಿ ನೌಕರರ ಸಂಘಟನೆ ಏಳಿಗೆಯಾಗಲಿ: ನಿಶ್ಚಲಾನಂದನಾಥ ಶ್ರೀ

KannadaprabhaNewsNetwork |  
Published : Apr 28, 2025, 11:47 PM IST
ಫೋಟೋ : ೨೮ಕೆಎಂಟಿ_ಎಪಿಆರ್_ಕೆಪಿ೨  : ಹಾಲಕ್ಕಿ ನೌಕರರ ಸಂಘದ ಕಾರ್ಯಕ್ರಮದಲ್ಲಿ ಸ್ಮರಣ ಸಂಚಿಕೆ ಬಿಡುಗಡೆಗೊಳಿಸಿದರು. ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ, ಹೊನ್ನಪ್ಪ ಗೌಡ, ಹನುಮಂತ ಗೌಡ, ಗೋವಿಂದ ಗೌಡ, ಡಾ. ಶ್ರೀಧರ ಗೌಡ, ವಾಸುದೇವ ಗೌಡ, ಜಂಗಾ ಗೌಡ, ಜಯಶ್ರೀ ಗೌಡ ಇತರರು ಇದ್ದರು.   | Kannada Prabha

ಸಾರಾಂಶ

ಯಾವುದೇ ಸಾಧಕನಿಗೆ ಎಷ್ಟೇ ಗೌರವ ಸನ್ಮಾನಗಳು ಲಭಿಸಿದರೂ ತನ್ನದೇ ಸಮುದಾಯದಿಂದ ದೊರೆತ ಸನ್ಮಾನ ಅತಿಹೆಚ್ಚು ಸಂತೋಷ ತರುತ್ತದೆ

ಕುಮಟಾ: ಹಾಲಕ್ಕಿ ನೌಕರರ ಸಂಘ ಮತ್ತಷ್ಟು ಸಂಘಟನಾತ್ಮಕವಾಗಿ, ಆರ್ಥಿಕವಾಗಿ ಬಲಗೊಂಡು ಸಮುದಾಯದ ಏಳ್ಗೆಗೆ ಇನ್ನಷ್ಟು ರೀತಿಯಲ್ಲಿ ಶ್ರಮಿಸುವಂತಾಗಲಿ ಎಂದು ಆದಿಚುಂಚನಗಿರಿ ಮಿರ್ಜಾನ ಶಾಖಾಮಠದ ಬ್ರಹ್ಮಚಾರಿ ನಿಶ್ಚಲಾನಂದನಾಥ ಶ್ರೀ ನುಡಿದರು.ತಾಲೂಕಿನ ದಿವಗಿಯ ಹಾಲಕ್ಕಿ ಒಕ್ಕಲಿಗರ ಸಮುದಾಯ ಭವನದಲ್ಲಿ ಉತ್ತರ ಕನ್ನಡ ಜಿಲ್ಲಾ ಹಾಲಕ್ಕಿ ಒಕ್ಕಲು ನೌಕರರ ಸಂಘ ಹಮ್ಮಿಕೊಂಡ ಹಾಲಕ್ಕಿ ಸ್ಮರಣ ಸಂಚಿಕೆ-೩ ರ ಬಿಡುಗಡೆ ಹಾಗೂ ಸಂಘದ ಸದಸ್ಯತ್ವ ಹೊಂದಿದ ಸೇವಾ ನಿವೃತ್ತ ನೌಕರರಿಗೆ ಸನ್ಮಾನ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.

ಯಾವುದೇ ಸಾಧಕನಿಗೆ ಎಷ್ಟೇ ಗೌರವ ಸನ್ಮಾನಗಳು ಲಭಿಸಿದರೂ ತನ್ನದೇ ಸಮುದಾಯದಿಂದ ದೊರೆತ ಸನ್ಮಾನ ಅತಿಹೆಚ್ಚು ಸಂತೋಷ ತರುತ್ತದೆ ಎಂದರು.ಹಾಲಕ್ಕಿ ನೌಕರರು ತಾವಷ್ಟೇ ಬೆಳೆಯದೇ ತಾವು ಹುಟ್ಟಿದ ಸಮಾಜಕ್ಕೂ ಏನನ್ನಾದರೂ ಕೊಡಲೇ ಬೇಕು ಎನ್ನುವ ನಿಸ್ವಾರ್ಥ ಮನೋಭಾವ ಜಿಲ್ಲಾ ಹಾಲಕ್ಕಿ ನೌಕರರ ಸಂಘದಲ್ಲಿದೆ. ತನ್ನ ಸಮಾಜಮುಖಿ ಕಾರ್ಯ ಚಟುವಟಿಕೆಗಳಿಂದ ಸಮಾಜದೊಂದಿಗೆ ಬೆರೆತಿದೆ ಎಂದರು.

ಕಾರ್ಯಕ್ರಮ ಉದ್ಘಾಟಿಸಿದ ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಹೊನ್ನಪ್ಪ ಗೌಡ, ಭವಿಷ್ಯದಲ್ಲಿ ಹಾಲಕ್ಕಿ ನೌಕರರ ಸಂಘವು ಮತ್ತಷ್ಟು ಆರ್ಥಿಕವಾಗಿ ಸಶಕ್ತವಾಗಿ ಸಮುದಾಯಕ್ಕೆ ಇನ್ನಷ್ಟು ಸಹಾಯ ಮಾಡುವಂತಾಗಲಿ ಎಂದರು.

ಹಾಲಕ್ಕಿ ಸ್ಮರಣ ಸಂಚಿಕೆ-೩ ಬಿಡುಗಡೆ ಮಾಡಿದ ಸಂಘದ ತಾಲೂಕಾಧ್ಯಕ್ಷ ಗೋವಿಂದ ಗೌಡ, ಸಂಚಿಕೆಯು ಆಕರ್ಷಣೀಯವಾಗಿ ಮತ್ತು ಅರ್ಥಪೂರ್ಣವಾಗಿ ಮೂಡಿಬಂದಿದೆ. ಸಮಾಜದ ಪ್ರತಿಯೊಬ್ಬ ನೌಕರ ಸಂಘದ ಸದಸ್ಯರಾಗಿ ಸಂಘಟನೆ ಬಲಪಡಿಸಿ ಎಂದರು.

ಜಿಲ್ಲಾ ಹಾಲಕ್ಕಿ ಒಕ್ಕಲಿಗರ ಸಂಘದ ಅಧ್ಯಕ್ಷ ಹನುಮಂತ ಗೌಡ ಮಾತನಾಡಿ, ಬುಡಕಟ್ಟು ಸಂಸ್ಕೃತಿ ಹೊಂದಿರುವ ನಮ್ಮ ಹಾಲಕ್ಕಿ ಸಮಾಜ ಪರಿಶಿಷ್ಟ ಪಂಗಡಕ್ಕೆ ಸೇರಬೇಕು. ಈ ಕುರಿತು ನಮ್ಮ ಪ್ರಸ್ತಾವನೆಯು ಕೇಂದ್ರದಿಂದ ಸೂಕ್ತ ತಿದ್ದುಪಡಿಗೆ ರಾಜ್ಯಕ್ಕೆ ವಾಪಸ್‌ ಬಂದಿದ್ದು, ಪುನಃ ತಿದ್ದುಪಡಿಯೊಂದಿಗೆ ಕೇಂದ್ರಕ್ಕೆ ಸಲ್ಲಿಕೆಯಾಗಿದೆ. ಮುಂದಿನ ದಿನಗಳಲ್ಲಿ ನಮ್ಮ ಸಮಾಜ ಪರಿಶಿಷ್ಟ ಪಂಗಡಕ್ಕೆ ಸೇರ್ಪಡೆಯಾದರೆ ನೌಕರ ವರ್ಗದವರಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದರು.

ಪ್ರಾಚಾರ್ಯ ವಾಸುದೇವ ಗೌಡ, ಡಯಟ್ ಉಪನ್ಯಾಸಕ ನಾಗರಾಜ ಗೌಡ, ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಜಂಗಾ ಗೌಡ, ಕಾರವಾರ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಆರ್.ಪಿ.ಗೌಡ, ಸಂಘದ ಗೌರವಾಧ್ಯಕ್ಷ ಡಾ.ಶ್ರೀಧರ ಗೌಡ, ಅಂಕೋಲಾ ತಾಲೂಕು ಹಾಲಕ್ಕಿ ಒಕ್ಕಲಿಗರ ಸಂಘದ ಅಧ್ಯಕ್ಷ ಲಂಬೋದರ ಗೌಡ ಮಾತನಾಡಿದರು.

ಸನ್ಮಾನಿತರಾದ ನಿವೃತ್ತ ನೌಕರರಾದ ಕೆ.ಎಂ.ಗೌಡ, ನಾರಾಯಣ ಗೌಡ ಮತ್ತು ಜಯಶ್ರೀ ಗೌಡ ಅನಿಸಿಕೆ ವ್ಯಕ್ತಪಡಿಸಿದರು. ಕಾರ್ಯದರ್ಶಿ ಅರುಣ ಗೌಡ ಪ್ರಾಸ್ತಾವಿಕ ಮಾತನಾಡಿದರು. ಶಿಕ್ಷಕ ಗಣಪತಿ ಗೌಡ ನಿರೂಪಿಸಿದರು. ಕೃಷ್ಣ ಗೌಡ ವಂದಿಸಿದರು.

PREV

Recommended Stories

ಗ್ರಾಪಂ ವ್ಯಾಪ್ತಿ ಎಲ್ಲಾ ಆಸ್ತಿ ತೆರಿಗೆಗೆ ನಿಯಮ ಪ್ರಕಟ
ತರಬೇತಿ ನೀಡಿದಾಕ್ಷಣ ಯುವನಿಧಿ ನಿಲ್ಲಲ್ಲ : ಸಿಎಂ