ಕನ್ನಡಪ್ರಭ ವಾರ್ತೆ ಹಳೇಬೀಡು
ಹೋಬಳಿಯ ಪ್ರಸ್ತುತ ಶಿವನೇನಳ್ಳಿ ಕೆರೆ ಪುನಶ್ಚೇತನಕ್ಕೆ ವೀರೇಂದ್ರ ಹೆಗಡೆಯವರು ಧರ್ಮಸ್ಥಳ ಕ್ಷೇತ್ರದಿಂದ ೧೩ ಲಕ್ಷ ರುಪಾಯಿಗಳ ಸಹಾಯ ನೀಡಿರುತ್ತಾರೆ ಎಂದು ಬೇಲೂರು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಅಧಿಕಾರಿ ಮಂಜುಳಾ ತಿಳಿಸಿದರು.ಕೆರೆಯ ಜೀರ್ಣೋದ್ಧಾರ ಕಾಮಗಾರಿಗೆ ಚಾಲನೆ ನೀಡಿದ ನಂತರ ಮಾಧ್ಯಮದೊಂದಿಗೆ ಮಾತನಾಡುತ್ತ, ಶಿವನೇನಳ್ಳಿ ಗ್ರಾಮದ ಸರ್ಕಾರಿ ಕೆರೆಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಧರ್ಮಸ್ಥಳ ಸಂಸ್ಥೆಯಿಂದ ಪುನಶ್ಚೇತನ ಮಾಡುತ್ತಿದ್ದು, ಬೇಲೂರು ತಾಲೂಕಿನಲ್ಲಿ ೮ ಕೆರೆಗಳ ಅಭಿವೃದ್ಧಿ ಮಾಡಿರುತ್ತಾರೆ. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸಂಸ್ಥೆಯಿಂದ ೨೦೧೬ರಿಂದ ರಾಜ್ಯಾದ್ಯಂತ ಕೆರೆ ಪುನಶ್ಚೇತನ ಕಾರ್ಯಕ್ರಮ ನಡೆದಿದೆ. ರಾಜ್ಯದ ಬಯಲು ಸೀಮೆಯ ಹಳ್ಳಿಗಳಿಂದ ಅನೇಕ ರೈತ ಕುಟುಂಬಗಳು ಧರ್ಮಸ್ಥಳಕ್ಕೆ ಬಂದು ಪೂಜ್ಯರಲ್ಲಿ ನೀರಿನ ಸಮಸ್ಯೆಯ ಮತ್ತು ಬರಗಾಲದ ಬಗ್ಗೆ ಅಳಲನ್ನು ತೊಡಿಕೊಂಡಿರುತ್ತಾರೆ. ಅದರಂತೆ ಪೂಜ್ಯರು ಈ ಬಗ್ಗೆ ಯೋಜನೆಯ ಕಾರ್ಯಕರ್ತರ ಮೂಲಕ ಅಧ್ಯಯನ ನಡೆಸಿ ಕೆರೆಗಳ ಸದುಪಯೋಗ ಪಡೆದು ರೈತರು ಆದಾಯ ಹೆಚ್ಚಿಸಿಕೊಂಡು ಸ್ವಾವಲಂಬಿ ಜೀವನ ನಡೆಸುವಂತಾಗಲು ಹಾಗೂ ಜನರಲ್ಲಿ ಜನಜಾಗೃತಿಯಂತೆ ಜಲ ಸಮೃದ್ಧಿ ಆಗಲು ರಾಜ್ಯಾದ್ಯಂತ ಕೆರೆಗಳನ್ನು ಹೂಳೆತ್ತಿ ಅಭಿವೃಧ್ಧಿ ಮಾಡಲು ಮಾರ್ಗದರ್ಶನ ನೀಡಿರುತ್ತಾರೆ. ಊರಿನ ಕೆರೆಯನ್ನು ದುರಸ್ತಿ ಮಾಡಿ ನೀರು ತುಂಬಿಸಿದರೆ ಊರಿನಲ್ಲಿರುವ ಬಾವಿ, ಕೊಳವೆ ಬಾವಿಗಳು ಸಮೃಧ್ಧಗೊಂಡು ಮನೆ-ಮನೆಯಲ್ಲಿ ನೀರಿನ ಸಮಸ್ಯೆ ಪರಿಹಾರವಾಗುತ್ತದೆ. ಇದಕ್ಕಾಗಿ ಗ್ರಾಮೀಣ ಜನರ ನೀರಿನ ಬವಣೆ ನೀಗಿಸಲೆಂದೇ ಹೇಮಾವತಿ ಹೆಗ್ಗಡೆಯವರ ಕನಸಿನಂತೆ ಮೂಡಿಬಂದ ಕಾರ್ಯಕ್ರಮವೇ ನಮ್ಮೂರು-ನಮ್ಮ ಕೆರೆ ಎಂದು ತಿಳಿಸಿದರು.
ಹಾಸನ ಜಿಲ್ಲಾ ಜನಜಾಗೃತಿ ಉಪಾಧ್ಯಕ್ಷ ಡಿ.ಎಲ್.ಸೋಮಶೇಖರ್ ಮಾತನಾಡುತ್ತ, ಸಂಸ್ಥೆಯಿಂದ ಹಿಟಾಚಿಗೆ ತಗಲುವ ವೆಚ್ಚವನ್ನು ಸಂಸ್ಥೆ ಮಾಡುತ್ತಿದ್ದು, ರೈತರು ಟ್ರ್ಯಾಕ್ಟರ್‌ಗಳನ್ನು ಮಾಡಿಕೊಂಡು ಸಾಗಾಟ ಮಾಡುವುದು, ಇದರಿಂದ ರೈತರಿಗೆ ಹೆಚ್ಚು ಉಪಯೋಗವಾಗುತ್ತಿದ್ದು ಫಲವತ್ತಾದ ಹೂಳು ರೈತರಿಗೆ ದೊರೆಯುತ್ತಿದೆ. ಆದುದರಿಂದ ಇದರ ಸದುಪಯೋಗವನ್ನು ಮಾಡಿಕೊಳ್ಳಿ ಎಂದು ತಿಳಿಸಿದರು.ಬೇಲೂರು ತಾಲೂಕು ಪ್ರತ್ರಕರ್ತರ ಸಂಘದ ಅಧ್ಯಕ್ಷ ಎಚ್.ಎ.ರಘುನಾಥ್ ಮಾತನಾಡುತ್ತ ಭೂಮಿಯ ಪ್ರಕೃತಿಯನ್ನ ಮನುಷ್ಯ ಹಾಳು ಮಾಡಿ ತನ್ನ ಸ್ವಾರ್ಥಕ್ಕೆ ಬಳಸಿಕೊಂಡು ಒಳ್ಳೆಯ ಗಾಳಿ, ಬೆಳಕು, ನೀರು ಇಲ್ಲದೆ ಕಷ್ಟಕರ ಸಂಧರ್ಭದಲ್ಲಿ ಕೆರೆ ನೀರನ್ನು ಉಳಿಸಲು ಕೆರೆಯ ಹೂಳೆತ್ತಿವ ಕೆಲಸವನ್ನು ಶ್ರೀಕ್ಷೇತ್ರ ಸಂಸ್ಥೆ ಮಾಡುತ್ತಿರುವುದು ಸಂತೋಷ ವಿಚಾರ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ವಸಂತಕುಮಾರಿ, ಉಪಾಧ್ಯಕ್ಷ ಸ್ವಾಮಿ, ಕೆರೆ ಸಮಿತಿಯ ಅಧ್ಯಕ್ಷರಾದ ಹುಲಿಯಪ್ಪ, ಕೃಷಿ ಅಧಿಕಾರಿ ಗೋವಿಂದಪ್ಪ ವಲಯದ ಮೇಲ್ವಿಚಾರಕರಾದ ವಿಜಯಶ್ರೀ, ಬಸವಯ್ಯ, ದೇವರಾಜ್, ನಿಂಗಪ್ಪ, ಬಸವರಾಜ್, ಸೇವಾ ಪ್ರತಿನಿಧಿ ಶಕುಂತಲಾ ರೈತರು ಭಾಗವಹಿಸಿದ್ದರು.