ವಿಜ್ಞಾನ, ತಂತ್ರಜ್ಞಾನದ ಆವಿಷ್ಕಾರಗಳು ಸದ್ಭಳಕೆಯಾಗಲಿ: ಬಿಇಒ ಕೃಷ್ಣಪ್ಪ

KannadaprabhaNewsNetwork |  
Published : Dec 18, 2025, 02:45 AM IST
ವಿಜ್ಞಾನ ಮತ್ತು ತಂತ್ರಜ್ಞಾನದ ಆವಿಷ್ಕಾರಗಳು ಸದ್ಭಳಕೆಯಾಗಬೇಕು, ವಿನಾಶಕ್ಕಲ್ಲ-ಬಿಇಒ ಕೃಷ್ಣಪ್ಪ | Kannada Prabha

ಸಾರಾಂಶ

ವಿಜ್ಞಾನ ತಂತ್ರಜ್ಞಾನ ಬೆಳವಣಿಗೆಗೆ ಅಭಿವೃದ್ಧಿಗೆ ಪೂರಕವಾಗಿರಬೇಕೆ ವಿನಃ ವಿನಾಶಕ್ಕೆ ನಾಂದಿ ಆಗಬಾರದು ಎಂದು ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಹೇಳಿದರು.

ಕನ್ನಡಪ್ರಭವಾರ್ತೆ ಸೋಮವಾರಪೇಟೆ

ವಿಜ್ಞಾನ ಮತ್ತು ತಂತ್ರಜ್ಞಾನದ ಬೆಳವಣಿಗೆ ಅಭಿವೃದ್ಧಿಗೆ ಪೂರಕವಾಗಿರಬೇಕೆ ವಿನಃ ವಿನಾಶಕ್ಕೆ ನಾಂದಿ ಆಗಬಾರದು ಎಂದು ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಕೃಷ್ಣಪ್ಪ ಅಭಿಪ್ರಾಯಪಟ್ಟರು.

ಕೊಡಗು ಜಿಲ್ಲಾ ಶಾಲಾ ಶಿಕ್ಷಣ ಇಲಾಖೆಯ ವತಿಯಿಂದ ಸಮಗ್ರ ಶಿಕ್ಷಣ ಕರ್ನಾಟಕ ಯೋಜನೆಯಡಿ 2025-26 ನೇ ಸಾಲಿನ ರಾಷ್ಟ್ರೀಯ ಆವಿಷ್ಕಾರ ಸಪ್ತಾಹ ಕಾರ್ಯಕ್ರಮದ ಅಂಗವಾಗಿ ತಾಲೂಕಿನ ಐಗೂರು ಸರಕಾರಿ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ವಿಜ್ಞಾನ ವಸ್ತು ಪ್ರದರ್ಶನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಪ್ರಸಕ್ತ ವಿದ್ಯಮಾನದಲ್ಲಿ ವಿಶ್ವಾದ್ಯಾಂತ ವಿಜ್ಞಾನ ಮತ್ತು ತಂತ್ರಜ್ಞಾನದ ಆವಿಷ್ಕಾರಗಳು ಯುದ್ಧಕ್ಕೆ ಬಳಕೆಯಾಗುತ್ತಿದ್ದು, ಅಪಾರ ಪ್ರಮಾಣದಲ್ಲಿ ಜೀವಹಾನಿ ಹಾಗೂ ಆಸ್ತಿ ಪಾಸ್ತಿ ನಷ್ಟವಾಗುತ್ತಿದೆ. 1945 ರಲ್ಲಿ ಜಪಾನ್‌ನ ಹಿರೋಷಿಮಾ ಮತ್ತು ನಾಗಾಸಾಕಿ ಪ್ರದೇಶಗಳ ಮೇಲೆ ಅಣುಬಾಂಬ್‌ ಪ್ರಯೋಗದ ನಂತರ ಈವತ್ತಿನವರೆಗೂ ಅಲ್ಲಿನ ನಾಗರಿಕರನ್ನು ಬಾಧಿಸುತ್ತಿದೆ. ದಕ್ಷಿಣ ಕನ್ನಡದಲ್ಲಿ ಎಂಡೋಸಲ್ಫಾನ್ ಸಿಂಪಡಿಸಿದ ನಂತರ ಅಂಗವಿಕಲತೆಯಿಂದ ತೊಂದರೆಗೊಳಗಾದವರು ಇಂದಿಗೂ ಪರಿತಪಿಸುತ್ತಿದ್ದಾರೆ ಎಂದು ಹೇಳಿದರು.

ಕಲಿಕೆ ಮುಖ್ಯ:

ವಿದ್ಯಾರ್ಥಿಗಳಿಗೆ ವಿಜ್ಞಾನದ ಪ್ರಾಯೋಗಿಕ ಕಲಿಕೆ ಮುಖ್ಯ. ಶಿಕ್ಷಕರು ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವ ಬೆಳೆಸುವ ಮೂಲಕ ಸಮಾಜದಲ್ಲಿ ಬೇರೂರಿರುವ ಮೌಢ್ಯ, ಕಂದಾಚಾರದಂತಹ ಸಾಮಾಜಿಕ ಪಿಡುಗುಗಳ ವಿರುದ್ಧ ಧ್ವನಿ ಎತ್ತಿ ಸಮಾಜದಲ್ಲಿ ವೈಜ್ಞಾನಿಕತೆ ಬೆಳೆಸುವಲ್ಲಿ ಪ್ರಮುಖ ಪಾತ್ರ ವಹಿಸಬೇಕು ಎಂದರು. ಮಕ್ಕಳ ವಿಜ್ಞಾನ ಪ್ರದರ್ಶನಗಳು ಕೇವಲ ಯೋಜನೆಗಳ ಪ್ರದರ್ಶನಗಳಲ್ಲ. ಅವುಗಳು ಹೊಸ ಹೊಸ ನಾವೀನ್ಯತೆ, ಪ್ರಯೋಗಶೀಲತೆ ಮತ್ತು ನೈಜ-ಪ್ರಪಂಚದ ಸನ್ನಿವೇಶಗಳಲ್ಲಿ ವೈಜ್ಞಾನಿಕ ತತ್ವಗಳ ಅನ್ವಯವನ್ನು ಪ್ರೋತ್ಸಾಹಿಸುವ ವೇದಿಕೆಗಳಾಗಿ ರೂಪುಗೊಂಡಿವೆ ಎಂದರು.

ರಾಷ್ಟ್ರೀಯ ಆವಿಷ್ಕಾರದ ಮುಖ್ಯ ಉದ್ದೇಶ ಕುರಿತು ಮಾಹಿತಿ ನೀಡಿದ, ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ಜಿಲ್ಲಾ ಸಮಿತಿಯ ನಿಕಟ ಪೂರ್ವ ಅಧ್ಯಕ್ಷ ಟಿ.ಜಿ.ಪ್ರೇಮಕುಮಾರ್ ಮಾತನಾಡಿ, ವಿಜ್ಞಾನ ತಂತ್ರಜ್ಞಾನ ಬಳಸಿ ಕಲಿಕೋಪಕರಣ ಬಳಸಿದರೆ ಮಕ್ಕಳು ಹೆಚ್ಚು ಆಸಕ್ತಿ ವಹಿಸಿ ಓದುತ್ತಾರೆ. ಅವರಲ್ಲಿ ಸೃಜನಾತ್ಮಕ ಚಿಂತನಶೀಲ ವೈಜ್ಞಾನಿಕ ಮನೋಭಾವ ಬೆಳೆಸಲು ಇಂತಹ ವಸ್ತು ಪ್ರದರ್ಶನಗಳು ಸಹಕಾರಿ ಎಂದರು.ಈ ವಸ್ತು ಪ್ರದರ್ಶನದಲ್ಲಿ ಶಿಕ್ಷಕರ ಮಾರ್ಗದರ್ಶನದಲ್ಲಿ ಮಕ್ಕಳು ಉತ್ತಮ ವಿಜ್ಞಾನ ಮಾದರಿ ಹಾಗೂ ಪ್ರಾತ್ಯಕ್ಷಿಕೆಗಳನ್ನು ಮಾಡಿರುವುದು ಪ್ರಶಂಸನೀಯ ಎಂದರು.ಜಿಲ್ಲಾ ಪತ್ರಕರ್ತರ ಸಂಘದ ಸ್ಥಾಪಕ ಅಧ್ಯಕ್ಷ ಎಸ್.ಎ.ಮುರಳೀಧರ್ ಮಾತನಾಡಿ, ವಿಜ್ಞಾನ ವಿಷಯವು ನಮ್ಮ ದಿನನಿತ್ಯದ ಅನುಭವಗಳನ್ನು ಪರೀಕ್ಷಿಸಿ ವೀಕ್ಷಿಸುವ ಅವಕಾಶ ನೀಡುತ್ತದೆ. ಇದಕ್ಕೆ ಪೂರಕವಾಗಿ ಪರಿಸರದಲ್ಲಿ ಇರುವ ಸಂಬಂಧಗಳಿಗೆ ಮತ್ತು ಚಟುವಟಿಕೆಗಳಿಗೆ ಯೋಜನಾ ಕಾರ್ಯ ರೂಪವಾಗಿ ಮಕ್ಕಳ ಮುಂದೆ ಪ್ರದರ್ಶಿಸಿ ಅನ್ವೇಷಣೆಯ ಕಲಿಕೆಗೆ ಜ್ಞಾನ ಕಟ್ಟಿಕೊಟ್ಟರೆ ಅವರು ಭವಿಷ್ಯದಲ್ಲಿ ವಿಜ್ಞಾನ ಕ್ಷೇತ್ರದಲ್ಲಿ ಹೆಚ್ಚಿನ ಸಾಧನೆ ಮಾಡಲು ಸಾಧ್ಯ ಎಂದರು.

ವೈಜ್ಞಾನಿಕ ಅನ್ವೇಷಣೆಗೆ ಸಹಕಾರಿತಾಲೂಕು ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಕೆ.ಆರ್.ರತ್ನಕುಮಾರ್ ಮಾತನಾಡಿ, ಇಂತಹ ವಿಜ್ಞಾನ ಪ್ರದರ್ಶನಗಳು ವಿದ್ಯಾರ್ಥಿಗಳಲ್ಲಿ ಮೂಲ ವಿಜ್ಞಾನ ಕಲಿಕೆಗೆ ಪ್ರೇರಣೆ ನೀಡುವುದರೊಂದಿಗೆ ಅವರಿಗೆ ಭವಿಷ್ಯದಲ್ಲಿ ವೈಜ್ಞಾನಿಕ ಅನ್ವೇಷಣೆ ಕೈಗೊಳ್ಳಲು ಸಹಕಾರಿಯಾಗಿವೆ ಎಂದರು.ಪ್ರಾಸ್ತಾವಿಕವಾಗಿ ಮಾತನಾಡಿದ ವಿಜ್ಞಾನ ಶಿಕ್ಷಕಿ ಎಸ್ ಎಸ್ ರಂಜಿನಿ, ಈ ವಸ್ತು ಪ್ರದರ್ಶನದಲ್ಲಿ ಮಕ್ಕಳೇ ವಿವಿಧ ಯೋಜನಾ ಮಾದರಿಗಳನ್ನು ತಯಾರಿಸಿ ಪ್ರದರ್ಶನಕ್ಕಿಟ್ಟಿದ್ದು, ಇದು ಮಕ್ಕಳಲ್ಲಿ ವಿಜ್ಞಾನ ಕಲಿಕೆಗೆ ಸಹಕಾರಿಯಾಗಿದೆ ಎಂದರು. ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷ ಬಿ.ಎನ್.ವಸಂತ್ ಅಧ್ಯಕ್ಷತೆ ವಹಿಸಿದ್ದರು. ಸದಸ್ಯ ಮಂಜುನಾಥ್, ಶಾಲಾ ಮುಖ್ಯ ಶಿಕ್ಷಕ ಎಂ.ಎಂ. ಯಶವಂತ್ ಕುಮಾರ್, ಕಾಜೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಎಂ.ಟಿ.ಸರಳಕುಮಾರಿ, ಕಿರಗಂದೂರು ಸರಕಾರಿ ಪ್ರೌಢಶಾಲೆಯ ಪ್ರಭಾರ ಮುಖ್ಯ ಶಿಕ್ಷಕಿ ರಶ್ಮಿ ಸೇರಿದಂತೆ ಶಿಕ್ಷಕರು, ಪೋಷಕರು ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ಶಿಕ್ಷಕರಾದ ಜಿ. ಮಂಜುನಾಥ್ ಮತ್ತು ಎಚ್.ಬಿ.ಕೃಷ್ಣಪ್ಪ ಕಾರ್ಯಕ್ರಮ ನಿರ್ವಹಿಸಿದರು.

ಗಮನ ಸೆಳೆದ ವಿಜ್ಞಾನ ವಸ್ತು ಪ್ರದರ್ಶನ:

ವಸ್ತು ಪ್ರದರ್ಶನದಲ್ಲಿ ವಿಜ್ಞಾನಕ್ಕೆ ಸಂಬಂಧಿಸಿದ ಪರಮಾಣುಗಳ ಮಾದರಿಗಳು, ಡಿಎನ್‌ಎ ರಚನೆ, ಶಬ್ದದ ಗುಣಗಳು, ಮಾನವನ ಹೃದಯ, ನ್ಯೂಟನ್ ನಿಯಮಗಳು, ಆಕಾಶಕಾಯಗಳ ಚಲನೆ, ವಿದ್ಯುತ್ಕಾಂತೀಯ ಪ್ರೇರಣೆ, ರೋಧಕಗಳ ಜೋಡಣೆ, ಬಹು ಪ್ರತಿಬಿಂಬಗಳು, ಕೆಲಿಡೋಸ್ಕೋಪ್, ವಿವಿಧ ರಾಸಾಯನಿಕ ಕ್ರಿಯೆಗಳು, ಸೂಕ್ಷ್ಮದರ್ಶಕ ಮೂಲಕ ವೀಕ್ಷಣೆ, ಆಹಾರ ಸರಪಳಿ, ಜಲಚಕ್ರ, ಟೆಲಿಸ್ಕೋಪ್, ವಿವಿಧ ವಸ್ತುಗಳಲ್ಲಿ ವಾಹಕತೆ ಸೇರಿದಂತೆ ಹಲವು ಪ್ರಾತ್ಯಕ್ಷಿಕೆಗಳನ್ನು ವಿದ್ಯಾರ್ಥಿಗಳು ವಿವರಣೆ ಸಹಿತ ಪ್ರದರ್ಶಿಸಿದರು.ಕ್ಲಸ್ಟರ್‌ನ ಕಾಜೂರು, ಬೇಳೂರು, ಯಡವಾರೆ, ಹೊಸತೋಟ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಕಿರಗಂದೂರು ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ವಸ್ತು ಪ್ರದರ್ಶನವನ್ನು ವೀಕ್ಷಿಸಿ ಮಾಹಿತಿ ಪಡೆದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಚಂದ್ರಮೌಳೇಶ್ವರ ಸನ್ನಿಧಾನದಲ್ಲಿ ಪ್ರದೋಷ ಸಪ್ತರ್ಷಿ ಪೂಜೆ
ಪರಮೇಶ್ವರ್ ಸಿಎಂ ಆಗಲಿ: ಮಠಾಧೀಶರ ಒತ್ತಾಯ