ಭದ್ರಾವತಿ: ಕರ್ನಾಟಕ ರಾಜ್ಯ ಮೋಟಾರು ಸಾರಿಗೆ ಹಾಗೂ ಇತರೆ ಸಂಬಂಧಿತ ಕಾರ್ಮಿಕರ ಸಾಮಾಜಿಕ ಭದ್ರತೆ ಮತ್ತು ಕ್ಷೇಮಾಭಿವೃದ್ಧಿ ಮಂಡಳಿ ವತಿಯಿಂದ ವಿವಿಧ ಸೌಲಭ್ಯಗಳನ್ನು ಸರ್ಕಾರ ದ್ವಿಚಕ್ರ ವಾಹನ ದುರಸ್ತಿಗಾರರಿಗೂ ಕಲ್ಪಿಸಿಕೊಟ್ಟಿದ್ದು, ಇದರ ಸದುಪಯೋಗ ಪಡೆದುಕೊಳ್ಳುವಂತೆ ನಗರಸಭೆ ಹಿರಿಯ ಸದಸ್ಯ ಬಿ.ಕೆ ಮೋಹನ್ ಹೇಳಿದರು.
ನಗರದಲ್ಲಿ ದ್ವಿಚಕ್ರ ವಾಹನ ದುರಸ್ತಿಗಾರರು ಬಹಳ ಸಂಕಷ್ಟದಲ್ಲಿ ಜೀವನ ಸಾಗಿಸುತ್ತಿದ್ದು, ಇವರಿಗೂ ಉತ್ತಮ ಜೀವನ ನಿರ್ವಹಣೆಗೆ ಅಗತ್ಯವಿರುವ ಸೌಲಭ್ಯಗಳನ್ನು ಕಲ್ಪಿಸಿಕೊಡಬೇಕಾಗಿದೆ. ಸರ್ಕಾರದ ವಿವಿಧ ಸೌಲಭ್ಯಗಳು ಇವರಿಗೂ ತಲುಪುವಂತಾಗಬೇಕು. ಈ ನಿಟ್ಟಿನಲ್ಲಿ ಸಂಘಟನೆ ನೇತೃತ್ವವಹಿಸಿರುವವರು ಗಮನ ಹರಿಸಬೇಕೆಂದರು.
ಸರ್ಕಾರದ ೫ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ತಾಲೂಕು ಅಧ್ಯಕ್ಷ ಎಸ್. ಮಣಿಶೇಖರ್ ಪಾಲ್ಗೊಂಡು ಮಾತನಾಡಿ, ಗ್ಯಾರಂಟಿ ಯೋಜನೆಯಡಿ ಅರ್ಹ ಕಾರ್ಮಿಕರು ಪಡೆದುಕೊಳ್ಳಬಹುದಾದ ಯೋಜನೆಗಳ ಕುರಿತು ಮಾಹಿತಿ ನೀಡಿದರು.ಸಮಾರಂಭದಲ್ಲಿ ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಬಿ.ಕೆ ಶಿವಕುಮಾರ್, ಮೆಸ್ಕಾಂ ಸಲಹಾ ಸಮಿತಿ ತಾಲೂಕು ಅಧ್ಯಕ್ಷ ಬಸವಂತಪ್ಪ, ಅಖಲ ಕರ್ನಾಟಕ ಕಟ್ಟಡ ಹಾಗೂ ಅಸಂಘಟಿತ ಕಾರ್ಮಿಕರ ಒಕ್ಕೂಟದ ಸುಂದರ್ ಬಾಬು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. ಸಂಘದ ಅಧ್ಯಕ್ಷ ಬಾಬು ಅಧ್ಯಕ್ಷತೆ ವಹಿಸಿದ್ದರು. ಸಂಘದ ಪದಾಧಿಕಾರಿಗಳು, ಸದಸ್ಯರು ಪಾಲ್ಗೊಂಡಿದ್ದರು. ಸಮಾರಂಭದಲ್ಲಿ ದ್ವಿಚಕ್ರ ವಾಹನ ಬಿಡಿಭಾಗಗಳ ಪ್ರದರ್ಶನ ಮತ್ತು ಮಾರಾಟ ಆಯೋಜಿಸಲಾಗಿತ್ತು.