ಸ್ವಾತಂತ್ರ್ಯ ಹೋರಾಟಗಾರ ನೆನಪು ಶಾಶ್ವತವಾಗಿರಲಿ

KannadaprabhaNewsNetwork |  
Published : Jul 23, 2025, 01:48 AM IST
ಫೋಟೊಪೈಲ್-೨೨ಎಸ್ಡಿಪಿ೨- ಸಿದ್ದಾಪುರದಲ್ಲಿ ನಾಟಕ ಪ್ರದರ್ಶನದ ಸಭಾ ಕಾರ್ಯಕ್ರಮದಲ್ಲಿ ರತ್ನಾಕರ ನಾಯ್ಕ ಮಾತನಾಡಿದರು. | Kannada Prabha

ಸಾರಾಂಶ

ತಂತ್ರಜ್ಞಾನದ ಸೆಳವಿಗೆ ಸಿಕ್ಕ ಕಾಲಘಟ್ಟದಲ್ಲಿ ನಾವಿದ್ದೇವೆ. ತಕ್ಷಣದ ಫಲಿತಾಂಶ ಬಯಸುವ ಮನಸ್ಥಿತಿ ವ್ಯವಧಾನ ಮರೆಸಿಬಿಟ್ಟಿದೆ.

ಸಿದ್ದಾಪುರ: ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿ, ಆಸ್ತಿ,ಮನೆಗಳನ್ನು ಕಳೆದುಕೊಂಡ ಹೋರಾಟಗಾರರು ನಮ್ಮ ತಾಲೂಕಿನಲ್ಲಿ ಅಸಂಖ್ಯಾತರಿದ್ದಾರೆ. ಬ್ರಿಟಿಷರಿಂದ ಬಂಧಿತರಾದ ತಾಲೂಕಿನ ಸ್ವಾತಂತ್ರ್ಯ ಸೇನಾನಿ ಬೇಡ್ಕಣಿಯ ದಿ. ಚೌಡಾ ನಾಯ್ಕರ ಮುಂಚೂಣಿಯಲ್ಲಿದ್ದವರು, ಅವರ ಜೀವನಾಧಾರಿತ ನಾಟಕ ಪ್ರದರ್ಶನಗೊಳ್ಳುತ್ತಿರುವುದು ಹೆಮ್ಮೆಯ ಸಂಗತಿ. ಈ ನಾಟಕ ಸ್ವಾಭಿಮಾನ, ಸ್ವಾತಂತ್ರ್ಯದ ಪ್ರತೀಕ ಎಂದು ಪಪೂ ಕಾಲೇಜಿನ ಉಪನ್ಯಾಸಕ ರತ್ನಾಕರ ನಾಯ್ಕ ಹೇಳಿದರು.

ಅವರು ಸ್ಥಳೀಯ ಶಂಕರಮಠದ ರಂಗಸೌಗಂಧ ತಂಡ ಸಿದ್ಧಪಡಿಸಿದ ಐತಿಹಾಸಿಕ ನಾಟಕ ಕ್ರಾಂತಿಯ ಕಿಡಿ ಪ್ರದರ್ಶನದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿ, ತಂತ್ರಜ್ಞಾನದ ಸೆಳವಿಗೆ ಸಿಕ್ಕ ಕಾಲಘಟ್ಟದಲ್ಲಿ ನಾವಿದ್ದೇವೆ. ತಕ್ಷಣದ ಫಲಿತಾಂಶ ಬಯಸುವ ಮನಸ್ಥಿತಿ ವ್ಯವಧಾನ ಮರೆಸಿಬಿಟ್ಟಿದೆ. ಒತ್ತಡ ಬೇರೆ ಬೇರೆ ಆಘಾತಗಳ ರೂಪದಲ್ಲಿ ದಾಂಗುಡಿ ಇಡುತ್ತಿದೆ. ಒತ್ತಡದ ಬದುಕಿನಿಂದ ಹೊರಬರಲು ಸಂಗೀತ, ಸಾಹಿತ್ಯ,ಕಲೆ,ರಂಗಭೂಮಿಯ ಸಹಭಾಗಿತ್ವ ಅತ್ಯಗತ್ಯ ಎಂದರು.

ನಾಟಕ ರಚನಕಾರ ಶ್ರೀಪಾದ ಹೆಗಡೆ ಮಗೇಗಾರ ಮಾತನಾಡಿ, ಎಲ್ಲ ಜಾತಿ, ವರ್ಗದವರು ಸಕ್ರೀಯವಾಗಿ ತೊಡಗಿಕೊಂಡಿದ್ದ ಹೋರಾಟಗಾರರು ನಮ್ಮ ತಾಲೂಕಿನ ಸ್ವಾತಂತ್ರ್ಯ ಚರಿತ್ರೆಯಲ್ಲಿ ಅಜರಾಮರರಾಗಿ ಉಳಿದಿದ್ದಾರೆ. ಸ್ವಾತಂತ್ರ್ಯವನ್ನು ಉಸಿರಾಗಿಸಿಕೊಂಡ ದಿ.ಚೌಡಾ ನಾಯ್ಕರು ಆ ಕಾಲದ ಮೆಟ್ರಿಕ್ಯಲೇಷನ್ ಮುಗಿಸಿ, ಉತ್ತಮ ವೃತ್ತಿ ಹೊಂದಬಹುದಾಗಿದ್ದರೂ ಹೋರಾಟಕ್ಕೆ ಧುಮುಕಿ, ಅಪಾರ ಸಂಪತ್ತಿನ ಆಸ್ತಿ, ಮನೆ ಕಳೆದುಕೊಂಡ ನಿಜ ಸೇನಾನಿ. ನಾವು ಯಾವ ಕಾರಣಕ್ಕೂ ಸ್ವಾತಂತ್ರ್ಯ ಹೋರಾಟಗಾರರನ್ನು ಮರೆಯಬಾರದು. ಅವರ ನೆನಪಿನಲ್ಲಿ ನಮ್ಮಲ್ಲಿ ಸ್ವಾತಂತ್ರ್ಯ ಭವನ ನಿರ್ಮಾಣವಾಗಬೇಕು ಎಂದರು.

ದಿ.ಚೌಡಾ ನಾಯ್ಕರ ವಂಶಸ್ಥ, ಬೇಡ್ಕಣಿ ಸಹಿಪ್ರಾ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಮಹಾಬಲೇಶ್ವರ ನಾಯ್ಕ ಮಾತನಾಡಿ, ನನ್ನ ತಾತ ದೇಶದ ಸ್ವಾತಂತ್ರ್ಯಕ್ಕಾಗಿ ಸಕಲವನ್ನೂ ಕಳೆದುಕೊಂಡವರು. ಇಂಥ ಅನೇಕ ಹೋರಾಟಗಾರರು ನಮ್ಮಲ್ಲಿದ್ದರು ಎನ್ನುವದು ಹೆಮ್ಮೆಯ ಸಂಗತಿ. ಇತಿಹಾಸದಿಂದ ಅನೇಕ ವಿಷಯ ತಿಳಿಯಲು ಸಾಧ್ಯ. ಇಂಥ ನಾಟಕಗಳು ಇತಿಹಾಸ ನಿರೂಪಿಸುತ್ತವೆ ಎಂದರು.

ರಂಗಸೌಗಂಧ ತಂಡದ ಮುಖ್ಯಸ್ಥ, ನಾಟಕ ನಿರ್ದೇಶಕ ಗಣಪತಿ ಹೆಗಡೆ ಹುಲಿಮನೆ ಸ್ವಾಗತಿಸಿದರು. ಶ್ರೀಪಾದ ಹೆಗಡೆ ನಿರೂಪಿಸಿ, ವಂದಿಸಿದರು.

PREV

Recommended Stories

ಡಿಜೆ ಆದೇಶ ಉಲ್ಲಂಘನೆ: 2 ಕೇಸ್ ದಾಖಲು
ಪರಿವಾರ ಆರೋಗ್ಯವಾಗಿದ್ದರೆ ದೇಶ ಸದೃಢ: ಸಂಸದ ಬಸವರಾಜ ಬೊಮ್ಮಾಯಿ