ಭದ್ರಾವತಿ: ಕ್ಷೇತ್ರದ ಜನ ಎಂದಿಗೂ ಮರೆಯಲಾಗದ ಹಾಗೂ ಸರಳ ಬದುಕಿನ ಮೂಲಕ ಮಾದರಿಯಾಗಿರುವ ಕಾರ್ಮಿಕ ಹೋರಾಟಗಾರ ದಿವಂಗತ ಕಾಮ್ರೇಡ್ ಡಿ.ಸಿ ಮಾಯಣ್ಣನವರ ಹೆಸರು ಚಿರಸ್ಥಾಯಿಯಾಗಿ ಉಳಿಸುವ ನಿಟ್ಟಿನಲ್ಲಿ ಪ್ರಗತಿಪರ ಸಂಘಟನೆಗಳ ಒಕ್ಕೂಟ ಶ್ರಮಿಸುತ್ತದೆ ಎಂದು ಒಕ್ಕೂಟದ ನೂತನ ಅಧ್ಯಕ್ಷ, ನಿವೃತ್ತ ಉಪನ್ಯಾಸಕ ಪ್ರೊ. ಎಂ. ಚಂದ್ರಶೇಖರಯ್ಯ ತಿಳಿಸಿದರು.
ಕೇವಲ ಕಾರ್ಮಿಕ ಹೋರಾಟಗಳು ಮಾತ್ರವಲ್ಲ, ಎಲ್ಲಾ ರೀತಿಯ ಹೋರಾಟಗಳಲ್ಲೂ ಡಿ.ಸಿ ಮಾಯಣ್ಣ ಮುಂಚೂಣಿಯಲ್ಲಿದ್ದರು ಎಂಬುದು ವಿಶೇಷವಾಗಿದೆ. ಪ್ರಗತಿಪರ ಸಂಘಟನೆಗಳ ಒಕ್ಕೂಟದ ನೇತೃತ್ವ ವಹಿಸಿಕೊಂಡು ಯಶಸ್ವಿಯಾಗಿ ಮುನ್ನಡೆಸಿಕೊಂಡು ಬರುತ್ತಿದ್ದರು. ಅವರ ನೆನಪು ಸದಾ ಕಾಲ ಉಳಿಯುವಂತಾಗಬೇಕು. ಈ ನಿಟ್ಟಿನಲ್ಲಿ ಫೆ. ೧೭ರಂದು ನಗರದಲ್ಲಿ ಡಿ.ಸಿ ಮಾಯಣ್ಣನವರ ನೆನಪು ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಪ್ರಗತಿಪರ ಚಿಂತಕರಾದ ಚಿತ್ರನಟ ಅಹಿಂಸಾ ಚೇತನ್, ರೈತ ಹೋರಾಟಗಾರ ಸಿದ್ದನಗೌಡ ಪಾಟೀಲ್, ಅಂಕಣಗಾರ ಶಿವಸುಂದರ್ ಸೇರಿದಂತೆ ಇನ್ನಿತರರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದರು.ಪತ್ರಿಕಾಗೋಷ್ಠಿಯಲ್ಲಿ ಪ್ರಗತಿಪರ ಸಂಘಟನೆಗಳ ಒಕ್ಕೂಟದ ಪ್ರಮುಖರಾದ ಸತ್ಯ ಭದ್ರಾವತಿ, ಸುರೇಶ್, ಎಚ್. ರವಿಕುಮಾರ್, ಜಿ. ರಾಜು, ವಿ. ವಿನೋದ್, ಚಿನ್ನಯ್ಯ, ಯಲ್ಲೋಜಿರಾವ್, ಹನುಮಕ್ಕ, ಸೆಲ್ವರಾಜ್, ಎಸ್.ಕೆ ಸುಧೀಂದ್ರ, ಡಿ. ರಾಜು, ಕುಮಾರಸ್ವಾಮಿ ಜೆಬಿಟಿ ಬಾಬು, ತೀರ್ಥೇಶ್, ಪಿ. ಮೂರ್ತಿ, ನೇತ್ರಾವತಿ, ನಾಗವೇಣಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.