ಕನ್ನಡಪ್ರಭ ವಾರ್ತೆ ಮುದ್ದೇಬಿಹಾಳ
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಹಮ್ಮಿಕೊಂಡಿದ್ದ ಕುಡಿಯುವ ನೀರಿನ ಸಮಸ್ಯೆಗಳ ಕುರಿತ ತಾಲೂಕು ಮಟ್ಟದ ಅಧಿಕಾರಿಗಳ ಮತ್ತು ಪಿಡಿಒಗಳ ತುರ್ತು ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಮುದ್ದೇಬಿಹಾಳ ಮತಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಮುದ್ದೇಬಿಹಾಳ, ತಾಳಿಕೋಟಿ, ನಿಡಗುಂದಿ ಹಾಗೂ ನಾಲತವಾಡ ಪಟ್ಟಣಕ್ಕೆ ಆದ್ಯತೆ ನೀಡಿಬೇಕು. ಅಲ್ಲದೇ ಮೂಕಿಹಾಳ ಬಹುಹಳ್ಳಿ ಕುಡಿಯುವ ನೀರಿನ ಯೋಜನೆಯಡಿ ಬರುವ ಶಿವಪುರ, ಹಗರಗೊಂಡ, ನಾಗೂರ ಗ್ರಾಮಗಳಲ್ಲಿ ಟ್ಯಾಂಕ್ ತುಂಬುತ್ತಿಲ್ಲ ಎಂಬ ದೂರಿಗೆ ಪ್ರತಿಕ್ರಿಯಿಸಿದ ಶಾಸಕರು, ಗುತ್ತಿಗೆದಾರರ ವಿರುದ್ಧ ಸೂಕ್ತ ಕ್ರಮಕ್ಕೆ ಆದೇಶಿಸಿದರು. ಇನ್ನು ಮಿಣಜಗಿ ಗ್ರಾಮದ ಜಿಎಂಎಂ ಕಾಮಗಾರಿಯಲ್ಲಿ ವಿಳಂಬ ಮಾಡುತ್ತಿರುವ ಗುತ್ತಿಗೆದಾರರನ್ನು ಬ್ಲಾಕ್ ಲಿಸ್ಟ್‌ಗೆ ಸೇರಿಸಲು ಸೂಚಿಸಿದರು. ಜಿವಿಪಿಆರ್ ಕಂಪನಿಗೂ ಕೆಲಸದ ಬಗ್ಗೆ ಕಟ್ಟುನಿಟ್ಟಿನ ಎಚ್ಚರಿಕೆ ನೀಡಲು ತಿಳಿಸಿದರು.
ಗ್ರಾಮವಾರು ಸಮಸ್ಯೆಗಳ ವಿವರ:ಅಡವಿ ಸೋಮನಾಳ ಗ್ರಾಪಂ: ಅಡವಿ ಹುಲಗಬಾಳ ತಾಂಡಾದಲ್ಲಿ ಕುಡಿಯುವ ನೀರು ಯೋಗ್ಯವಾಗಿಲ್ಲ. ಅಲ್ಲಿಗೆ ತಕ್ಷಣ ಶುದ್ಧ ಕುಡಿಯುವ ನೀರಿನ ಘಟಕ ಒದಗಿಸಲು ಕುಡಿಯುವ ಅಧಿಕಾರಿ ಆರ್.ಎಸ್.ಹಿರೇಗೌಡರ ಸೂಚಿಸಲಾಯಿತು.
ಮೂಕಿಹಾಳ ಮತ್ತು ತಂಗಡಗಿ ಯೋಜನೆ: ಮೂಕಿಹಾಳ ಬಹುಹಳ್ಳಿ ಯೋಜನೆಯ ನೀರು ವಾಸನೆ ಬರುತ್ತಿರುವ ಬಗ್ಗೆ ಪಿಡಿಒ ಸಭೆಯಲ್ಲಿ ದೂರಿದರು. ತಂಗಡಗಿ ಬಹುಹಳ್ಳಿ ನೀರು ಸರಿಯಾಗಿ ಸರಬರಾಜಾಗುತ್ತಿಲ್ಲ ಎಂದು ಪಿಡಿಒ ಮಾಲಾಶ್ರೀ ಮಾಹಿತಿ ನೀಡಿದರು. ಈ ಎಲ್ಲ ಸಮಸ್ಯೆಗಳನ್ನು ಯುದ್ಧೋಪಾದಿಯಲ್ಲಿ ಸರಿಪಡಿಸಲು ಶಾಸಕರು ಆದೇಶಿಸಿದರು.
ಹರನಾಳ: ಗ್ರಾಮದಲ್ಲಿ ಖಾಸಗಿ ವ್ಯಕ್ತಿಗಳಿಂದ ನೀರಿನ ಸರಬರಾಜಿಗೆ ಅಡಚಣೆಯಾಗುತ್ತಿದ್ದು, ಪಿಡಿಒಗಳು ಈ ಬಗ್ಗೆ ಕೂಡಲೇ ಗಮನಹರಿಸಿ ಸರಬರಾಜು ಸುಗಮಗೊಳಿಸಬೇಕು ಸೂಚಿಸಿದರು.
ಬಹುಹಳ್ಳಿ ಯೋಜನೆಗಳ ಅಡಚಣೆ: ರಕ್ಕಸಗಿ, ಬಂಗಾರಗುಂಡ, ಕಪನೂರ, ಬಲದಿನ್ನಿ ಗ್ರಾಮಗಳಲ್ಲಿ ನೀರಿನ ಸಮಸ್ಯೆ ಹಾಗೂ ನಾಗಬೇನಾಳ ಮತ್ತು ವಿರೇಶನಗರ ಗ್ರಾಮಗಳಿಗೆ ನೀರು ಸರಿಯಾಗಿ ತಲುಪದ ಬಗ್ಗೆ ಚರ್ಚಿಸಲಾಯಿತು. ಹಿರೇಮುರಾಳ ಗ್ರಾಪಂ ವ್ಯಾಪ್ತಿಯ ಜಲಪೂರದಲ್ಲಿ ವಾಟರ್ ಟ್ಯಾಂಕ್ ರಿಪೇರಿ ಹಾಗೂ ಗೋನಾಳ ಗ್ರಾಮದ ಓವರ್ ಹೆಡ್ ಟ್ಯಾಂಕ್ ಆಸ್ತಿ ನೀಡಿ ಸಮಸ್ಯೆ ಸರಿಪಡಿಸಲು ಸೂಚಿಸಿದರು.
ಸ್ವಚ್ಛತೆ ಮತ್ತು ಆಡಳಿತ ವೈಖರಿ: ನಮ್ಮ ತಾಲೂಕಿನ ಹಳ್ಳಿಗಳು ಮೈಸೂರು ನಗರದಂತೆ ಸ್ವಚ್ಛವಾಗಿರಬೇಕು. ಬಳಬಟ್ಟಿ, ವಡವಡಗಿ, ದೇವೂರ ಹಾಗೂ ಯರಝರಿ ಗ್ರಾಮಗಳಲ್ಲಿ ತಕ್ಷಣ ಸ್ವಚ್ಛತಾ ಕಾರ್ಯ ಕೈಗೊಳ್ಳಿ ಎಂದ ಶಾಸಕರು, ಗ್ರಾಪಂ ಆಸ್ತಿಗಳನ್ನು ಸ್ವಂತ ಆಸ್ತಿಯಂತೆ ರಕ್ಷಿಸಬೇಕು ಎಂದು ಪಿಡಿಒಗಳಿಗೆ ಕಿವಿಮಾತು ಹೇಳಿದರು. ಪತ್ರಿಕೆಯಲ್ಲಿ ಸುದ್ದಿ ಬಂದ ನಂತರ ಅಧಿಕಾರಿಗಳು ಪತ್ರ ಬರೆಯುವವರೆಗೆ ಕಾಯಬೇಡಿ, ನಿಮ್ಮ ಜವಾಬ್ದಾರಿ ಅರಿತು ಕೆಲಸ ಮಾಡಿ ಎಂದು ಅಧಿಕಾರಿಗಳಿಗೆ ಛಾಟಿ ಬೀಸಿದರು. ಆಲೂರು ಮತ್ತು ಯರಗಲ್ಲ ಗ್ರಾಮಗಳ ಆರ್‌ಒ ಪ್ಲಾಂಟ್ ಸಮಸ್ಯೆಗಳನ್ನು ಕೂಡಲೇ ಸರಿಪಡಿಸಲು ತಿಳಿಸಿದರು.
ಮಳೆ ಕೊರತೆಯಿರುವ ಕಾರಣ ರೈತರಿಗೆ ಬೀಜ ಮತ್ತು ಗೊಬ್ಬರದ ಸಮಸ್ಯೆಯಾಗದಂತೆ ಕೃಷಿ ಅಧಿಕಾರಿಗಳು ಎಚ್ಚರ ವಹಿಸಬೇಕು. ಇ-ಸ್ವತ್ತು ವಿಳಂಬದ ಬಗ್ಗೆ ಸಾರ್ವಜನಿಕರ ಆಗ್ರಹವಿದ್ದು, ಅದನ್ನು ಕೂಡಲೇ ಸರಿಪಡಿಸಬೇಕು. ಹುಲ್ಲೂರ-ಜಟ್ಟಗಿ ತಾಂಡಾದಲ್ಲಿನ ಸರಕಾರಿ ಜಾಗದ ಅತಿಕ್ರಮಣ ತೆರವಿಗೆ ನೋಟಿಸ್ ನೀಡಿ ಕ್ರಮ ಕೈಗೊಳ್ಳಲು ಸೂಚಿಸಿದರು.
ಸಭೆಯಲ್ಲಿ ತಹಸೀಲ್ದಾರ್ ಕೀರ್ತಿ ಚಾಲಕ, ತಾಪಂ ಇಒ ಸಂಗನಗೌಡ ಬಿರಾದಾರ, ತಾಳಿಕೋಟಿ ಇಒ ಅನಸೂಯಾ ಚಲವಾದಿ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಅಧಿಕಾರಿ ಆರ್.ಎಸ್.ಹಿರೇಗೌಡರ, ಪುರಸಭೆ ಮುಖ್ಯಾಧಿಕಾರಿ ಮಲ್ಲನಗೌಡ ಬಿರಾದಾರ, ಕುಡಿಯುವ ನೀರು ಸರಬರಾಜು ಇಲಾಖೆಯ ಇಂಜಿನಿಯರ್‌ಗಳು ಹಾಗೂ ತಾಲೂಕಿನ ವಿವಿಧ ಪಂಚಾಯತಿ ಪಿಡಿಒಗಳು ಹಾಜರಿದ್ದರು.