ಕೊಪ್ಪಳ: ಜಗತ್ತಿನಲ್ಲಿ ಯಾವುದು ಸರಿ, ಯಾವುದು ತಪ್ಪು ಎಂಬುದನ್ನು ನಿರ್ಣಯಿಸುವಲ್ಲಿ ಹಾಗೂ ಆರೋಗ್ಯಕರ ಸಮಾಜದ ನಿರ್ಮಾಣದಲ್ಲಿ ಪುಸ್ತಕಗಳ ಪಾತ್ರ ಹಿರಿದಾಗಿದೆ. ಸಾಮಾಜಿಕ ತಲ್ಲಣಗಳಿಗೆ ಕವಿಯ ಅಂತರಂಗ ಮಿಡಿಯಬೇಕು. ಆಗ ಕವಿಯಿಂದ ಕಾವ್ಯದ ಆಶಯ ಧನಾತ್ಮಕವಾಗಿ ಹೊಸ ರೂಪ ಪಡೆಯುತ್ತದೆ ಎಂದು ಕನ್ನಡಪ್ರಭ ಹಿರಿಯ ವರದಿಗಾರ ಸೋಮರೆಡ್ಡಿ ಅಳವಂಡಿ ಹೇಳಿದರು.
ಸಾಮಾಜಿಕ ವ್ಯವಸ್ಥೆಯಲ್ಲಿನ ತಲ್ಲಣಗಳು, ಜನರ ಬದುಕಿನ ಸಂಕಷ್ಟಗಳು ಹಾಗೂ ಶ್ರಮಿಕ ವರ್ಗದ ನೋವುಗಳಿಗೆ ಸಾಹಿತ್ಯ ಸ್ಪಂದಿಸಬೇಕು. ಪುಸ್ತಕಗಳು ಕೇವಲ ಜ್ಞಾನ ನೀಡುವ ಸಾಧನಗಳಲ್ಲ, ಸಮಾಜದ ದಿಕ್ಕು ಬದಲಿಸುವ ಶಕ್ತಿಯೂ ಆಗಿವೆ. ಸಾಹಿತ್ಯದ ಮೂಲಕ ಮಾನವೀಯ ಮೌಲ್ಯಗಳನ್ನು ಬೆಳೆಸುವ ಕಾರ್ಯ ನಡೆಯಬೇಕು ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ಡಾ. ನಿಂಗಪ್ಪ ಕಂಬಳಿ ಮಾತನಾಡಿ, ಸಾಹಿತ್ಯ ಮಾನವೀಯ ಮೌಲ್ಯಗಳನ್ನು ಮೂಡಿಸಬೇಕು. ಇಂದಿನ ವಿಷಮ ಪರಿಸ್ಥಿತಿಯಲ್ಲಿ ಮನುಷ್ಯರನ್ನು ಪ್ರೀತಿಸುವ ಶಕ್ತಿ ಪುಸ್ತಕಗಳಿಗೆ ಮಾತ್ರ ಇದೆ. ಪುಸ್ತಕ ಸಂಸ್ಕೃತಿ ಕ್ಷೀಣಿಸುತ್ತಿರುವ ಈ ಸಂದರ್ಭದಲ್ಲಿ ಪುಸ್ತಕಗಳನ್ನು ಪ್ರಕಟಿಸುತ್ತಿರುವುದು ಶ್ಲಾಘನೀಯ ಎಂದರು.ಅಂತರಾಷ್ಟ್ರೀಯ ಜಾನಪದ ಕಲಾವಿದ ಡಾ. ಜೀವನಸಾಬ ಬಿನ್ನಾಳ ಮಾತನಾಡಿ, ಸುತ್ತಮುತ್ತಲಿನ ವಸ್ತುಗಳು, ಘಟನೆಗಳು ಹಾಗೂ ಬದುಕಿನ ಅನುಭವಗಳನ್ನು ದಾಖಲಿಸುವುದು ಅತ್ಯಂತ ಅಗತ್ಯ. ದಾಖಲಿಸದಿದ್ದರೆ ಅವು ಮುಂದಿನ ಪೀಳಿಗೆಗೆ ದಕ್ಕುವುದಿಲ್ಲ. ಜನಪದವೆಂದರೆ ಬದುಕು, ಬದುಕು ಎಂದರೆ ಜನಪದ. ಮೆಹಬೂಬ್ ಕಿಲ್ಲೇದಾರ್ ಅವರು ತಮ್ಮ 20 ವರ್ಷಗಳ ಜಾನಪದ ಪಯಣದ ಅನುಭವವನ್ನು ಕೃತಿಯಲ್ಲಿ ದಾಖಲಿಸಿರುವುದು ಮಹತ್ವದ ಕಾರ್ಯ ಎಂದರು.
ಜಾನಪದ ಕೃತಿ ಬಿಡುಗಡೆಗೊಳಿಸಿ ಮಾತನಾಡಿದ ಡಾ. ಸಿದ್ದಯ್ಯ ಪುರಾಣಿಕ ಟ್ರಸ್ಟ್ ಸದಸ್ಯ ಸಿದ್ದಲಿಂಗಪ್ಪ ಕೊಟ್ನೇಕಲ್ಲ, ನಮ್ಮ ಬಾಲ್ಯದ ಬದುಕು ಜನಪದದಿಂದ ಕೂಡಿತ್ತು. ಕೃತಿಯಲ್ಲಿ ದಾಖಲಾಗಿರುವ ಪರಿಕರಗಳನ್ನು ಬಳಸಿಕೊಂಡು ನಾವು ಬಾಲ್ಯದಲ್ಲಿ ಬದುಕಿದ್ದೇವೆ. ಮುಂದಿನ ಪೀಳಿಗೆಗೆ ಇಂತಹ ಜಾನಪದ ಪರಿಕರಗಳನ್ನು ಪರಿಚಯಿಸುವ ಅಗತ್ಯ ಎದುರಾಗಬಹುದು. ಈ ದೃಷ್ಟಿಯಿಂದ ಕೃತಿ ದಾಖಲಾರ್ಹವಾಗಿದೆ ಎಂದರು.
ಪ್ರಾಸ್ತಾವಿಕವಾಗಿ ಮೆಹಬೂಬ್ ಕಿಲ್ಲೇದಾರ್ ಮಾತನಾಡಿದರು. ಜಿಲ್ಲಾ ಕನ್ನಡ ಜಾಗೃತಿ ಸಮಿತಿ ಸದಸ್ಯ ಮಹೇಶ ಬಳ್ಳಾರಿ, ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ ಅಲಿಹುಸೇನ್ ಕಾರಟಗಿ, ಸೈಯದ್ ಸಾಬ್ ಕಿಲ್ಲೇದಾರ್, ಎಸ್‌ಡಿಎಂಸಿ ಸಮಿತಿ ಅಧ್ಯಕ್ಷ ಮೆಹಬೂಬ್ ಮುಲ್ಲಾ, ಶಿಕ್ಷಕ ಬಸವರಾಜ ಗೊಲ್ಲರ್, ಕಟ್ಟಡ ಕಾರ್ಮಿಕರ ಸಂಘದ ಅಧ್ಯಕ್ಷ ಮೆಹಬೂಬ್ ಮಣ್ಣೂರು, ಯಮನೂರು ಸಾಬ್ ಹಿರೇಮೂತಿ, ಫಕೀರಸ್ವಾಮಿ ಗಣಾಚಾರಿ ಉಪಸ್ಥಿತರಿದ್ದರು.