ಭಾರತ ದೇಶದ ಜನ ಸಂಖ್ಯೆಯಲ್ಲಿ ಹೆಚ್ಚಿನ ಭಾಗ ಯುವಕರದ್ದೇ ಆಗಿದ್ದು, ದೇಶದ ಅಭಿವೃದ್ಧಿಯಲ್ಲಿ ಯುವಕರ ಪಾತ್ರ ಮಹತ್ವದ್ದಾಗಿದೆ.
ಕನ್ನಡಪ್ರಭವಾರ್ತೆ ಕಾರವಾರ
ಯುವಕರು ಯಾವುದೇ ದೇಶದ ಶಕ್ತಿ, ಸಂಪತ್ತು ಮತ್ತು ಭವಿಷ್ಯ. ಭಾರತ ದೇಶದ ಜನ ಸಂಖ್ಯೆಯಲ್ಲಿ ಹೆಚ್ಚಿನ ಭಾಗ ಯುವಕರದ್ದೇ ಆಗಿದ್ದು, ದೇಶದ ಅಭಿವೃದ್ಧಿಯಲ್ಲಿ ಯುವಕರ ಪಾತ್ರ ಮಹತ್ವದ್ದಾಗಿದೆ. ವಿಕಸಿತ ಭಾರತ ನಿರ್ಮಾಣ ಮಾಡಲು ಯುವಕರ ಚಿಂತನೆಗಳು ಸಕಾರಾತ್ಮವಾಗಿರಬೇಕು ಎಂದು ವಿಧಾನಪರಿಷತ್ ಸದಸ್ಯ ಗಣಪತಿ ಉಳ್ವೇಕರ ಹೇಳಿದರು.
ಕಾರವಾರದ ಬಾಡ ಶಿವಾಜಿ ಶಿಕ್ಷಣ ಮಹಾವಿದ್ಯಾಲಯದಲ್ಲಿ ನಡೆದ ವಿಕಸಿತ ಭಾರತ ಜಿಲ್ಲಾ ಯುವ ಸಂಸತ್ತು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಅಪರ ಜಿಲ್ಲಾಧಿಕಾರಿ ಸಾಜಿದ ಮುಲ್ಲಾ, ಸಮಾನತೆ, ಸ್ವಚ್ಛತೆ, ಶಾಂತಿ, ವೈಜ್ಞಾನಿಕ ಮನೋಭಾವನೆ, ಅಜ್ಞಾನ ಮತ್ತು ಅನ್ಯಾಯಗಳ ಬಗ್ಗೆ ಯುವಕರು ಜಾಗೃತಿ ಮೂಡಿಸಬೇಕು ಎಂದರು.
ಕವಿವಿ ಸ್ನಾತಕೋತ್ತರ ಕೇಂದ್ರ ಮುಖ್ಯಸ್ಥ ಡಾ. ಶಿವಕುಮಾರ ಹರಗಿ, ವಿಕಾಸ ಮತ್ತು ವಿಕಸಿತ ರಾಷ್ಟ್ರವಾಗಲು ಯುವಕರು ನಾಯಕತ್ವ, ಸಾಮಾಜಿಕ ಜವಾಬ್ದಾರಿ ಹಾಗೂ ಸತ್ಯ ನಿಷ್ಠೆಯನ್ನು ಅಳವಡಿಸಿಕೊಂಡು ಇಂತಹ ಕಾರ್ಯಕ್ರಮದಲ್ಲಿ ಭಾಗವಹಿಸಬೇಕು ಎಂದರು. ಶಿವಾಜಿ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಪ್ರಕಾಶ ಕೆ.ರಾಣೆ, ಯುವ ಸಂಸತ್ತು ಮುಂದಿನ ನಾಯಕರನ್ನು ನಿರ್ಮಾಣ ಮಾಡುವ ವೇದಿಕೆಯಾಗಿದೆ ಎಂದರು.
ಮೈ ಭಾರತ ಕೇಂದ್ರ ಉತ್ತರ ಕನ್ನಡದ ಉಪ-ನಿರ್ದೇಶಕ ಲೋಕೇಶ ಕುಮಾರ ಪ್ರಾಸ್ತಾವಿಕವಾಗಿ ಮಾತನಾಡಿದರು.
ಪ್ರಾಚಾರ್ಯ ಡಾ. ಸುಮನ ಜಿ. ಸಾವಂತ ಸ್ವಾಗತಿಸಿದರು. ಎನ್ಎಸ್ಎಸ್ ಕಾರ್ಯಕ್ರಮಾಧಿಕಾರಿ ಡಾ. ನವೀನ ದೇವರಭಾವಿ ವಂದಿಸಿದರು. ಡಾ. ಮಾಧವಿ ಗಾಂವಕರ ಮತ್ತು ರೂಪಾ ಗಾಂವಕರ ನಿರೂಪಿಸಿದರು.
ಉತ್ತರ ಕನ್ನಡ ಜಿಲ್ಲೆಯಿಂದ ವಿಕಸಿತ ಭಾರತ ಯುವ ಸಂಸತ್ತಿನಲ್ಲಿ ಭಾಗವಹಿಸಿದ ವಿವಿಧ ಮಹಾವಿದ್ಯಾಲಯದ ಸ್ಫರ್ಧಾಳುಗಳಲ್ಲಿ ಪ್ರಾರ್ಥನಾ ಭಟ್ ಪ್ರಥಮ, ಪ್ರಸನ್ನ ಮರಾಠಿ ದ್ವಿತೀಯ, ಕಾರ್ತಿಕ ಶಾನಭಾಗ ತೃತೀಯ, ಸಿಂಧು ಗಾಂವಕರ ನಾಲ್ಕನೇ ಹಾಗೂ ರಂಜಿತಾ ನಾಯಕ ಐದನೇ ಸ್ಥಾನ ಪಡೆದರು.
ನಿರ್ಣಾಯಕರಾಗಿ ಹೇಮಲತಾ ಕೆ., ಸುಮಯಾ ಸೈಯದ, ಡಾ. ರಾಜಕುಮಾರ ಪಾಟಿಲ್, ಲೋಕೇಶ ಕುಮಾರ, ಹೇಮಂತ ಎಚ್. ಭಟ್ ಮತ್ತಿತರರು ಇದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.