ರಾಮನಗರ: ಶಿಕ್ಷಣದಿಂದ ಮಾತ್ರ ಆರೋಗ್ಯಕರ ಸಮಾಜ ನಿರ್ಮಾಣ ಸಾಧ್ಯ. ಮಕ್ಕಳು ಸಮಾಜದಲ್ಲಿನ ಆಗು-ಹೋಗುಗಳನ್ನು ಗಮನಿಸಿ, ಸಮಸ್ಯೆಗಳ ಕುರಿತು ಪ್ರಶ್ನಿಸುವ ಮನೋಭಾವ, ನಾಯಕತ್ವ ಗುಣಗಳನ್ನು ಅಳವಡಿಸಿಕೊಂಡು ಭವಿಷ್ಯದ ಸ್ವಾಭಿಮಾನಿ ಪ್ರಜೆಗಳಾಗಬೇಕು ಎಂದು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷರಾದ ಡಾ. ನಾಗಲಕ್ಷ್ಮಿ ಚೌಧರಿ ಕರೆ ನೀಡಿದರು.
ಸಂವಿಧಾನ ಶಿಲ್ಪಿ ಡಾ. ಅಂಬೇಡ್ಕರ್ ಅವರು ತಿಳಿಸಿದಂತೆ ಶಿಕ್ಷಣ ಇದ್ದವರು, ಸಂಘಟನೆ ಮಾಡಿ, ಹೋರಾಟದ ಮೂಲಕ ಸಮಾಜದ ಸಮಸ್ಯೆಗಳನ್ನು ಬಗೆಹರಿಸುತ್ತಾರೆ. ನಮ್ಮದು ಗುಲಾಮಗಿರಿಯ ಬದುಕಾಗಿರದೇ, ಸ್ವಾಭಿಮಾನದ ಬದುಕಾಗಿರಬೇಕು. ಅವರು ನುಡಿಯಂತೆ ಇಂದಿನ ಮಕ್ಕಳು, ಮುಂದಿನ ಗುಲಾಮಗಿರಿ ಪ್ರಜೆಗಳಾಗದೇ, ಸ್ವಾಭಿಮಾನದ ಪ್ರಜೆಗಳಾಗಬೇಕು, ಭವಿಷ್ಯದ ರೂವಾರಿಗಳಾಗಬೇಕು ಎಂದು ಹೇಳಿದರು.
ಅಜ್ಞಾನವೆಂಬುದು ಸಾವಿಗೆ ಸಮಾನ, ನೀವೆಲ್ಲರೂ ಅರಿವಿನ ಮಕ್ಕಳಾಗುವ ಮೂಲಕ ತಮ್ಮ ಹಕ್ಕುಗಳು, ಸ್ವಾಭಿಮಾನದ ಬದುಕಿಗಾಗಿ ಹೋರಾಟ ನಡೆಸಬೇಕು ಉತ್ತಮ ಸಮಾಜ ನಿರ್ಮಾಣಕ್ಕೆ ಕೈ ಜೋಡಿಸಬೇಕೆಂದು ಅಧ್ಯಕ್ಷರು ತಮ್ಮ ಜೀವನದ ಉದಾಹರಣೆಯೊಂದಿಗೆ ಶಿಕ್ಷಣಕ್ಕಿರುವ ಶಕ್ತಿ ಹಾಗೂ ಶಿಕ್ಷಣದ ಮಹತ್ವವನ್ನು ಶಾಲಾ ವಿದ್ಯಾರ್ಥಿಗಳಿಗೆ ವಿವರವಾಗಿ ತಿಳಿಸಿದರು.18 ವರ್ಷದೊಳಗಿನ ಮಕ್ಕಳು ಸಾಮಾಜಿಕ ಜಾಲತಾಣಗಳನ್ನು ಬಳಸುವಂತಿಲ್ಲ. ಮಕ್ಕಳು ಮೊಬೈಲ್ ಬಳಕೆಯಿಂದ ದೂರವಿರಬೇಕು. ಅವಶ್ಯಕತೆಗಷ್ಟೇ ಮೊಬೈಲ್ ಬಳಸಬೇಕು. ಜೈವಿಕ ಸಹಜ ಕ್ರಿಯೆಯಾದ ಹಾರ್ಮೋನುಗಳ ವ್ಯತ್ಯಾಸದಿಂದಾಗಿ ಪ್ರೌಢಾವಸ್ಥೆಯ ಮಕ್ಕಳಲ್ಲಿ ಮನಸ್ಸಿನ ಚಂಚಲತೆ ಉಂಟಾಗುತ್ತದೆ. ವಿದ್ಯಾರ್ಥಿ ಜೀವನ ಮಹತ್ವದ ಘಟ್ಟವಾಗಿದ್ದು, ಪ್ರೀತಿ-ಪ್ರೇಮ ಹಾಗೂ ಯಾವುದೇ ವ್ಯಸನಗಳು, ದುಶ್ಚಟಗಳಿಗೆ ಬಲಿಯಾಗದೇ ಓದಿನತ್ತ ಗಮನ ಕೇಂದ್ರೀಕರಿಸಿ, ಸತತ ಕಠಿಣ ಪರಿಶ್ರಮದಿಂದ ಗುರಿ ಸಾಧಿಸಬೇಕು ಎಂದು ನಾಗಲಕ್ಷ್ಮಿ ಮಕ್ಕಳಿಗೆ ಕಿವಿಮಾತು ಹೇಳಿದರು.
ರೂಟ್ಸ್ ಎಜುಕೇಶನ್ ಹಾಗೂ ಸ್ಕಿಲ್ ಫ್ಲಿಕ್ಸ್ ಸಂಸ್ಥೆಗಳ ಸಂಸ್ಥಾಪಕ ವಿನಯ್ ಪಾಟೀಲ್ ಮಾತನಾಡಿ, ಬೆಳೆಯುತ್ತಿರುವ ಮಕ್ಕಳಲ್ಲಿ ತಾಳ್ಮೆ ಹಾಗೂ ಕಲಿಕಾ ಸಾಮರ್ಥ್ಯ ಹೆಚ್ಚಿರುತ್ತದೆ. ಯಾವುದೇ ಆಕರ್ಷಣೆಗಳಿಗೆ ಒಳಗಾಗದೇ, ಮೊಬೈಲ್ ಬಿಟ್ಟು ಶಿಕ್ಷಣದತ್ತ ಗಮನಹರಿಸಿ ಏಕಾಂತದಲ್ಲಿ ಆತ್ಮಾವಲೋಕನ ಮಾಡಿಕೊಳ್ಳಬೇಕು. ಬೇರೆಯವರೊಂದಿಗೆ ಹೋಲಿಸಿಕೊಳ್ಳದೇ ತಮ್ಮ ಬಗ್ಗೆ ಅಭಿಮಾನ ಹೊಂದಿ ಸಾಮರ್ಥ್ಯ ಹೆಚ್ಚಿಸಿಕೊಳ್ಳಲು ಆತ್ಮಚಿಂತನೆ ನಡೆಸಬೇಕು ಎಂದರು.
ಕಾರ್ಯಕ್ರಮದಲ್ಲಿ ಬಿಡದಿ ವ್ಯಾಪ್ತಿಯ ಸರ್ಕಾರಿ ಹಾಗೂ ಖಾಸಗಿ ಶಾಲಾ ಮಕ್ಕಳ ಅಹವಾಲುಗಳನ್ನು ನಾಗಲಕ್ಷ್ಮಿ ಆಲಿಸಿದರು. ಗ್ರಂಥಾಲಯ, ಶೌಚಾಲಯ, ಶಾಲಾ ಕಾಂಪೌಂಡ್ ನಿರ್ಮಾಣ, ಶಿಕ್ಷಕರ ವ್ಯವಸ್ಥೆ ಕಲ್ಪಿಸುವಂತೆ ಸರ್ಕಾರಿ ಶಾಲೆ ಮಕ್ಕಳು, ಸ್ಕೈ ವಾಕ್, ಅಂಡರ್ ಪಾಸ್ ನಿರ್ಮಾಣ ಮಾಡಿಕೊಡುವಂತೆ ಖಾಸಗಿ ಶಾಲಾ ಮಕ್ಕಳು ನಾಗಲಕ್ಷ್ಮಿ ಅವರಲ್ಲಿ ಮನವಿ ಮಾಡಿದರು. ಆಗ ಅಧ್ಯಕ್ಷರು ಸ್ಥಳದಲ್ಲಿಯೇ ಸಂಬಂಧಿಸಿದ ಇಲಾಖೆ ಅಧಿಕಾರಿಗಳಿಗೆ ಕರೆ ಮಾಡಿ ಸಮಸ್ಯೆ ಬಗೆಹರಿಸಿ ವರದಿ ನೀಡುವಂತೆ ಸೂಚಿಸಿದರು.
ಬಿಡದಿಯ ಬೈರಮಂಗಲ ಕ್ರಾಸ್ ತ್ಯಾಗರಾಜು ಸೆಂಟ್ರಲ್ ಶಾಲೆಯಲ್ಲಿ ಆಯೋಜಿಸಿದ್ದ ಬಿಡದಿ ಹೋಬಳಿ ಮಕ್ಕಳ ಸಂರಕ್ಷಣೆ ಹಾಗೂ ಕಾನೂನು ಬಲವರ್ಧನೆಯ ಕಾರ್ಯಗಾರವನ್ನು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮಿ ಚೌಧರಿ ಉದ್ಘಾಟಿಸಿದರು.