ಬಗೆಹರಿಯದ ಸಮಸ್ಯೆ, ಬೀದಿ ದೀಪ ಅವ್ಯವಸ್ಥೆ, ಒಳಚರಂಡಿ ನಾದುರಸ್ತಿ

KannadaprabhaNewsNetwork | Updated : Feb 09 2024, 04:07 PM IST

ಸಾರಾಂಶ

ನಾಲ್ಕು ವರ್ಷವಾದರೂ ಬಗೆಹರಿಯದ ಸಮಸ್ಯೆ, ಬೀದಿ ದೀಪ ಅವ್ಯವಸ್ಥೆ, ನಾದುರಸ್ತಿ ಒಳಚರಂಡಿ. ಮಂಗಳೂರು ಮಹಾನಗರ ಪಾಲಿಕೆಯ ಸುರತ್ಕಲ್‌ ವಲಯ ಕಚೇರಿಯಲ್ಲಿ ಬುಧವಾರ ಮೇಯರ್‌ ಸುಧೀರ್‌ ಶೆಟ್ಟಿ ಕಣ್ಣೂರು ಅಧ್ಯಕ್ಷತೆಯಲ್ಲಿ ನಡೆದ ಜನಸ್ಪಂದನ ಕಾರ್ಯಕ್ರಮದಲ್ಲಿ ಕಂಡುಬಂದ ಸಮಸ್ಯೆಗಳ ಮಹಪೂರ.

ಕನ್ನಡಪ್ರಭ ವಾರ್ತೆ ಮಂಗಳೂರು

ನಾಲ್ಕು ವರ್ಷವಾದರೂ ಬಗೆಹರಿಯದ ಸಮಸ್ಯೆ, ಬೀದಿ ದೀಪ ಅವ್ಯವಸ್ಥೆ, ನಾದುರಸ್ತಿ ಒಳಚರಂಡಿ. ಮಂಗಳೂರು ಮಹಾನಗರ ಪಾಲಿಕೆಯ ಸುರತ್ಕಲ್‌ ವಲಯ ಕಚೇರಿಯಲ್ಲಿ ಬುಧವಾರ ಮೇಯರ್‌ ಸುಧೀರ್‌ ಶೆಟ್ಟಿ ಕಣ್ಣೂರು ಅಧ್ಯಕ್ಷತೆಯಲ್ಲಿ ನಡೆದ ಜನಸ್ಪಂದನ ಕಾರ್ಯಕ್ರಮದಲ್ಲಿ ಕಂಡುಬಂದ ಸಮಸ್ಯೆಗಳ ಮಹಪೂರ. 

ಈ ಎಲ್ಲ ಸಮಸ್ಯೆಗಳನ್ನು ಬಗೆಹರಿಸುವ ಭರವಸೆ ಜತೆಗೆ ಕೆಲವು ಸಮಸ್ಯೆಗಳನ್ನು ಸ್ಥಳದಲ್ಲೇ ಇತ್ಯರ್ಥಪಡಿಸಲಾಯಿತು.

ತಡಂಬೈಲ್‌ನಲ್ಲಿ ಹೆದ್ದಾರಿ ಸಂಪರ್ಕಿಸುವ ಒಳರಸ್ತೆ ಡಾಂಬರು ಹಾಕುವ ಕಾಮಗಾರಿ ವಿಳಂಬ ಕುರಿತಂತೆ ಸ್ಥಳೀಯರು ಗಮನ ಸೆಳೆದರು. ಇದಕ್ಕೆ ಉತ್ತರಿಸಿದ ಸ್ಥಳೀಯ ಪಾಲಿಕೆ ಸದಸ್ಯೆ, ರಸ್ತೆ ಕಾಮಗಾರಿಗೆ ಹಣವನ್ನು ಮೀಸಲಿರಿಸಲಾಗಿದೆ. 

ಹೆದ್ದಾರಿ ಇಲಾಖೆಯ ಅನುಮತಿಯ ಸಮಸ್ಯೆಯಿತ್ತು. ಇದರ ಸಂಪೂರ್ಣ ಕಾಮಗಾರಿಗೆ ಹೆಚ್ಚುವರಿ ಹಣ ಮೀಸಲಿರಿಸಲಾಗಿದೆ ಎಂದರು.

ಸುರತ್ಕಲ್‌ ಪರಿಸರದಲ್ಲಿ ಬೀದಿ ದೀಪ, ಹೈ ಮಾಸ್ಕ್ ದೀಪ ಹಾಳಾಗಿರುವ ಕುರಿತು ಗಮನ ಸೆಳೆಯಲಾಯಿತು. ಇದಕ್ಕೆ ಸಂಬಂಧಪಟ್ಟ ವಾಹನ ದುರಸ್ತಿಯಲ್ಲಿದೆ ಎಂದು ಅಧಿಕಾರಿಗಳು ತಿಳಿಸಿದಾಗ ಅಸಮಾಧಾನಗೊಂಡ ಮೇಯರ್‌ ಅವರು ತಕ್ಷಣ ವಾಹನ ದುರಸ್ತಿಗೆ ಸೂಚಿಸಿದರು.

ಸಂತೆಯ ದಿನವಾದ ಬುಧವಾರ ಸುರತ್ಕಲ್‍ನಲ್ಲಿ ಎರಡೂ ಕಡೆ ವ್ಯಾಪಾರ ನಡೆಸುತ್ತಾ ವಾಹನ ಸಂಚಾರಕ್ಕೆ ಅಡಚಣೆ ಆಗುತ್ತಿರುವ ಬಗ್ಗೆ ಸ್ಥಳೀಯರು ಗಮನ ಸೆಳೆದರು.

ಸ್ಥಳೀಯ ಎಂಆರ್‌ಪಿಎಲ್‌ ಘಟಕಕ್ಕೆ ಖಾಸಗಿ ಬಾವಿಗಳಿಂದ ಲಕ್ಷಾಂತರ ಲೀಟರ್‌ ನೀರು ಪೂರೈಕೆಯಾಗುತ್ತಿದೆ. ಇದರಿಂದ ಸಾರ್ವಜನಿಕರಿಗೆ ಅಗತ್ಯ ಸಂದರ್ಭಗಳಲ್ಲಿ ನೀರು ಸಿಗದ ಪರಿಸ್ಥಿತಿ ಉದ್ಭವವಾಗಬಹುದು. ಕಾನ, ಬಾಳ ರಸ್ತೆ ಕಳಪೆಯಾಗಿದ್ದು ಈ ಬಗ್ಗೆ ತನಿಖೆ ನಡೆಸಬೇಕು ಎಂದು ಡಿವೈಎಫ್‍ಐ ಸಂಘಟನೆ ಮುಖಂಡರು ಒತ್ತಾಯಿಸಿದರು.

ಬೀದಿ ದೀಪ ನಿರ್ವಹಣೆಯಿಲ್ಲದೆ ಜನರ ರಾತ್ರಿ ಓಡಾಡಲು ಕಷ್ಟ ಪಡುವಂತಾಗಿದೆ. ಕೆಲವು ಕಡೆ ಬೃಹತ್ ಅಂಡರ್ ಗ್ರೌಂಡ್ ಸ್ಟೋರೇಜ್ ಮಾಡಿ ಯಥೇಚ್ಚ ಕುಡಿಯುವ ನೀರು ಸಂಗ್ರಹಿಸಿದರೆ ಇನ್ನು ಕೆಲವರಿಗೆ ಇದರಿಂದ ನೀರು ತಲುಪುತ್ತಿಲ್ಲ ಈ ಬಗ್ಗೆ ಸಮಗ್ರ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಆಗ್ರಹಿಸಿದರು.

ಅನಧಿಕೃತ ಬೃಹತ್ ಫ್ಲೈಕ್ಸ್‌ಗಳಿಂದ ವಾಹನ ಸಂಚಾರಕ್ಕೆ ಅಡ್ಡಿಯಾಗುತ್ತಿದ್ದು, ಸರಿಯಾಗಿ ವಾಹನ ಚಲಾಯಿಸಲು ಆಗುತ್ತಿಲ್ಲ ಎಂಬ ದೂರಿಗೆ ತತ್‍ಕ್ಷಣ ಕ್ರಮಕ್ಕೆ ವಲಯ ಆಯುಕ್ತರಿಗೆ ಮೇಯರ್‌ ಸೂಚಿಸಿದರು.

ಮೇಯರ್‌ ಭರವಸೆ: ಒಟ್ಟು 38 ದೂರು ಅರ್ಜಿ ಸ್ವೀಕರಿಸಲಾಗಿದ್ದು ಬಗೆಹರಿಸಲು ಅಧಿಕಾರಿಗಳು ಕ್ರಮ ಕೈಗೊಳ್ಳಲಿದ್ದಾರೆ. ಪ್ರತಿ ತಿಂಗಳು ಜನಸ್ಪಂದನ, ಫೋನ್‌ ಇನ್ ಮೂಲಕ ಜನಸ್ನೇಹಿ ಪಾಲಿಕೆ ಆಡಳಿತ ನಮ್ಮ ಗುರಿಯಾಗಿದ್ದು, ಸಾಧ್ಯವಾದಷ್ಟು ಮಟ್ಟಿಗೆ ಸಣ್ಣ ಪುಟ್ಟ ಸಮಸ್ಯೆ ನಿವಾರಣೆ ಮಾಡಲು ಪ್ರಾಮಾಣಿಕ ಪ್ರಯತ್ನ ನಡೆಸಲಾಗುತ್ತಿದೆ ಎಂದು ಮೇಯರ್ ಸುಧೀರ್‌ ಶೆಟ್ಟಿ ಹೇಳಿದರು.

ಉಪಮೇಯರ್ ಸುನೀತಾ, ಪಾಲಿಕೆ ಸದಸ್ಯರಾದ ಲೋಕೇಶ್ ಬೊಳ್ಳಾಜೆ, ಸರಿತಾ ಶಶಿಧರ್‌, ಶ್ವೇತಾ, ಲಕ್ಷ್ಮೀ ಶೇಖರ್ ದೇವಾಡಿಗ, ವೇದಾವತಿ, ನಯನ ಆರ್. ಕೊಟ್ಯಾನ್, ಸಂಶದ್‌ಬಾನು, ಸುಮಿತ್ರ ಕರಿಯ, ಸುಮಂಗಳ ರಾವ್, ಶೋಭಾ ರಾಜೇಶ್, ಕಂದಾಯ ಉಪ ಆಯುಕ್ತ ಗಿರೀಶ್ ನಂದನ್, ಉಪ ವಲಯ ಆಯುಕ್ತೆ ವಾಣಿ ಆಳ್ವ ಮತ್ತಿತರರಿದ್ದರು.

Share this article