ಮಂಗಳೂರು: ನಗರದ ಜಿಲ್ಲಾ ಕಾರಾಗೃಹದಲ್ಲಿರುವ ವಿಚಾರಣಾಧೀನ ಕೈದಿಯೊಬ್ಬನಿಗೆ ನೀಡಲು ತಂದಿದ್ದ ಎಂಡಿಎಂಎ ಹೋಲುವ ಪುಡಿ ಸಹಿತ ಓರ್ವನನ್ನು ಕಾರಾಗೃಹದ ಭದ್ರತೆಗೆ ನಿಯೋಜನೆ ಮಾಡಿರುವ ಪೊಲೀಸರು ವಶಕ್ಕೆ ಪಡೆದು, ಬರ್ಕೆ ಠಾಣೆ ಪೊಲೀಸರಿಗೆ ಒಪ್ಪಿಸಿದ್ದಾರೆ.
ಕಾರಾಗೃಹದ ಅಧೀಕ್ಷಕ ಶರಣಬಸಪ್ಪ ಅವರು ನೀಡಿದ ದೂರಿನಂತೆ ಆರೋಪಿ ಉರ್ವಸ್ಟೋರ್ ನಿವಾಸಿ ಆಶಿಕ್ ಎಂಬಾತನನ್ನು ಬಂಧಿಸಲಾಗಿದೆ.ಕಾರಾಗೃಹದಲ್ಲಿ ವಿಚಾರಣಾಧೀನ ಬಂಧಿಯಾಗಿರುವ ಅನ್ವಿತ್ ಎಂಬಾತನನ್ನು ಸಂದರ್ಶಿಸಲು ಡಿ.1ರಂದು ಮಧ್ಯಾಹ್ನ 12.45ರ ವೇಳೆಗೆ ಬಂದಿದ್ದ. ಕೈದಿಗೆ ನೀಡಲು ತಂದಿದ್ದ ಬೇಕರಿ ತಿಂಡಿಗಳಾದ 40 ಪ್ಯಾಕೆಟ್ ಬಿಸ್ಕಟ್, 1 ಪ್ಯಾಕೆಟ್ ಮಿಕ್ಸ್ಚರ್, 1 ಪ್ಯಾಕೆಟ್ ಚಕ್ಕುಲಿ ಹಾಗೂ 1 ಟೂತ್ ಪೇಸ್ಟ್‌ನ್ನು ಪಾಳಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಕೈಗಾರಿಕಾ ಭದ್ರತಾ ಸಿಬ್ಬಂದಿ ಶಶಿಕುಮಾರ ಹಾಗೂ ಶೇಖರ ಎಂಬವರು ಬಾಡಿವಾರ್ನ್ ಕ್ಯಾಮರಾ ಧರಿಸಿ ಕೈ ಹಾಗೂ ಲಭ್ಯ ಭದ್ರತಾ ಸಲಕರಣೆಗಳಿಂದ ಪರಿಶೀಲನೆ ನಡೆಸಿದ್ದಾರೆ.ಈ ವೇಳೆ ಟೂತ್ ಪೇಸ್ಟ್ ಒಳಭಾಗದಲ್ಲಿ ಅನುಮಾನಾಸ್ಪದ ವಸ್ತುಗಳು ಇರುವುದು ಮೇಲ್ನೋಟಕ್ಕೆ ಕಂಡುಬಂದಿದೆ. ತಕ್ಷಣ ಉಸ್ತುವಾರಿ ಅಧಿಕಾರಿ ಕಿರಣ ಅಂಬಿಗ ಅವರಿಗೆ ಮಾಹಿತಿ ನೀಡಿದ್ದು ಅವರು ಬಂದು ಪೇಸ್ಟ್ ತೆರೆದು ಕೂಲಂಕಶವಾಗಿ ಪರಿಶೀಲಿಸಿದ್ದಾರೆ. ಆಗ 2 ತುಂಡು ಪ್ಲಾಸ್ಟಿಕ್ ಸ್ಟ್ರಾ ಹಾಗೂ 1 ಪ್ಲಾಸ್ಟಿಕ್ ಪೊಟ್ಟಣ ಪತ್ತೆಯಾಗಿದೆ. ಸಹಾಯಕ ಕಮಾಂಡೆಂಟ್ ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿದಾಗ ಎಂಡಿಎಂಎ ನಂತೆ ಕಾಣುವ ಬಿಳಿ ಬಣ್ಣದ ಹರಳಿನಂತಿರುವ ಅನುಮಾನಾಸ್ಪದ ಪುಡಿ ಪತ್ತೆಯಾಗಿದೆ.ಈ ಬಗ್ಗೆ ಆಶಿಕ್ ಬಳಿ ವಿಚಾರಿಸಿದಾಗ, ಕಾರಾಗೃಹದಲ್ಲಿ ಮುಂಭಾಗದ ಜೆರಾಕ್ಸ್ ಅಂಗಡಿ ಹತ್ತಿರ ವ್ಯಕ್ತಿಯೊಬ್ಬ ಕೆಲವು ಬೇಕರಿ ತಿಂಡಿಗಳನ್ನು ನೀಡಲಿದ್ದು, ಅದನ್ನು ಅನ್ವಿತ್ ಗೆ ನೀಡುವಂತೆ ಕಾರಾಗೃಹದಲ್ಲಿ ವಿಚಾರಣಾಧೀನ ಕೈದಿಯಾಗಿರುವ ಸಚಿನ್ ತಲಪಾಡಿ ಎಂಬಾತನ ಸೂಚನೆಯಂತೆ ತಂದಿರುವುದಾಗ ಒಪ್ಪಿಕೊಂಡಿದ್ದಾನೆ. ಈ ಬಗ್ಗೆ ಬರ್ಕೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.