ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ನಗರ ಹೊರವಲಯದ ಜಿಲ್ಲಾ ಪ್ರಜಾಸೌಧ ಭವನದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಯಾದವ ಕ್ಷೇಮಾಭಿವೃದ್ಧಿ ಸಂಘ ಸಂಯುಕ್ತಾಶ್ರಯದಲ್ಲಿ ನಡೆದ ಶ್ರೀ ಕೃಷ್ಣನ ಜಯಂತಿಯಲ್ಲಿ ಶ್ರೀ ಕೃಷ್ಣನ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿ, ಹಿಂದೂ ಧರ್ಮೀಯರು ಶ್ರೀ ಕೃಷ್ಣನನ್ನು ಆರಾಧಿಸುವ, ಪೂಜಿಸುವ ಸಂಪ್ರದಾಯವನ್ನು ಅನಾದಿಕಾಲದಿಂದಲೂ ಪಾಲಿಸುತ್ತಿದ್ದಾರೆ. ಧರ್ಮದ ರಕ್ಷಣೆ ಮಾಡಲು ಶ್ರೀ ಕೃಷ್ಣ ಪರಮಾತ್ಮನು ತೆಗೆದುಕೊಂಡ ನಿರ್ಧಾರ ಸತ್ಯದ ದಾರಿಯಾಗಿದೆ. ಜಗತ್ತಿನಲ್ಲಿ ಅಧರ್ಮ ಹೆಚ್ಚಾದಾಗ ಎಲ್ಲಾ ಕಾಲಕ್ಕೂ ‘ಸಂಭವಾಮಿ ಯುಗೇ ಯುಗೇ’ ಎಂದು ಹೇಳಿ ಧರ್ಮೋದ್ಧಾರಕನಾಗಿ, ಜಗದೋದ್ಧಾರಕನಾಗಿ ಶ್ರೀಕೃಷ್ಣ ನಿಂತನು ಎಂದರು.
ಧರ್ಮವನ್ನು ರಕ್ಷಿಸಲು ಭಗವಾನ್ ವಿಷ್ಣುವಿನ 8ನೇ ಅವತಾರವಾಗಿರುವ ಕೃಷ್ಣ, ಸಾವಿರಾರು ಗೋಪಿಕಾ ಸ್ತ್ರೀಯರಿಗೆ ರಕ್ಷಣೆ ಕೊಟ್ಟನು. ಕುರುಕ್ಷೇತ್ರ ಯುದ್ಧದಲ್ಲಿ ಪಾಂಡವರು, ಕೌರವರ ಯುದ್ಧದಲ್ಲಿ ಧರ್ಮ ರಕ್ಷಣೆಗೆ ಪ್ರಮುಖ ಪಾತ್ರ ವಹಿಸುತ್ತಾರೆ. ಅವರು ಸಲಹೆಗಾರ, ಯೋಧ, ರಾಜತಾಂತ್ರಿಕ ಮತ್ತು ಮಾರ್ಗದರ್ಶಕ ಸೇರಿದಂತೆ ಬಹು ಪಾತ್ರಗಳಲ್ಲಿ ಯಶಸ್ವಿಯಾಗಿ ಕಾಣಿಸಿಕೊಳ್ಳುತ್ತಾರೆ. ಒಬ್ಬ ಮಗನಾಗಿ, ಅಣ್ಣನಾಗಿ, ಪತಿಯಾಗಿ, ತಂದೆಯಾಗಿ, ಸಹೋದರನಾಗಿ, ಮಿತ್ರನಾಗಿ ಯಾವ ರೀತಿ ನಡೆದುಕೊಳ್ಳಬೇಕು ಎಂಬುದನ್ನು ಕೃಷ್ಣನ ಜೀವನ ಚರಿತ್ರೆಯನ್ನು ಅರಿಯುವ ಮೂಲಕ ನಾವೆಲ್ಲರೂ ತಿಳಿದುಕೊಳ್ಳಬಹುದಾಗಿದೆ. ಭಗವದ್ಗೀತೆ ಎಲ್ಲರ ಜೀವನದ ಆದರ್ಶವಾಗಬೇಕು. ಶ್ರೀಕೃಷ್ಣ ಚರಿತ್ರೆಯು ಹಾಗೂ ಅವರ ಸಂದೇಶಗಳು ಪ್ರಜಾಸತ್ತಾತ್ಮಕ ಹಾಗೂ ಸಮಸಮಾಜದ ಪರಿಕಲ್ಪನೆಗಳನ್ನು ಬಿಂಬಿಸುತ್ತವೆ. ಸತ್ಯ, ನಿಷ್ಠೆ, ಧರ್ಮವನ್ನು ರಕ್ಷಿಸಿದವರು ಶ್ರೀಕೃಷ್ಣ ಎಂದು ತಿಳಿಸಿದರು.ಶ್ರೀ ಕೃಷ್ಣ ಎಂದರೆ ಸ್ಫೂರ್ತಿ, ಜೀವಂತಿಕೆ, ಶ್ರೀ ಕೃಷ್ಣನನ್ನು ನೆನೆಯುವುದೆ ಒಂದು ಭಾಗ್ಯ. ಇಂದಿಗೂ ಅನೇಕ ತಾಯಂದಿರು ಮನೆಯಲ್ಲಿ ತಮ್ಮ ಚಿಕ್ಕ ಮಕ್ಕಳಿಗೆ ಶ್ರೀ ಕೃಷ್ಣನ ವೇಷ ಹಾಕಿ ಸುಂದರವಾಗಿ ಅಲಂಕರಿಸಿ ಆನಂದಪಡುತ್ತಾರೆ. ಸಂಕಷ್ಟದ ಸಂದರ್ಭಗಳಲ್ಲಿ ‘ಕೃಷ್ಣ ಕೃಷ್ಣ ಹರೇ ಹರೇ’ ಎಂದು ಮನಸ್ಸಿನಲ್ಲಿ ನೆನೆದರೆ ಸಂಕಷ್ಟ ದೂರವಾಗುತ್ತದೆ ಎಂದು ಪ್ರತೀತಿ ಇದೆ. ಸೂರ್ಯ, ಚಂದ್ರ, ಭೂಮಿ ಇರುವವರೆಗೂ ಕೃಷ್ಣನ ಜೀವನ ಚರಿತ್ರೆ, ಆದರ್ಶಗಳು ಸಾರ್ವತ್ರಿಕ ಮತ್ತು ಪ್ರಸ್ತುತವಾಗಿರಲಿವೆ ಎಂದು ಬಣ್ಣಿಸಿದರು.
ಅಪರ ಜಿಲ್ಲಾಧಿಕಾರಿ ಡಾ.ಎನ್.ಭಾಸ್ಕರ್, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಜಗನ್ನಾಥ್ ರೈ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಡಿ.ಎಂ.ರವಿಕುಮಾರ್, ತಹಸೀಲ್ದಾರ್ ರಶ್ಮಿ, ಸಮುದಾಯದ ಮುಖಂಡರಾದ ಕೆ.ಎಂ.ಮುನೇಗೌಡ, ಆರ್.ವೆಂಕಟೇಶ್, ವಿ. ಮನಿಕೃಷ್ಣಪ್ಪ, ವೆಂಕಟೇಶ್, ಶ್ರೀನಿವಾಸ್, ನರಸಪ್ಪ ,ಗೋಪಾಲಪ್ಪ ಹಾಗೂ ವಿವಿಧ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿಗಳು, ಸಿಬ್ಬಂದಿ ವರ್ಗದವರು ಇದ್ದರು.