ಕನ್ನಡಪ್ರಭ ವಾರ್ತೆ ಮೈಸೂರು
ನಾಡಿನ ಕಲೆ, ಇತಿಹಾಸ, ಸಂಸ್ಕೃತಿಯನ್ನು ವಿದ್ಯಾರ್ಥಿಗಳು ತಮ್ಮ ನೃತ್ಯ- ಹಾಡಿನ ಮೂಲಕ ಪರಿಚಯಿಸಿದರು. ಜೊತೆಗೆ ಕನ್ನಡದ ನೆಲ-ಜಲ- ಭಾಷೆ- ಸಾಹಿತ್ಯ-ಸಂಸ್ಕೃತಿ-ರಾಜಮಹಾರಾಜರನ್ನು ಪರಿಚಯಿಸುವ ವಸ್ತು ಪ್ರದರ್ಶನವನ್ನು ಕೂಡ ಏರ್ಪಡಿಸಲಾಗಿತ್ತು.
ನಾಡಗೀತೆ, ಹಚ್ಚೇವು ಕನ್ನಡದ ದೀಪ, ವಿಶ್ವನೂತನ ವಿದ್ಯಾಚೇತನ,, ಹಾಡುಗಳೊಂದಿಗೆ ಆರಂಭವಾದ ಕಾರ್ಯಕ್ರಮ ಓಂಕಾರನಾದ ಹಾಡಿನೊಂದಿಗೆ ಮುಂದುವರಿಯಿತು. ವಿದ್ಯಾರ್ಥಿಗಳು ವೀರಗಾಸೆ, ಡೊಳ್ಳು ಕುಣಿತ, ಕಂಸಾಳೆ, ಕೊಡವರ ವಾಲಗ ನೃತ್ಯ, ಯಕ್ಷಗಾನ ಪ್ರದರ್ಶಿಸಿದರು. ಬಾ ಬಾರಾ ರಣಧೀರ, ಹಾಡು ಸಂತೋಷಕ್ಕೆ, ಕಲ್ಲಾದರೆ ನಾನು ಬೇಲೂರ ಗುಡಿಯಲ್ಲಿ ಇರುವೆ... ಹಾಡಿಗೆ ಹೆಜ್ಜೆ ಹಾಕಿದರು.ರಾಣಿ ಅಬ್ಬಕ್ಕ, ಮಯೂರವರ್ಮ, ಸುಧಾ ಮೂರ್ತಿ, ಶ್ರೀಕೃಷ್ಣದೇವರಾಯ, ಒನಕೆ ಓಬವ್ವ, ಪುರಂದರ ದಾಸರು, ಎಂ.ಕೆ. ಇಂದಿರಾ, ಅಕ್ಕಮಹಾದೇವಿ, ಜಿ.ಪಿ. ರಾಜರತ್ನಂ, ಪಂಡರಿಬಾಯಿ, ಜಾವಗಲ್ ಶ್ರೀನಾಥ್, ಬೆಳವಡಿ ಮಲ್ಲಮ್ಮ, ಗಂಗೂಬಾಯಿ ಹಾನಗಲ್, ಡಾ.ರಾಜ್‌ಕುಮಾರ್, ಕುವೆಂಪು, ಸರ್ ಎಂ. ವಿಶ್ವೇಶ್ವರಯ್ಯ, ಸಂಚಿ ಹೊನ್ನಮ್ಮ , ಆರ್.ಕೆ. ನಾರಾಯಣ್, ಕಿತ್ತೂರು ಚೆನ್ನಮ್ಮ, ನಾಲ್ವಡಿ ಕೃಷ್ಣರಾಜ ಒಡೆಯರ್, ಅನಿಲ್ ಕುಂಬ್ಳೆ, ಕೆಳದಿ ಚೆನ್ನಮ್ಮ, ಬಸವಣ್ಣ, ಸಂಗೊಳ್ಳಿ ರಾಯಣ್ಣ, ಕೆ.ಎಸ್. ನಿಸಾರ್ ಅಹಮದ್, ಸಾಲುಮರದ ತಿಮ್ಮಕ್ಕ, ನಾಡಪ್ರಭು ಕೆಂಪೇಗೌಡ ಅವರ ಛದ್ಮವೇಷಧಾರಿ ಮಕ್ಕಳು ಈ ಎಲ್ಲಾ ಸಾಧಕರ ವ್ಯಕ್ತಿತ್ವವನ್ನು ಅಭಿನಯದ ಮೂಲಕ ಪ್ರದರ್ಶಿಸಿ, ಅಪಾರ ಮೆಚ್ಚುಗೆಗೆ ಪಾತ್ರರಾದರು. ಅದೇ ರೀತಿ ಪುಣಾಣಿಗಳು ಪ್ರದರ್ಶಿಸಿದ ‘ಕನ್ನಡಕ್ಕೆ ಹೋರಾಡು ಕನ್ನಡದ ಕಂದ’... ನೃತ್ಯ ಕೂಡ ಗಮನ ಸೆಳೆಯಿತು.
ಕನ್ನಡ ವಿಭಾಗದ ರಶ್ಮಿ, ಗೀತಾ, ಮಮತಾ, ಕಲಾ ವಿಭಾಗದ ಸೌಮ್ಯಾ ಮತ್ತಿತರು ಅಧ್ಯಾಪಕಿಯರು ವಿದ್ಯಾರ್ಥಿಗಳ ಸಾಂಸ್ಕೃತಿಕ ಹಾಗೂ ಕಲಾ ಪ್ರದರ್ಶನಕ್ಕೆ ಮಾರ್ಗರ್ಶನ ಮಾಡಿದ್ದರು.
ದಿನದ ಮಹತ್ವ ಕುರಿತು ಲಾಲಿತ್ಯ ಮಾತನಾಡಿದರು. ಅಪರಿಚಿತ ಓದುಗರ ಬಳಗದ ದೀಪು, ಶಾಲೆಯ ಅಧ್ಯಾಪಕರು, ಅಧ್ಯಾಪಕೇತರು,ಪೋಷಕರು ಹಾಗೂ ವಿದ್ಯಾರ್ಥಿಗಳು ಇದ್ದರು.